ಲಕ್ನೋ : ರಾಯ್ ಬರೇಲಿ ಲೋಕಸಭಾ ಕ್ಷೇತ್ರದಲ್ಲಿ ಇದೀಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಾಪತ್ತೆಯಾಗಿದ್ದಾರೆ ಎಂದು ಘೋಷಿಸುವ ಪೋಸ್ಟರ್‌ಗಳು ಕಾಣಿಸಿಕೊಂಡಿವೆ.
ರಾಯಬರೇಲಿಯ ಮಹಾನಂದಪುರ, ಗೋರಾ ಬಜಾರ್ ಮತ್ತು ಸರಕಾರಿ ಕಾಲನಿಯಲ್ಲಿ “ಸೋನಿಯಾ ನಾಪತ್ತೆಯಾಗಿದ್ದಾರೆ’ ಎಂದು ಘೋಷಿಸುವ ಡಜನ್‌ಗಟ್ಟಲೆ ಪೋಸ್ಟರ್‌ಗಳು ರಾತ್ರಿ ಬೆಳಗಾಗುವುದರೊಳಗೆ ಕಾಣಿಸಿಕೊಂಡಿವೆ.
ಯುಪಿಎ ಅಧ್ಯಕ್ಷೆ ನಾಪತ್ತೆಯಾಗಿದ್ದಾರೆ; ಹುಡುಕಿಕೊಟ್ಟವರಿಗೆ ಇನಾಮು ಇದೆ ಎಂದು ಈ ಪೋಸ್ಟರ್‌ಗಳು ಹೇಳುತ್ತಿವೆ.
ಸೋನಿಯಾ ಗಾಂಧಿ ಅವರು ಈ ವರ್ಷದಲ್ಲಿ ಈ ತನಕ ತಮ್ಮ ರಾಯಬರೇಲಿ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ; ಅಂತೆಯೇ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಈ ವರ್ಷ ಫೆಬ್ರವರಿಯಿಂದ ತಮ್ಮ ಅಮೇಠಿ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ರಾಹುಲ್ ಗಾಂಧಿ ಅಮೇಠಿಗೆ ಫೆಬ್ರವರಿಯಲ್ಲಿ ಒಮ್ಮೆ ಬಂದಿದ್ದರು.
ಈ ತಿಂಗಳ ಆದಿಯಲ್ಲಿ ಅಮೇಠಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ನಾಪತ್ತೆಯಾಗಿದ್ದಾರೆ ಎಂದು ಘೋಷಿಸುವ ಪೋಸ್ಟರ್‌ಗಳು ಕಾಣಿಸಿಕೊಂಡಿದ್ದವು.