Advertisement

ದಶಕದ ಬೇಡಿಕೆಗೆ ಮರುಜೀವ

02:04 AM Feb 24, 2021 | Team Udayavani |

ಏಳು ಜಿಲ್ಲೆಗಳ ಪರಿಸ್ಥಿತಿ ಹೇಗಿದೆ?
ರಾಜ್ಯದ 31 ಜಿಲ್ಲೆಗಳ ಪೈಕಿ ಮುಂಬಯಿ ಕರ್ನಾಟಕ ಪ್ರಾಂತ್ಯದಲ್ಲಿ ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಸೇರಿ ಏಳು ಜಿಲ್ಲೆಗಳು ಬರುತ್ತವೆ. ಡಾ|ಡಿ.ಎಂ. ನಂಜುಂಡಪ್ಪ 2000ನೇ ಇಸವಿಯಲ್ಲಿ ನೀಡಿದ ವರದಿ ಪ್ರಕಾರ ಅತ್ಯಂತ ಹಿಂದುಳಿದ 5, ಅತೀ ಹಿಂದುಳಿದ 11, ಹಿಂದುಳಿದ 14 ಹಾಗೂ ಅಭಿವೃದ್ಧಿ ಹೊಂದಿದ 18 ತಾಲೂಕುಗಳು ಈ ಪ್ರಾಂತ್ಯದಲ್ಲಿವೆ. ಅತ್ಯಂತ ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿದ್ದ ಬಾಗಲಕೋಟೆ ಜಿಲ್ಲೆ ಬೀಳಗಿ ಹೊರತುಪಡಿಸಿದರೆ ವಿಜಯಪುರ ಜಿಲ್ಲೆಯ ಇಂಡಿ, ಸಿಂದಗಿ, ಮುದ್ದೇಬಿಹಾಳ ಹಾಗೂ ಬಸವನಬಾಗೇವಾಡಿ ಈಗಲೂ ಅತ್ಯಂತ ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿಯೇ ಇವೆ. ಅತೀ ಹಿಂದುಳಿದ ಪಟ್ಟಿಯಲ್ಲಿರುವ ಅಥಣಿ, ಗೋಕಾಕ, ಬಾದಾಮಿ, ಸವದತ್ತಿ, ಕಲಘಟಗಿ, ಶಿಗ್ಗಾಂವಿ, ಸವಣೂರು, ಹಾನಗಲ್‌ ಹಾಗೂ ಜೋಯಿಡಾ ತಾಲೂಕುಗಳು ಹಾಗೆಯೇ ಉಳಿದುಕೊಂಡಿವೆ. ಹುನಗುಂದ ಮತ್ತು ಮುಂಡರಗಿ ತಾಲೂಕುಗಳು ಸ್ವಲ್ಪ ಮಟ್ಟಿನ ಅಭಿವೃದ್ಧಿ ಕಂಡಿದ್ದು ಹಿಂದುಳಿದ ಪಟ್ಟಿಗೆ ಸೇರ್ಪಡೆಯಾಗಿವೆ. ಇನ್ನು ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿನ ಅಂಕೋಲಾ, ಸಿದ್ದಾಪುರ, ಬ್ಯಾಡಗಿ, ಹಾವೇರಿ, ನರಗುಂದ, ನವಲಗುಂದ, ಬೀಳಗಿ ಹಾಗೂ ವಿಜಯಪುರ ಜಿಲ್ಲೆಗಳು ಅಭಿವೃದ್ಧಿಯತ್ತ ಮುಖ ಮಾಡಿದ್ದು, ಅಭಿವೃದ್ಧಿ ಸೂಚ್ಯಂಕ ಹೆಚ್ಚಳವಾಗಿದೆ.

Advertisement

ಮುಂಬಯಿ ದಾಸ್ಯದ ಸಂಕೇತ; ಕಿತ್ತೂರಾಗಲಿ ಮುಂಬಯಿ
ಬೆಳಗಾವಿ: ಸ್ವಾತಂತ್ರ್ಯ ಬಂದು 74 ವರ್ಷಗಳಾದರೂ ರಾಜ್ಯದ ಉತ್ತರ ಭಾಗದ ಏಳು ಜಿಲ್ಲೆಗಳ ಪ್ರಾಂತ್ಯವನ್ನು ಮುಂಬಯಿ ಕರ್ನಾಟಕ ಎಂದೇ ಕರೆಯುತ್ತಿದ್ದೇವೆ. ಇದೊಂದು ದಾಸ್ಯದ ಸಂಕೇತ ಎಂದು ಸಾಕಷ್ಟು ಬಾರಿ ಖ್ಯಾತ ಸಂಶೋಧಕ ಡಾ|ಚಿದಾನಂದ ಮೂರ್ತಿ ಮತ್ತು ನಾಡೋಜ ಪಾಟೀಲ ಪುಟ್ಟಪ್ಪ ಹೇಳುತ್ತಲೇ ಇದ್ದರು.

