ಬೆಳಗಾವಿ: ತಾತ್ಕಾಲಿಕವಾಗಿ ಕೈಬಿಡಲಾಗಿದ್ದ ಆದ್ಯತಾ ಪಡಿತರ ಚೀಟಿಗಳನ್ನು (ಬಿಪಿಎಲ್) ಎಪಿಎಲ್‌ಗೆ ಪರಿವರ್ತಿಸುವ ಕಾರ್ಯ ಶೀಘ್ರ ಪುನರಾರಂಭಗೊಳ್ಳಲಿದ್ದು, ಮುಂದಿನ 3 ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಲು ಸರಕಾರ ನಿರ್ಧರಿಸಿದೆ. ಈ ಮೂಲಕ ಮತ್ತೆ ಬಿಪಿಎಲ್ ಕಾರ್ಡ್ ಪರಿಷ್ಕರಣೆಗೆ ಸರಕಾರ ಮುಂದಾಗಿದೆ.
ಕಾರ್ಡ್ ಕೊಟ್ಟವರೂ ನಾವೇ ಮತ್ತು ಈಗ ಅನರ್ಹ ಅಂತ ಹೇಳುತ್ತಿರುವವರೂ ನಾವೇ. ಇದರಿಂದ ಬಿಪಿಎಲ್‌ನಿಂದ ಎಪಿಎಲ್ ಪರಿವರ್ತನೆಯಲ್ಲಿ ತುಸು ಗೊಂದಲ ಉಂಟಾಗಿರುವುದು ನಿಜ. ಸ್ವಲ್ಪ ಸಮಯ ತೆಗೆದುಕೊಂಡು ಮುಂದಿನ 3 ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಸಚಿವ ಕೆ.ಎಚ್. ಮುನಿಯಪ್ಪ ಸ್ಪಷ್ಟಪಡಿಸಿದರು.
ಮೇಲ್ಮನೆಯಲ್ಲಿ ಪ್ರಶ್ನೋತ್ತರ ವೇಳೆ ಕಾಂಗ್ರೆಸ್ಸಿನ ಐವನ್ ಡಿ’ಸೋಜಾ, ಜೆಡಿಎಸ್‌ನ ಟಿ.ಎನ್. ಜವರಾಯೇಗೌಡ ಮತ್ತು ಟಿ.ಎ. ಶರವಣ ಹಾಗೂ ಕೆ.ಎ. ತಿಪ್ಪೇಸ್ವಾಮಿ, ಬಿಜೆಪಿಯ ಸಿ.ಟಿ. ರವಿ ಮತ್ತು ಹಣಮಂತ ನಿರಾಣಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಒಟ್ಟಾರೆ ಇರುವ ಬಿಪಿಎಲ್ ಕಾರ್ಡ್‌ಗಳಲ್ಲಿ ಶೇ. 20 ಎಪಿಎಲ್‌ಗೆ ವರ್ಗಾವಣೆಗೊಳಿಸಲು ಅರ್ಹವಾಗಿವೆ ಎಂದರು. ರಾಜ್ಯಾದ್ಯಂತ 2021ರ ಜನವರಿಯಿಂದ 2023ರ ಮೇ ವರೆಗೆ 3.35 ಲಕ್ಷ ಅನರ್ಹ ಆದ್ಯತಾ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿದ್ದು ಇವರಿಂದ 13.51 ಕೋಟಿ ರೂ. ದಂಡ ವಿಧಿಸಲಾಗಿದೆ. ಈ ಅವಧಿಯಲ್ಲಿ 2.95 ಲಕ್ಷ ಅರ್ಜಿಗಳು ವಿಲೇವಾರಿಗೆ ಆದೇಶಿಸಲಾಗಿದ್ದು ಈ ಪೈಕಿ ಅರ್ಹರಿರುವ 2.34 ಅರ್ಜಿಗಳ ಪೈಕಿ 1.69 ಲಕ್ಷ ಅನುಮೋದಿಸಲಾಗಿದೆ. 59,528 ತಿರಸ್ಕರಿಸಲಾಗಿದೆ ಎಂದರು.
ಅನರ್ಹ ಕಾರ್ಡ್‌ದಾರರನ್ನು ಹೊಂದಿದವರ ವಿರುದ್ಧ ದಂಡ ಪ್ರಯೋಗ ಮಾಡುವುದಾಗಿ ಹೇಳುತ್ತೀರಿ. ಕಾರ್ಡ್ ವಿತರಿಸಿದ ಅಧಿಕಾರಿಗಳ ವಿರುದ್ಧ ಏನು ಕ್ರಮ ಎಂದು ಕಾಂಗ್ರೆಸ್‌ನ ಐವನ್ ಡಿ’ಸೋಜಾ ಕೇಳಿದಾಗ, ಇದಕ್ಕೆ ಸಚಿವರು, ಅಧಿಕಾರಿಗಳು ಕ್ರಮಬದ್ಧವಾಗಿಯೇ ಕೆಲಸ ಮಾಡಿದ್ದಾರೆ. ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಸಮರ್ಥನೆ ನೀಡಿದರು.