ವದೆಹಲಿ: ಬಿಎಸ್‌ಎನ್‌ಎಲ್ ಅನ್ನು ಪುನಶ್ಚೇತನಗೊಳಿಸಲಾಗುತ್ತದೆಯೇ, ಇಲ್ಲವೇ ಎಂಬ ಪ್ರಶ್ನೆಗಳು ಎದ್ದಿರುವಂತೆಯೇ ಸರ್ಕಾರದ ವತಿಯಿಂದಲೇ ಅದಕ್ಕೆ ಬಂಡವಾಳದ ಶಕ್ತಿ ನೀಡಲಾಗುತ್ತದೆ ಎಂಬ ಮಾಹಿತಿ ಹೊರಬಿದ್ದಿದೆ. ಕೇಂದ್ರ ದೂರಸಂಪರ್ಕ ಖಾತೆ ಸಚಿವ ರವಿಶಂಕರ ಪ್ರಸಾದ್ ಮತ್ತು ಸಹಾಯಕ ಸಚಿವ ಸಂಜಯ ಶ್ಯಾಮರಾವ್ ಭೋತ್ರೆ ರಾಜ್ಯಸಭೆಯಲ್ಲಿ ಗುರುವಾರ ಈ ಮಾಹಿತಿ ನೀಡಿದ್ದಾರೆ.
ದೂರಸಂಪರ್ಕ ಕ್ಷೇತ್ರದಲ್ಲಿ ಸ್ಥಿರತೆ ಸಾಧಿಸಲು ಸಾರ್ವಜನಿಕ ಸ್ವಾಮ್ಯದ ಸಂಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ. ವಿಶ್ವದ ಇತರ ಭಾಗಗಳಿಗೆ ಹೋಲಿಸಿದರೆ, ಮೊಬೈಲ್ ಡೇಟಾಕ್ಕೆ ಕಡಿಮೆ ದರವೇ ಇದೆ ಎಂದಿದ್ದಾರೆ. ಸಚಿವ ಭೋತ್ರೆ ಮಾತನಾಡಿ, ಬಿಎಸ್ಸೆನ್ನೆಲ್ಗೆ ವಿತ್ತೀಯ ನೆರವು ನೀಡುವ ಬಗ್ಗೆ ಪ್ರಸ್ತಾಪವಿದೆ. ಅಲ್ಲದೆ, 55 ಸಾವಿರ ಉದ್ಯೋಗಿಗಳನ್ನು ತೆಗೆದು ಹಾಕುವ ಇರಾದೆ ಸರ್ಕಾರಕ್ಕೆ ಇಲ್ಲ ಎಂದಿದ್ದಾರೆ.
ಚೀನಾ ಗಡಿಗೆ ಐಎಂಸ್ಯಾಟ್: ಚೀನಾ ಗಡಿಗುಂಟ ಇರುವ 496 ಗ್ರಾಮಗಳಿಗೆ ಐಎಂಸ್ಯಾಟ್ ಉಪಗ್ರಹ (IMSAT satellite) ಮೂಲಕ ಲಿಂಕ್ ಮಾಡಲು ಉದ್ದೇಶಿಸಲಾಗಿದೆ. ಮೇ 13ರಂದು ಎನ್‌ಎಸ್‌ಎಸ್-6 ಉಪಗ್ರಹದ ಟ್ರಾನ್ಸ್‌ಪಾಂಡರ್ ಸ್ವಿಚ್ಆಫ್ ಬಳಿಕ ಭದ್ರತಾ ವ್ಯವಸ್ಥೆ ಸೇರಿದಂತೆ ಸಂಪರ್ಕ ವ್ಯವಸ್ಥೆಗೆ ತೊಂದರೆಯಾಗಿತ್ತು.
ಇ-ಪಾಸ್‌ಪೋರ್ಟ್: ಅತ್ಯಾಧುನಿಕ ಭದ್ರತಾ ವ್ಯವಸ್ಥೆಗಳನ್ನು ಒಳಗೊಂಡ ಇ-ಪಾಸ್‌ಪೋರ್ಟ್‌ಗಳನ್ನು ಶೀಘ್ರವೇ ಪರಿಚಯಿಸಲಾಗುವುದು ಎಂದು ಸಚಿವ ವಿ.ಮುರಳೀಧರನ್ ಹೇಳಿದ್ದಾರೆ. ಅದನ್ನು ಟ್ಯಾಂಪರ್ ಮಾಡಲು ಮುಂದಾದರೂ, ಅದನ್ನು ಗುರುತಿಸಲು ಸಾಮರ್ಥ್ಯ ಹೊಂದಲಿದೆ ಎಂದಿದ್ದಾರೆ. ಅರ್ಜಿದಾರನ ವೈಯಕ್ತಿಕ ವಿವರಗಳು ಡಿಜಿಟಲ್ ಸಹಿ ಮೂಲಕ ಸಂಗ್ರಹವಾಗಿರಲಿದೆ. ಶೀಘ್ರದಲ್ಲಿಯೇ ಜಾಗತಿಕ ಟೆಂಡರ್ ಕರೆಯಲಾಗುತ್ತದೆ ಎಂದಿದ್ದಾರೆ.