ನಾವು ಮುಂಬಯಿ ಕರ್ನಾಟಕ ಎಂದು ಕರೆಯುತ್ತಲೇ ಹೋದರೆ ಅದು ಮಹಾರಾಷ್ಟ್ರಕ್ಕೆ ಅನುಕೂಲ ಮಾಡಿಕೊಟ್ಟಂತೆ. ಹಿಂದೆ ಬ್ರಿಟಿಷರ ದಾಸ್ಯದಲ್ಲಿದ್ದೆವು. ಅನಂತರ ಅದರಿಂದ ಮುಕ್ತಿ ಸಿಕ್ಕಿತು. ಈಗ ಮತ್ತೆ ಅಂತಹ ಪರಿಸ್ಥಿತಿ ನಾವು ತಂದುಕೊಳ್ಳುವುದು ಬೇಡ. ಇದರ ಬದಲಾಗಿ ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಿ ಎಂದು ಹೇಳುತ್ತಲೇ ಇದ್ದರು. ಆದರೆ ಸರಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ. ಮುಂಬಯಿ ಕರ್ನಾಟಕದ ಇತಿಹಾಸವನ್ನು ಸಂಕ್ಷಿಪ್ತವಾಗಿ ಹೇಳುವದಾದರೆ ಮುಂಬಯಿ ಕರ್ನಾಟಕ ಎಂದು ಹೆಸರು ಬಂದಿದ್ದು ಬ್ರಿಟಿಷರ ಕಾಲದಲ್ಲಿ. ಆಗ ರಾಜ್ಯಗಳ ಪರಿಕಲ್ಪನೆಯೇ ಇರಲಿಲ್ಲ. ಬ್ರಿಟಿಷರು ತಮ್ಮ ಆಡಳಿತದ ಅನುಕೂಲಕ್ಕಾಗಿ ಪ್ರಾಂತ್ಯಗಳನ್ನು ರಚನೆ ಮಾಡಿಕೊಂಡಿದ್ದರು. ಅದರಂತೆ ಮುಂಬಯಿ, ಹೈದರಾಬಾದ್‌, ಮದ್ರಾಸ್‌ ಪ್ರಾಂತ್ಯ ಎಂದು ಅಸ್ತಿತ್ವಕ್ಕೆ ಬಂದಿದ್ದವು. ಆಗ ಮುಂಬಯಿ ಪ್ರಾಂತ್ಯದಲ್ಲಿ ಬೆಳಗಾವಿ, ಅವಿಭಜಿತ ಧಾರವಾಡ, ವಿಜಯಪುರ ಹಾಗೂ ಕಾರವಾರ ಜಿಲ್ಲೆಗಳಿದ್ದವು. ಹೈದರಾಬಾದ್‌ ಪ್ರಾಂತ್ಯದಲ್ಲಿ ಬೀದರ, ಬಳ್ಳಾರಿ, ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಿದ್ದವು.
1920ರಲ್ಲಿ ಕರ್ನಾಟಕ ಏಕೀಕರಣದ ಪರಿಕಲ್ಪನೆ ಜೀವ ತಳೆಯಿತು. ಹರಿದು ಹಂಚಿಹೋಗಿದ್ದ ಕರ್ನಾಟಕದ ಪ್ರದೇಶಗಳನ್ನು ಒಂದುಗೂಡಿಸುವ ಚಿಂತನೆ ಈ ಅವಧಿಯಲ್ಲಿ ಗಟ್ಟಿಯಾಗಿ ಮೇಲೆದ್ದಿತು. 1956ರಲ್ಲಿ ಕರ್ನಾಟಕ ಏಕೀಕರಣವಾದ ಅನಂತರ ಕರ್ನಾಟಕಕ್ಕೆ ಮುಂಬಯಿ ಪ್ರಾಂತ್ಯದಿಂದ ಬಿಡುಗಡೆ ಸಿಕ್ಕಿತು. ಆದರೆ ಆ ಹೆಸರಿನಿಂದ ಇನ್ನೂ ಸಿಕ್ಕಿಲ್ಲ. ಖ್ಯಾತ ಸಂಶೋಧಕ ಡಾ|ಎಂ.ಚಿದಾನಂದ ಮೂರ್ತಿ ಅವರು ಹೈದರಾಬಾದ್‌ ಕರ್ನಾಟಕ ಮತ್ತು ಮುಂಬಯಿ ಕರ್ನಾಟಕದ ಬದಲು ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕದ ಪರಿಕಲ್ಪನೆ ಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next