Advertisement

ಹಳ್ಳಿ ರಸ್ತೆ ಕನಸಿಗೆ ಮರುಜೀವ

02:35 PM Jul 09, 2019 | Team Udayavani |

ಹುಬ್ಬಳ್ಳಿ: ಸೇತುವೆ ನಿರ್ಮಿಸಿ ರಸ್ತೆ ಮಾಡಿಕೊಡಿ ಎಂಬುದು ಮೂರು ದಶಕದ ಬೇಡಿಕೆ. ಸಚಿವರು, ಶಾಸಕರು ಹಾಗೂ ಅಧಿಕಾರಿಗಳಿಗೆ ಹತ್ತು ಹಲವು ಮನವಿ ಸಲ್ಲಿಸಿದರೂ ಬೇಡಿಕೆ ಭರವಸೆಯಾಗಿ ಉಳಿದಿದೆ. ಇದೀಗ ಖಾಸಗಿ ಕಂಪನಿಯೊಂದು ರಸ್ತೆ ನಿರ್ಮಾಣಕ್ಕೆ ನೆರವಿನ ಹಸ್ತ ಚಾಚಿದ್ದು, ಸ್ಥಳೀಯರಲ್ಲಿ ಭರವಸೆ ಮೂಡಿಸಿದೆ.

Advertisement

ಕಳೆದ 30 ವರ್ಷಗಳಿಂದ ಬೇಡಿಕೆಯಾಗಿ ಉಳಿದ ಕಲಘಟಗಿ ತಾಲೂಕಿನ ಜಿ.ಬಸವನಕೊಪ್ಪ- ನೀರಸಾಗರ ರಸ್ತೆಯ ಕಥೆಯಿದು.

ಜಿ.ಬಸವನಕೊಪ್ಪದ ಮೂಲಕ ನೀರಸಾಗರ ಹಾಗೂ ಈ ಗ್ರಾಮದಿಂದ ಮುಂದೆ ಸಾಗಲು ಸುಮಾರು 5-6 ಕಿಮೀ ಸುತ್ತುವರಿದು ಸಂಚಾರ ಮಾಡುವಂತಾಗಿದೆ. ಬಹುಬೇಡಿಕೆಯ ರಸ್ತೆ ನಿರ್ಮಾಣವಾದರೆ ಕೇವಲ 1 ಕಿಮೀ ಅಂತರದಲ್ಲಿ ನೀರಸಾಗರದಿಂದ ಬಸನವಕೊಪ್ಪ ಗ್ರಾಮ ತಲುಪಬಹುದಾಗಿದೆ. ತುರ್ತು ಸಂದರ್ಭದಲ್ಲಿ ಕಿರಿದಾದ ರಸ್ತೆಯಲ್ಲಿ ಸುತ್ತಾಡಿಕೊಂಡು ಓಡಾಡುವುದು ದುಸ್ತರವಾಗಿದ್ದು, ಕಡಿಮೆ ಅಂತರದಲ್ಲಿರುವ ರಸ್ತೆ ನಿರ್ಮಿಸಬೇಕು ಎಂಬುದು ನೀರಸಾಗರ ಗ್ರಾಮದ ಜನರ ಮೂರು ದಶಕದ ಬೇಡಿಕೆಯಾಗಿದೆ.

ಬೇಡಿಕೆಯಾಗಿ ಉಳಿದ ಭರವಸೆ: ಕೇವಲ ಒಂದು ಕಿಮೀ ರಸ್ತೆಯಾಗಿದ್ದರೂ ಇದಕ್ಕೆ ಅಧಿಕ ವೆಚ್ಚ ತಗುಲಲಿದೆ ಎನ್ನುವ ಕಾರಣಕ್ಕೆ ರಾಜ್ಯ ಸರಕಾರ ಮನಸ್ಸು ಮಾಡುತ್ತಿಲ್ಲ. ಎರಡು ಸೇತುವೆ ಸೇರಿದಂತೆ 1.5 ಕಿಮೀ ಉದ್ದದ ರಸ್ತೆ ನಿರ್ಮಾಣಕ್ಕೆ 3.4 ಕೋಟಿ ರೂ. ವೆಚ್ಚವಾಗಲಿದೆ ಎಂದು 2013ರಲ್ಲಿ ಪಂಚಾಯತರಾಜ್‌ ಎಂಜಿನಿಯರಿಂಗ್‌ ಇಲಾಖೆ ಅಧಿಕಾರಿಗಳು ಅಂದಾಜು ವರದಿ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿದ್ದರು. ಈ ರಸ್ತೆ ನಿರ್ಮಾಣದಿಂದ ನೀರಸಾಗರ, ಕಳಸನಕೊಪ್ಪ, ಡೊಂಬ್ರಿಕೊಪ್ಪ, ಗಳಗಿ ಹುಲಕೊಪ್ಪ ಹಾಗೂ ಕನ್ನೆನಾಯಕನಕೊಪ್ಪದ ಜನರು ಸುಮಾರು 5-6 ಕಿಮೀ ಸುತ್ತಾಡಿಕೊಂಡು ಹೋಗುವುದು ತಪ್ಪಲಿದೆ ಎಂದು ವರದಿಯಲ್ಲಿ ನಮೂದಿಸಲಾಗಿತ್ತು.

