Advertisement

ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಿಸಿ

06:32 PM Dec 22, 2021 | Team Udayavani |

ಗದಗ: ಶಿಕ್ಷಕರ ಕ್ಷೇತ್ರದ ಚುನಾವಣೆ ಮತದಾರರ ಪಟ್ಟಿ ಹಾಗೂ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಎಂ. ಸುಂದರೇಶ್‌ಬಾಬು ಸೂಚಿಸಿದರು.

Advertisement

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮಂಗಳವಾರ ನಡೆದ ಮತದಾರರ ಪಟ್ಟಿ ಪರಿಷ್ಕರಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಕಂದಾಯ ವಿಷಯಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಮತದಾರರ ಪಟ್ಟಿ ಪರಿಷ್ಕರಣೆಯ ಸಂಪೂರ್ಣ ಹೊಣೆಗಾರಿಕೆ ಆಯಾ ತಾಲೂಕಿನ ತಹಶೀಲ್ದಾರ್‌ ಅವರದ್ದಾಗಿದೆ. ನಿಖರ ಹಾಗೂ ಲೋಪರಹಿತ ಕರಡು ಮತದಾರರ ಪಟ್ಟಿ ಸಿದ್ಧಪಡಿಸಬೇಕು ಎಂದು ನಿರ್ದೇಶನ ನೀಡಿದರು.

ಚುನಾವಣಾ ಆಯೋಗ ಕಾಲ ಕಾಲಕ್ಕೆ ನೀಡುವ ನಿರ್ದೇಶನದ ಅನುಸಾರ ಕರಡು ಮತದಾರರ ಪಟ್ಟಿ ತಯಾರಿಸಲು ಮಾರ್ಗಸೂಚಿಗಳ ಪಾಲನೆ ಮಾಡಬೇಕು. ನಿಗದಿತ ಅವಧಿಯೊಳಗೆ ಕರಡು ಮತದಾರರ ಪಟ್ಟಿ ಪ್ರಕಟಿಸಿ ವರದಿ ಸಲ್ಲಿಸಬೇಕು. ಈ ಕಾರ್ಯಕ್ಕೆ ಕಚೇರಿಯಲ್ಲಿನ ಅನುಭವಿ ಕೆಲಸಗಾರರನ್ನು ನಿಯೋಜಿಸುವಂತೆ ಸೂಚಿಸಿದರು.

ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ ತಹಶೀಲ್ದಾರ್‌ ಕಿಶನ್‌ ಕಲಾಲ್‌ ಅವರಿಂದ ಚುನಾವಣಾ ಸಿದ್ಧತೆ ಕುರಿತು ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ನ್ಯಾಯಸಮ್ಮತ ಹಾಗೂ ಪಾರದರ್ಶಕ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ಮತಗಟ್ಟೆಗಳಿಗೆ ನಿಯೋಜಿಸುವ ಅಧಿ ಕಾರಿಗಳಿಗೆ ಪರಿಣಿತರಿಂದ ಚುನಾವಣೆ ಪ್ರಕ್ರಿಯೆ ಕೈಗೊಳ್ಳುವ ಕುರಿತು ಸೂಕ್ತ ತರಬೇತಿ ಆಯೋಜಿಸಬೇಕು. ಚುನಾವಣಾ ಪ್ರಕ್ರಿಯೆ ನಡೆಸುವಲ್ಲಿ ಯಾವುದೇ ರೀತಿಯ ಅನುಮಾನಕ್ಕೂ ಅವಕಾಶ ನೀಡಬಾರದು ಎಂದರು.

Advertisement

ಪ್ರತಿ ಮತಗಟ್ಟೆಗಳಲ್ಲೂ ಮೂಲಭೂತ ಸೌಕರ್ಯಗಳಾದ ವಿದ್ಯುತ್‌, ಗಾಳಿ, ಬೆಳಕು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಜೊತೆಗೆ ವಿಕಲಚೇತನರಿಗೆ ರೋಪ್‌ ವ್ಯವಸ್ಥೆ ಮತಗಟ್ಟೆಗಳಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಗುರುಪ್ರಸಾದ ಅವರಿಗೆ ಸೂಚಿಸಿದರು.

ಅಪರ ಜಿಲ್ಲಾ ಧಿಕಾರಿ ಸತೀಶಕುಮಾರ್‌ ಎಂ. ಮಾತನಾಡಿ, ಡಿ. 26ರಂದು ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ ಸಂಬಂಧಿ ಸಿದಂತೆ ಮಸ್ಟರಿಂಗ್‌ ಕಾರ್ಯ ಜರುಗಲಿದೆ. ಡಿ. 27ರಂದು ಸಂಜೆ ಡಿಮಸ್ಟರಿಂಗ್‌ ಕಾರ್ಯ ಸುಗಮವಾಗಿ ನಡೆಸಲು ಅನುಭವಿ ನೌಕರರನ್ನು ನಿಯೋಜಿಸಬೇಕು. ಅಲ್ಲದೇ ಡಿ. 30ರಂದು ನಡೆಯುವ ಮತ ಎಣಿಕೆ ಕೇಂದ್ರದಲ್ಲಿ ಅಗತ್ಯದ ಸಿದ್ಧತೆಗಳನ್ನು ಮಾಡುವಂತೆ ಸೂಚಿಸಿದರು.

ತಹಶೀಲ್ದಾರ್‌ ಕಿಶನ್‌ ಕಲಾಲ ಮಾತನಾಡಿ, ನಗರಸಭೆಯ 35 ವಾರ್ಡ್‌ಗಳ ಚುನಾವಣೆಗೆ 136 ಚುನಾವಣಾ ಮತಗಟ್ಟೆಗಳನ್ನು ತೆರೆಯಲಾಗುವುದು. ಪ್ರತಿ ಮತಗಟ್ಟೆ ಅಧಿಕಾರಿಗಳಿಗೆ ಸೂಕ್ತ ತರಬೇತಿ ಕೊಡಿಸಲು ಕ್ರಮ ವಹಿಸಲಾಗಿದೆ. 600 ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕರಿಗೆ ತರಬೇತಿ ನೀಡಲಾಗುವುದು.

ಈಗಾಗಲೇ ರಾಜಕೀಯ ಪಕ್ಷಗಳಿಗೆ ಪರಿಷ್ಕೃತ ಮತದಾರರ ಪಟ್ಟಿ ನೀಡಲಾಗಿದೆ. ಒಟ್ಟಾರೆ ಸುಗಮ ಚುನಾವಣೆಗೆ ಅಗತ್ಯದ ಕ್ರಮ ವಹಿಸಲಾಗುತ್ತಿದೆ ಎಂದರು. ಖಾಲಿಯಿರುವ 14 ಗ್ರಾಪಂ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸುವ ಕುರಿತು ಆಯಾ ತಾಲೂಕಿನ ತಹಶೀಲ್ದಾರ್‌ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ತಿಳಿಸಲಾಯಿತು. ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಸವಲಿಂಗಪ್ಪ, ಪ.ಪೂ. ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್‌.ಎಂ. ಕಾಂಬಳೆ, ಚುನಾವಣಾ ತಹಶೀಲ್ದಾರ್‌ ಪಿ.ಸಿ. ಕಲಾಲ ಸೇರಿದಂತೆ ಆಯಾ ತಾಲೂಕಿನ ತಹಶೀಲ್ದಾರ್‌ರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next