Advertisement

ವರ್ಗಾವರ್ಗಿ ನಿರಾತಂಕ; ಅಕ್ಟೋಬರ್‌ 25ರಿಂದ ಶಿಕ್ಷಕರ ವರ್ಗಕ್ಕೆ ಪರಿಷ್ಕೃತ ವೇಳಾಪಟ್ಟಿ

01:39 AM Oct 24, 2021 | Team Udayavani |

ಬೆಂಗಳೂರು: ಹಲವಾರು ಅಡೆತಡೆಗಳ ಬಳಿಕ ಪ್ರಾಥಮಿಕ – ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗೆ ಹಸುರು ನಿಶಾನೆ ಲಭಿಸಿದ್ದು, ಅ. 25ರಿಂದ ಆರಂಭಿಸಲು ಸರ ಕಾರ ಮುಂದಾಗಿದೆ. ಈ ಸಂಬಂಧ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.

Advertisement

ಶಿಕ್ಷಕರ ವರ್ಗಕ್ಕಾಗಿ ಸರಕಾರ ಹಾಲಿ ಇರುವ ಕಾಯ್ದೆಗೆ ತಿದ್ದುಪಡಿ ತರಲು ಅಧ್ಯಾದೇಶ ಹೊರಡಿಸಿತ್ತಾದರೂ ಕಾನೂನು ತೊಡಕು ಎದುರಾಗಿತ್ತು. ಕೋರ್ಟ್‌ ತಡೆಯಾಜ್ಞೆ ತೆರವು ಮಾಡಿದ್ದು, ವರ್ಗಾವಣೆ ಅಡೆತಡೆ ಇಲ್ಲದೆ ನಡೆಯಬಹುದು ಎಂದು ಶಿಕ್ಷಕರು ನಿರೀಕ್ಷಿಸುತ್ತಿದ್ದಾರೆ.

ವರ್ಗಾವಣೆಗೆ ಅಡ್ಡಿಯಾಗಬಾರದು ಎಂದು ಹೈಕೋರ್ಟ್‌ನಲ್ಲಿ ಕೇವಿಯಟ್‌ ಸಲ್ಲಿಸಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದ್ದಾರೆ.

72 ಸಾವಿರ ಅರ್ಜಿ
2022ರ ಫೆ. 26ರ ವರೆಗೆ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ. 72 ಸಾವಿರಕ್ಕೂ ಅಧಿಕ ಶಿಕ್ಷಕರು ಅರ್ಜಿ ಸಲ್ಲಿಸಿದ್ದಾರೆ. ತಾಂತ್ರಿಕ ಕಾರಣಗಳಿಂದ ಅರ್ಜಿ ತಿರಸ್ಕೃತ ವಾಗಿರುವವರಿಗೆ ಮರಳಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಹಿಂದೆ ಕಡ್ಡಾಯ ವರ್ಗಾವಣೆ ಪಡೆದವರಿಗೂ ಆದ್ಯತೆಯಲ್ಲಿ ವರ್ಗಾವಣೆ ನೀಡಲು ವೇಳಾಪಟ್ಟಿ ಪ್ರಕಟಿಸಲಾಗಿದೆ.

ಅ. 25ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಉಪನಿರ್ದೇಶಕರು, ವಿಭಾಗೀಯ ಸಹನಿರ್ದೇಶಕರು ಖಾಲಿ ಹುದ್ದೆಗಳ ಮಾಹಿತಿ ಪ್ರಕಟಿಸಲಿದ್ದಾರೆ.

Advertisement

ಈ ಹಿಂದೆ ಕಡ್ಡಾಯ ವರ್ಗಾವಣೆ ಪಡೆದ ಶಿಕ್ಷಕರ ಪಟ್ಟಿ ಪ್ರಕಟಿಸಲಾಗುತ್ತದೆ. ಹೆಚ್ಚುವರಿ ಶಿಕ್ಷಕರಾಗಿ ವರ್ಗಾವಣೆ ಪಡೆದಿರುವವರ ಮಾಹಿತಿ, ಜ್ಯೇಷ್ಠತೆ ಪಟ್ಟಿ, ಶಿಕ್ಷಕರಿಂದ ಆಕ್ಷೇಪಣೆ ಮತ್ತಿತರ ವಿವಿಧ ಪ್ರಕ್ರಿಯೆಗಳನ್ನು ಸಂಬಂಧಪಟ್ಟ ಪ್ರಾಧಿಕಾರಿಗಳು ಪೂರ್ಣ ಗೊಳಿಸಿರುವುದರಿಂದ ಮೊದಲ ಹಂತ (ಈಗಾಗಲೇ ಕೆಲವು ಪ್ರಕ್ರಿಯೆ ಮುಗಿದಿ ರುವ ಶಿಕ್ಷಕರ ಅರ್ಜಿಗಳ ಆನ್‌ಲೈನ್‌ ಕೌನ್ಸೆಲಿಂಗ್‌) ಅ. 26ರಂದು ಮತ್ತು ಅ. 28ರಿಂದ ಪ್ರೌಢಶಾಲಾ ಶಿಕ್ಷಕರ ಆನ್‌ಲೈನ್‌ ಕೌನ್ಸೆಲಿಂಗ್‌ ಆರಂಭವಾಗಲಿದೆ.

