Advertisement

ಸ್ಮಗ್ಲರ್‌ಗೆ ಪುನರುಜ್ಜೀವನ!

07:15 AM Dec 08, 2017 | Harsha Rao |

ನಾಯಕಿ ಕಮ್‌ ನಿರ್ದೇಶಕಿ ಪ್ರಿಯಾ ಹಾಸನ್‌ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಹಾಗಂತ ಅವರೇನಾದರೂ ಹೊಸ ಚಿತ್ರಕ್ಕೆ ಕೈ ಹಾಕಿ ಬಿಟ್ಟರಾ ಅಂತಂದುಕೊಳ್ಳುವಂತಿಲ್ಲ. ಕೆಲವು ವರ್ಷಗಳ ಹಿಂದೆ ಶುರುವಾಗಿದ್ದ “ಸ್ಮಗ್ಲರ್‌’ ಚಿತ್ರವನ್ನೀಗ ಬಿಡುಗಡೆ ಮಾಡುವ ಮೂಲಕ ಸುದ್ದಿಯಾಗುತ್ತಿದ್ದಾರಷ್ಟೇ. ಹೌದು, “ಸ್ಮಗ್ಲರ್‌’ ಈ ವಾರ ರಾಜ್ಯಾದ್ಯಂತ ಸುಮಾರು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ. 

Advertisement

ಬಿಡುಗಡೆ ಕುರಿತು ಹೇಳಲೆಂದೇ ಪತ್ರಕರ್ತರ ಮುಂದೆ ಬಂದಿದ್ದರು ಪ್ರಿಯಾ ಹಾಸನ್‌. “ನಮ್ಮ ಬ್ಯಾನರ್‌ನ ಮೂರನೇ ಚಿತ್ರವಿದು. “ಜಂಬದ ಹುಡುಗಿ’, “ಬಿಂದಾಸ್‌ ಹುಡುಗಿ’ ಬಳಿಕ “ಸ್ಮಗ್ಲರ್‌’ ನಿರ್ಮಿಸಿದ್ದೇವೆ. ಆ ಎರಡು ಚಿತ್ರಗಳಿಗಿಂತ ಇದು ಹೆಚ್ಚು ಬಜೆಟ್‌ನ ಚಿತ್ರ. ತೆಲುಗು, ತಮಿಳು, ಹಿಂದಿ ಭಾಷೆಯ ಕಲಾವಿದರು ನಟಿಸಿದ್ದಾರೆ. ನುರಿತ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಚಿತ್ರ ತಡವಾಗಿದೆ. ಅದಕ್ಕೆ ಕಾರಣ ಹಲವು. ನನ್ನ ತಾಯಿ ನಿಧನರಾದ ಬಳಿಕ ನಾನು ತುಂಬಾ ಬೇಸರದಲ್ಲಿದ್ದೆ. ಈಗಲೂ ಆ ಶಾಕ್‌ನಿಂದ ಹೊರಬರಲಾಗಿಲ್ಲ. ಚಿತ್ರದ ಬಗ್ಗೆಯೂ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಪತಿ ರಾಮ್‌ ಅವರು ಈಗ ನನ್ನ ಬೆನ್ನ ಹಿಂದೆ ನಿಂತು, ಸಹಕಾರ ಕೊಟ್ಟಿದ್ದಕ್ಕೆ ಪುನಃ ನಾನು ಚಿತ್ರರಂಗದಲ್ಲಿ ತೊಡಗಿಸಿಕೊಳ್ಳುತ್ತಿದ್ದೇನೆ’ ಅಂದರು ಪ್ರಿಯಾ.

“ಇಲ್ಲಿ ಐದು ಫೈಟ್ಸ್‌ಗಳಿವೆ. ಕೌರವ ವೆಂಕಟೇಶ್‌, ರಾಜೇಶ್‌ ಕಣ್ಣನ್‌ ತುಂಬಾ ರಿಸ್ಕೀ ಸ್ಟಂಟ್ಸ್‌ ಮಾಡಿಸಿದ್ದಾರೆ. ಇದೇ ಮೊದಲ ಸಲ ನಾನು ಇಲ್ಲಿ ಹಾಡಿದ್ದೇನೆ. ನಾಯಕಿ, ನಿರ್ದೇಶಕಿಯ ಜತೆಗೆ ಗಾಯಕಿಯೂ ಆಗಿದ್ದು ಖುಷಿಯ ವಿಷಯ. ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಇದ್ದರೆ, ಮುಂದೆಯೂ ಸಿನಿಮಾ ಮಾಡ್ತೀನಿ. ಫೆಬ್ರವರಿಯಲ್ಲಿ “ಗಂಡುಬೀರಿ’ ಚಿತ್ರ ಸೆಟ್ಟೇರಲಿದೆ. “ಸ್ಮಗ್ಲರ್‌’ ಚಿತ್ರವನ್ನು ರಾಜ್‌ಫಿಲ್ಮ್ಸ್ ಮೂಲಕ ನಾನೇ ವಿತರಣೆ ಮಾಡುತ್ತಿದ್ದೇನೆ’ ಅಂತ ವಿವರ ಕೊಟ್ಟರು ಪ್ರಿಯಾ.

ಚಿತ್ರಕ್ಕೆ ಚಕ್ರಿ ಸಂಗೀತ ನೀಡಿದ್ದಾರೆ. ವೀರು ಅವರು ನಿರ್ದೇಶನದಲ್ಲಿ ಸಾಥ್‌ ನೀಡಿದ್ದಾರೆ. ಗೌರಮ್ಮ- ಪ್ರಿಯಾಹಾಸನ್‌ ನಿರ್ಮಾಣವಿದೆ. ಅಂದು ದಿನೇಶ್‌ಕುಮಾರ್‌, ರಾಮ್‌ ಮತ್ತು ಪ್ರಿಯಾ ಹಾಸನ್‌ ಸಹೋದರ ಬಾಲಕೃಷ್ಣ ಅವರು “ಸ್ಮಗ್ಲರ್‌’ ತಂಡಕ್ಕೆ ಶುಭಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next