ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ವಿವಾದಕ್ಕೆ ಗುರಿಯಾಗಿ ಕೈಬಿಡಲಾಗಿದ್ದ “ತೆರೆದ ಪುಸ್ತಕ ಪರೀಕ್ಷೆ’ ಯನ್ನು (ಓಪನ್ ಬುಕ್ ಎಕ್ಸಾಂ) ಈ ಬಾರಿ ಜಾರಿಗೆ ತರಲು ಶಿಕ್ಷಣ ಇಲಾಖೆ ಮುಂದಾಗಿದೆ. ಯಾವುದೇ ಮುಖ್ಯ ಪರೀಕ್ಷೆ ಯಲ್ಲಿ ಈ ಕ್ರಮ ವನ್ನು ಅನುಸರಿ ಸದೆ, ಶೈಕ್ಷಣಿಕ ಚಟುವಟಿಕೆಯ ಒಂದು ಭಾಗವಾಗಿ ಮಾತ್ರ ನಡೆಸಲಾಗುತ್ತಿದೆ.
ಫಲಿತಾಂಶ ಸುಧಾರಣೆಗಾಗಿ 8, 9 ಮತ್ತು 10ನೇ ತರಗತಿಗಳಿಗೆ ಅನಿರೀಕ್ಷಿತ ಪರೀಕ್ಷೆ, ಕೇಂದ್ರೀಕೃತ ಮೌಲ್ಯಮಾಪನ ವ್ಯವಸ್ಥೆ, ಮುಂತಾದವುಗಳನ್ನು ಈ ಬಾರಿ ಪ್ರಾಯೋಗಿಕವಾಗಿ ಅನು ಷ್ಠಾನ ಮಾಡುವಂತೆ ಶಿಕ್ಷಣ ಇಲಾಖೆ 2022-23ನೇ ಸಾಲಿನ ಮಾರ್ಗ ಸೂಚಿಯಲ್ಲಿ ತಿಳಿಸಿದೆ.
ತೆರೆದ ಪುಸ್ತಕ ಪರೀಕ್ಷೆ
ಈಗಾಗಲೇ ಪಾಶ್ಚಿಮಾತ್ಯ ದೇಶಗಳಲ್ಲಿ ತೆರೆದ ಪುಸ್ತಕ ಪರೀಕ್ಷೆ ಚಾಲ್ತಿಯಲ್ಲಿದೆ. ಅದೇ ಯೋಜನೆಯನ್ನು ರಾಜ್ಯದಲ್ಲೂ ಜಾರಿಗೊಳಿಸಲು ಸಮ್ಮಿಶ್ರ ಸರಕಾರದಲ್ಲಿ (ಕಾಂಗ್ರೆಸ್ ಜೆಡಿಎಸ್) ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿದ್ದ ಎನ್. ಮಹೇಶ್ ಚಿಂತಿಸಿದ್ದರು. ಆದರೆ ಭಾರೀ ವಿರೋಧ ವ್ಯಕ್ತವಾದ ಕಾರಣ ಕೈಬಿಡಲಾಗಿತ್ತು.
ಈಗ ಅದನ್ನು ಶಿಕ್ಷಣ ಇಲಾಖೆಯು ಫಲಿತಾಂಶ ಸುಧಾರಣ ಅಂಶವಾಗಿ ಪರಿಗಣಿಸಿದೆ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿಷಯವಾರು 25 ಅಂಕಗಳಿಗೆ ಪ್ರಶ್ನೆಪತ್ರಿಕೆ ತಯಾರಿಸಿ ಸಮಯ ನಿಗದಿ ಮಾಡಿ ತೆರೆದ ಪುಸ್ತಕ ಪರೀಕ್ಷೆ ನಡೆಸಬೇಕು. ಈ ಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವನ್ನು ಓದುವ ಅಭ್ಯಾಸ ಮತ್ತು ಪುಸ್ತಕ ಓದಿನ ಅನಿವಾರ್ಯವನ್ನು ಸೃಷ್ಟಿಸಿ ಫಲಿತಾಂಶ ಸುಧಾರಣ ಚಟುವಟಿಕೆಯಾಗಿ ಮಾಡುವಂತೆ ತಿಳಿಸಲಾಗಿದೆ.