ಹಣಕಾಸು ವಿಧೇಯಕ ಅಂಗೀಕಾರ: ಲೋಕಸಭೆಯಲ್ಲಿ ಹಣಕಾಸು ವಿಧೇಯಕ 2019ಕ್ಕೆ ಅಂಗೀಕಾರ ನೀಡಲಾಗಿದೆ. ಈ ಕುರಿತ ಚರ್ಚೆಯಲ್ಲಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಜನರ ಜೀವನ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿಯೇ ಬಜೆಟ್‌ನಲ್ಲಿ ಹಲವು ಪ್ರಸ್ತಾಪಗಳನ್ನು ಸೇರಿಸಲಾಗಿದೆ ಎಂದಿದ್ದಾರೆ. 1 ಕೋಟಿ ರೂ.ಗಳಿಂತ ಹೆಚ್ಚು ನಗದು ವಿಥ್‌ಡ್ರಾ ಮಾಡಿದಾಗ ಶೇ.2ರಷ್ಟು ಟಿಡಿಎಸ್ ಹೇರಿರುವ ಬಗ್ಗೆ ಪ್ರಸ್ತಾಪ ಮಾಡಿದ ಅವರು, ತೆರಿಗೆ ಪಾವತಿಯನ್ನು ಹೊಂದಾಣಿಕೆ ಮಾಡಬಹುದು ಎಂದಿದ್ದಾರೆ.
ಹೆಚ್ಚಿದ ಉತ್ಪಾದಕತೆ: ಸದ್ಯ ನಡೆಯುತ್ತಿರುವ 17ನೇ ಲೋಕಸಭೆಯ ಕಲಾಪಗಳು 20 ವರ್ಷಗಳಿಗೆ ಹೋಲಿಕೆ ಮಾಡಿದರೆ ಅತ್ಯಂತ ಹೆಚ್ಚು ಫಲಕಾರಿಯಾಗಿವೆ. ಮಂಗಳವಾರದ ವರೆಗೆ ಶೇ.128ರಷ್ಟು ಕಲಾಪ ನಡೆಸಿದ ಹೆಗ್ಗಳಿಕೆ ಲೋಕಸಭೆಯದ್ದಾಗಿದೆ. ರಾಜ್ಯಸಭೆ ಕೂಡ ಮಂಗಳವಾರದ ವರೆಗೆ ಶೇ.98ರಷ್ಟು ಕಲಾಪ ನಡೆಸಿದೆ.
ಅಂಬಾನಿ- ಅದಾನಿ ಉಲ್ಲೇಖದಿಂದ ಗದ್ದಲ
ಹಣಕಾಸು ವಿಧೇಯಕ ಕುರಿತ ಚರ್ಚೆ ವೇಳೆ ಟಿಎಂಸಿ ಸಂಸದ ಸುಗತ ರಾಯ್, ‘ಅಂಬಾನಿ ಮತ್ತು ಅದಾನಿ ಈ ಸರ್ಕಾರದ ಅವಿಭಾಜ್ಯ ಅಂಗ’ ಎಂದು ಹೇಳಿದ್ದು ಕೋಲಾಹಲಕ್ಕೆ ಕಾರಣವಾಯಿತು. ಬಜೆಟ್‌ನಲ್ಲಿ 400 ಕೋಟಿ ರೂ.ಗಳಿಗೂ ಅಧಿಕ ಲಾಭ ಇರುವ ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲವಾಗುವಂತೆ ಶೇ.30ರಿಂದ ಶೇ.25ರಷ್ಟು ತೆರಿಗೆ ಪ್ರಮಾಣ ಕಡಿಮೆ ಮಾಡಲಾಗಿದೆ. ಆದರೆ ಡೀಸೆಲ್ ಮೇಲಿನ ತೆರಿಗೆ ಹೆಚ್ಚಿಸಲಾಗಿದೆ ಎಂದು ದೂರಿದರು. ಅಂಬಾನಿ ಮತ್ತು ಅದಾನಿ ಈ ಸರ್ಕಾರದ ಭಾಗ ಎಂದಿದ್ದಕ್ಕೆ ಬಿಜೆಪಿ ಸಂಸದರು ಆಕ್ಷೇಪಿಸಿ, ಆ ಪದಗಳನ್ನು ಕಡತದಿಂದ ತೆಗೆದುಹಾಕುವಂತೆ ಒತ್ತಾಯಿಸಿದರು.