ಸಾಮಾನ್ಯ ಕೋರಿಕೆ ವರ್ಗಾವಣೆ, ಪರಸ್ಪರ ವರ್ಗಾವಣೆ, ಜಿಲ್ಲೆಯೊಳಗಿನ ಕೋರಿಕೆ ವರ್ಗಾವಣೆ ಕೌನ್ಸೆಲಿಂಗ್‌, ಅಂತಿಮ ಜ್ಯೇಷ್ಠತೆ ಪಟ್ಟಿ ಪ್ರಕಟ, ವಿಭಾಗೀಯ ಹಂತದ ವರ್ಗಾವಣೆ ಪ್ರಕ್ರಿಯೆ, ಅಂತರ್‌ ವಿಭಾಗೀಯ ಹಂತದ ವರ್ಗಾವಣೆ ಪ್ರಕ್ರಿಯೆ, ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ, ಅಧಿಕಾರಿಗಳು ಮತ್ತು ಮುಖ್ಯಶಿಕ್ಷಕರ ವರ್ಗಾವಣೆ ಸೇರಿ ಪ್ರಕ್ರಿಯೆ 2022ರ ಫೆ. 26ರ ವರೆಗೆ ನಡೆಯಲಿದೆ.

ಇದನ್ನೂ ಓದಿ:ಭೀಮಾ ಕೋರೆಗಾಂವ್‌ ಪ್ರಕರಣ: ವಿಚಾರಣೆಗೆ ರಶ್ಮಿ ಶುಕ್ಲಾ, ಪರಂಬೀರ್‌ ಸಿಂಗ್‌ಗೆ ಸಮನ್ಸ್‌ ಜಾರಿ

ನಾಳೆಯಿಂದ ಎಳೆಯರು ಶಾಲೆಗೆ
ರಾಜ್ಯದ 1ರಿಂದ 5ನೇ ತರಗತಿ ಮಕ್ಕಳಿಗೆ ಸೋಮವಾರ, ಅ. 25ರಿಂದ ಭೌತಿಕ ತರಗತಿ ಆರಂಭವಾಗ ಲಿದೆ. ಸರಕಾರಿ, ಅನುದಾನಿತ ಶಾಲೆ ಗಳು ಈ ಮಕ್ಕಳಿಗೆ ತರಗತಿ ನಡೆಸಲು ಸಿದ್ಧತೆ ಮಾಡಿಕೊಂಡಿವೆ. ಕೆಲವು ಖಾಸಗಿ ಶಾಲೆಗಳು ಮಾತ್ರ ಆನ್‌ಲೈನ್‌ ತರಗತಿ ಮುಂದುವರಿಸುವ ನಿರ್ಧಾರ ಮಾಡಿವೆ.

ಶಿಕ್ಷಕರ ವರ್ಗಾವಣೆಗೆ ಎದುರಾಗಿದ್ದ ಕಾನೂನಿನ ತೊಡಕು ನಿವಾರಣೆ ಮಾಡಿದ್ದೇವೆ. ಅ. 25ರಿಂದ ಪ್ರಕ್ರಿಯೆ ಪುನರಾರಂಭವಾಗಲಿದೆ. ಮುಂದೆ ಕಾನೂನಿನ ಸಂಕಷ್ಟ ಎದುರಾಗದಂತೆ ಹೈಕೋರ್ಟ್‌ಗೆ ಕೇವಿಯಟ್‌ ಸಲ್ಲಿಸಿದ್ದೇವೆ.
-ಬಿ.ಸಿ. ನಾಗೇಶ್‌, ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next