Related Articles
ದಿಢೀರ್ ಪರೀಕ್ಷೆ, ವಿದ್ಯಾರ್ಥಿಗಳಿಂದಲೇ ಮೌಲ್ಯಮಾಪನ
ಜತೆಗೆ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ದಿಢೀರ್ ಆಗಿ ಕಿರು ಪರೀಕ್ಷೆಯನ್ನು ತರಗತಿ ಅವಧಿಯಲ್ಲಿ (45 ನಿಮಿಷಗಳಿಗೆ) ನಡೆಸಬೇಕು. ಪರೀಕ್ಷೆ ಮುಗಿದ ಬಳಿಕ ಉತ್ತರ ಪತ್ರಿಕೆಗಳನ್ನು ವಿದ್ಯಾರ್ಥಿಗಳಿಂದಲೇ ಮೌಲ್ಯಮಾಪನ ಮಾಡಿಸಬೇಕು. ಆ ಮೂಲಕ ಮೌಲ್ಯಮಾಪನದ ತಿಳಿವಳಿಕೆ ನೀಡಬೇಕು. ಇದರಿಂದ ಪರೀಕ್ಷೆಯಲ್ಲಿ ಯಾವ ರೀತಿ ಉತ್ತರ ಬರೆಯಬೇಕು ಮತ್ತು ಅಂಕಗಳು ಹೇಗೆ ಸಿಗುತ್ತವೆ ಎಂಬ ಬಗ್ಗೆಯೂ ತಿಳಿಸುವಂತೆ ಸೂಚಿಸಲಾಗಿದೆ.
ಕೇಂದ್ರೀಕೃತ ಮೌಲ್ಯಮಾಪನ
ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವಂತೆ ಪ್ರತಿ ತಾಲೂಕು ಹಂತದಲ್ಲಿ ಅಣಕು ಪರೀಕ್ಷೆ ನಡೆಸಿ ಅದನ್ನು ಕೇಂದ್ರೀಕೃತ ಮೌಲ್ಯಮಾಪನ ಮಾಡಿಸುವಂತೆ ತಿಳಿಸಲಾಗಿದೆ. ತಾಲೂಕುವಾರು ಕೇಂದ್ರ ಸ್ಥಾನದಲ್ಲಿ ಒಂದು ಶಾಲೆಯನ್ನು ಮೌಲ್ಯಮಾಪನ ಕೇಂದ್ರವಾಗಿ ಗುರುತಿಸಿ ಪರೀಕ್ಷೆ ನಡೆಸುವುದು ಅಯಾ ದಿನದ ಉತ್ತರ ಪತ್ರಿಕೆಗಳನ್ನು ಮರು ದಿನ ಸಂಬಂಧಿಸಿದ ವಿಷಯ ಬೋಧಕರು ಬೇರೊಂದು ಶಾಲೆಯ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವ ಮೂಲಕ ಫಲಿತಾಂಶ ಸುಧಾರಿಸುವ ಪ್ರಾಯೋಗಿಕ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ.
ತೆರೆದ ಪುಸ್ತಕ
ಪರೀಕ್ಷೆ ಎಂದರೇನು?
ವಿದ್ಯಾರ್ಥಿಗಳು ಪಠ್ಯಪುಸ್ತಕವನ್ನು ನೋಡಿ ಪರೀಕ್ಷೆಗೆ ಉತ್ತರ ಬರೆಯುವ ಕ್ರಮವಿದು. ಪರೀಕ್ಷೆಗೆ ಮೊದಲು ಸರಿಯಾಗಿ ಓದಿದ್ದರೆ ಮಾತ್ರ ಉತ್ತರಿ ಸಲು ಸಾಧ್ಯ. ಇದರಲ್ಲಿ ಪ್ರಶ್ನೆಗಳು ನೇರವಾಗಿರುವುದೂ ಕಡಿಮೆ.
ತೆರೆದ ಪುಸ್ತಕ ಪರೀಕ್ಷಾ ಕ್ರಮ ಸಹಿತ ಹಲವು ನೂತನ ಆವಿಷ್ಕಾರ ಕ್ರಮಗಳನ್ನು ಪರಿಗಣಿಸಲು ಸಲಹೆ ನೀಡ ಲಾಗಿದೆ. ಈ ಕ್ರಮ ಅನುಸರಿಸುವುದರಿಂದ ವಿದ್ಯಾರ್ಥಿಗಳು ಪಠ್ಯಪುಸ್ತಕ ಓದುವಂತೆ ಮಾಡುವುದು ಉದ್ದೇಶ.
-ಕೃಷ್ಣಾಜಿ ಎಸ್. ಕರಿಚಣ್ಣನವರ್, ಪ್ರೌಢಶಿಕ್ಷಣ ನಿರ್ದೇಶಕ