ಅಧಿಕಾರಿಗಳು ತಯಾರಿಸಿದ ಅಂದಾಜು ಪತ್ರಿಕೆ ಸಮೇತ ಸಂಸದರಾಗಿದ್ದ ಪ್ರಹ್ಲಾದ ಜೋಶಿ ಸೇರಿದಂತೆ ಸ್ಥಳೀಯ ಶಾಸಕರು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತರಾಜ ಸಚಿವರಾಗಿದ್ದ ಕೆ.ಎಸ್‌ .ಈಶ್ವರಪ್ಪ ಅವರಿಗೆ ಮನವಿ ಮಾಡಿದ್ದರು. ನಂತರದಲ್ಲಿಯೂ ಸತತ ಪ್ರಯತ್ನಗಳು ನಡೆದರೂ ಯಾರಿಂದಲೂ ಸಕಾರಾತ್ಮಕ ಸ್ಪಂದನೆ ದೊರೆಯಲಿಲ್ಲ. ನಮ್ಮ ಬೇಡಿಕೆ ಕೇವಲ ಭರವಸೆಯಾಗಿ ಉಳಿದಿದೆ ಎಂಬುದು ಗ್ರಾಮಸ್ಥರ ಹತಾಶೆ ನುಡಿಗಳು.

Advertisement

ವರವಾದ ಯೋಜನೆ: ನೀರಸಾಗರ ಕೆರೆಯ ಹೂಳೆತ್ತಲು ಟಾಟಾ ಹಿಟಾಚಿ ಕಂಪನಿ ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಯೋಜನೆಯಲ್ಲಿ ಮುಂದಾಗಿತ್ತು. ಆದರೆ ಸತತ ಮಳೆ ಹಾಗೂ ಬಿತ್ತನೆ ಹಿನ್ನೆಲೆಯಲ್ಲಿ ಕೆರೆ ಮಣ್ಣು ಬಳಕೆಗೆ ರೈತರು ಹಿಂದೇಟು ಹಾಕಿದ್ದರು. ಹೀಗಾಗಿ ಯೋಜನೆಗೆ ಬಂದಿದ್ದ ಹಿಟಾಚಿಯನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ರಸ್ತೆ ನಿರ್ಮಾಣಕ್ಕೆ ಬಳಸಿಕೊಳ್ಳುವ ಗ್ರಾಮಸ್ಥರ ಮನವಿ ಮೇರೆಗೆ ಕಂಪನಿಯ ಅಧಿಕಾರಿಗಳು ಹಿಟಾಚಿಯೊಂದಿಗೆ ಐದು ಟ್ರ್ಯಾಕ್ಟರ್‌ ಬಾಡಿಗೆ ಪಡೆದು ವ್ಯವಸ್ಥೆ ಕಲ್ಪಿಸಿದ್ದಾರೆ. ಸೇತುವೆ ನಿರ್ಮಾಣ ಮಾಡಬೇಕಾದ ಸ್ಥಳದಲ್ಲಿರುವ ಹೊಂಡವನ್ನು ಕೆರೆಯ ಮಣ್ಣಿನಿಂದ ತುಂಬಿಸುವ ಕೆಲಸ ಭರದಿಂದ ನಡೆಯುತ್ತಿದೆ. ಹೂಳೆತ್ತುವ ಯೋಜನೆ ಕೈಗೂಡದಿರುವುದು ಮೂರು ದಶಕಗಳಿಂದ ಬೇಡಿಕೆಯಾಗಿ ಉಳಿದಿರುವ ರಸ್ತೆ ನಿರ್ಮಾಣಕ್ಕೆ ಸಹಕಾರಿಯಾದಂತಾಗಿದೆ.

ಎರಡು ಸೇತುವೆ ನಿರ್ಮಾಣದಿಂದ ವೆಚ್ಚ ಹೆಚ್ಚಾಗಲಿದ್ದು, ಒಂದು ಸೇತುವೆ ಬದಲು ಮಣ್ಣು ತುಂಬಿಸಿದರೆ ಯೋಜನೆ ಕೈಗೂಡಬಹುದು ಎಂಬುದು ಗ್ರಾಮಸ್ಥರ ಲೆಕ್ಕಚಾರ. ಆದರೆ ಹಿಟಾಚಿಯೊಂದಿಗೆ ನಿತ್ಯ ಐದು ಟ್ರ್ಯಾಕ್ಟರ್‌ಗಳ ಬಾಡಿಗೆ ದುಬಾರಿಯಾಗುತ್ತಿದ್ದು, ಮುಂದುವರಿಸಲು ಅಸಾಧ್ಯ ಎಂಬುದು ಕಂಪನಿ ಅಧಿಕಾರಿಗಳ ಅಭಿಪ್ರಾಯವಾಗಿದೆ. ಹೊಂಡ ಮುಚ್ಚುವವರೆಗೆ ನೆರವು ನೀಡಿದರೆ ಅನುಕೂಲವಾಗುತ್ತದೆ ಎಂಬುವುದು ಗ್ರಾಮಸ್ಥರ ಮನವಿಯಾಗಿದೆ.

2013ರಲ್ಲಿ ರಸ್ತೆ ನಿರ್ಮಾಣ ವಿಚಾರದಲ್ಲಿ ಸಂಸದರಾಗಿದ್ದ ಪ್ರಹ್ಲಾದ ಜೋಶಿ ಸಾಕಷ್ಟು ಕಾಳಜಿ ತೋರಿದ್ದರು. ಇದೀಗ ಅವರು ಕೇಂದ್ರ ಸಚಿವರಾಗಿದ್ದು, ನಮ್ಮ ಬೇಡಿಕೆ ಈಡೇರಲಿದೆ ಎನ್ನುವ ಭರವಸೆ ಜನರಲ್ಲಿ ಮೂಡಿದೆ. ಈ ನಿಟ್ಟಿನಲ್ಲಿ ಶಾಸಕ ಸಿ.ಎಂ. ನಿಂಬಣ್ಣವರ ಪ್ರಯತ್ನಿಸಲಿ ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

 

•ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next