ಈಕೆ ಎಲ್ಲರಂತೆ ಸಾದಾ ಸೀದಾ ಹುಡುಗಿ. ಆದರೆ, ಹಾಡಲು ನಿಂತರೆ ಮಾತ್ರ ಸಾಲುಗಳೆಲ್ಲವೂ ರಿವರ್ಸ್. ಕನ್ನಡ, ಹಿಂದಿ ಭಾಷೆಯ ಹಾಡುಗಳನ್ನು ಹಿಂದಿನಿಂದ ಮುಂದಕ್ಕೆ ಹಾಡಬಲ್ಲ ಈ ಹುಡುಗಿ “ರಿವರ್ಸ್ ಸಿಂಗರ್’ ಅನುಷಾ ಎಂದೇ ಚಿರಪರಿಚಿತ…
ಕೇಳಿದ್ದಕ್ಕೆಲ್ಲಾ ಉಲ್ಟಾ ಮಾತಾಡುವ ಅನೇಕರನ್ನು ನೋಡಿರುತ್ತೀರಿ. ರಿವರ್ಸ್ ಡ್ರೈವಿಂಗ್, ಉಲ್ಟಾ ಸ್ವಿಮ್ಮಿಂಗ್ ಬಗ್ಗೆಯೂ ಕೇಳಿರುತ್ತೀರಿ. ತಿರುವು ಮುರುವಾಗಿ ಹಾಡು ಹೇಳುವ ಈ ಹುಡುಗಿಯ ಪರಿಚಯ ಇದೆಯಾ ನಿಮಗೆ?
ಈಕೆಯ ಹೆಸರು ಅನುಷಾ. ಟಿ.ವಿ. ಪ್ರೇಕ್ಷಕರಿಗೆ ಈ ಹುಡುಗಿಯ ಪರಿಚಯ ಇದ್ದಿರಬಹುದು. ಹಲವಾರು ಶೋಗಳಲ್ಲಿ ಭಾಗವಹಿಸಿರುವ ಅನುಷಾ, ಸಾಮಾಜಿಕ ಜಾಲತಾಣಗಳಲ್ಲೂ ಈಗ ಮಿಂಚುತ್ತಿದ್ದಾರೆ. ಹಲವರಂತೆ ಅನುಷಾ ಕೂಡ ಮನರಂಜನೆಗಾಗಿ ಹಾಡು ಹಾಡುತ್ತಾಳೆ. ಆಕೆಯ ಹಾಡುಗಾರಿಕೆಯ ವಿಶೇಷವೇನೆಂದರೆ, ಹಾಡುಗಳ ಸಾಲುಗಳನ್ನು ತಿರುವು ಮುರುವಾಗಿ ಹಾಡುವುದು. ಯಾವುದೇ ರೀತಿಯ, ಯಾವುದೇ ಭಾಷೆಯ ಹಾಡನ್ನು ನೇರವಾಗಿ, ಅದೇ ಟ್ರ್ಯಾಕ್‌ನಲ್ಲಿ ಹಿಂದಿನಿಂದ ಮುಂದಕ್ಕೂ ಹಾಡಬಲ್ಲ ಅಪರೂಪದ ಗಾಯಕಿ ಅನುಷಾ. ಸಾಮಾಜಿಕ ತಾಣಗಳಲ್ಲಿ “ರಿವರ್ಸ್ ಸಿಂಗರ್’ ಎಂದೇ ಹೆಸರುವಾಸಿಯಾಗಿರುವ ಈಕೆ ಹಾಡನ್ನು ಮೊದಲು ಉಲ್ಟಾ ಆಗಿ ಬರೆದು, ಅದನ್ನು ನೋಡಿ ಹಾಡುವುದಿಲ್ಲ. ಮನಸ್ಸಿನಲ್ಲಿಯೇ ಉಲ್ಟಾ ಮಾಡಿ ಹಾಡುತ್ತಾಳೆ. ಅದೇ ರಾಗ, ಅದೇ ತಾಳದಲ್ಲಿ ಹಾಡುತ್ತಾಳೆ. ಅನುಷಾಳ ಹಾಡುಗಾರಿಕೆ ಕೇವಲ ಚಿತ್ರಗೀತೆಗಳಿಗೆ ಸೀಮಿತವಾಗಿರದೆ, ಭಾವಗೀತೆ, ಭಕ್ತಿಗೀತೆ, ಜನಪದಗೀತೆ ಹೀಗೆ ಎಲ್ಲಾ ಬಗೆಯ ಹಾಡುಗಳನ್ನೂ ತಿರುವು ಮುರುವಾಗಿ ಹಾಡುತ್ತಾಳೆ. ಕನ್ನಡವಷ್ಟೇ ಅಲ್ಲದೆ ಹಿಂದಿ ಹಾಡುಗಳಿಗೂ ರಿವರ್ಸ್ ಸ್ಪರ್ಶ ನೀಡಬಲ್ಲಳು.
ಬೆಂಗಳೂರಿನ ನಿವಾಸಿಯಾಗಿರುವ ಅನುಷಾ ತಮ್ಮ ವ್ಯಾಸಂಗ, ಉದ್ಯೋಗದ ಜೊತೆಯಲ್ಲಿಯೇ ಹಾಡುವ ಹವ್ಯಾಸವನ್ನು ಪೋಷಿಸಿಕೊಂಡು ಬರುತ್ತಿದ್ದಾರೆ. ಅನುಷಾ ಈ ಉಲ್ಟಾ ಹಾಡುಗಾರಿಕೆಯನ್ನು ಆರಂಭಿಸಿದ್ದು ಮೂರನೇ ತರಗತಿಯಲ್ಲಿದ್ದಾಗ. ಡಾ. ರಾಜ್‌ಕುಮಾರ್ ಗಾಯನದ “ಗಂಗಾ ಯಮುನ ಸಂಗಮ..’ ಹಾಡನ್ನು ಹೆತ್ತವರ ಮುಂದೆ ಉಲ್ಟಾ ಹಾಡಿ ಅವರನ್ನು ಆಶ್ಚರ್ಯಪಡಿಸಿದ್ದಳು. ಆಕೆಯ ಪ್ರತಿಭೆಯನ್ನು ಗುರುತಿಸಿದ ಹೆತ್ತವರಿಂದ ತಕ್ಕ ಪ್ರೋತ್ಸಾಹವೂ ಸಿಕ್ಕಿತು. ಮುಂದೆ ಹೀಗೆಯೇ ಉಲ್ಟಾ ಗೀತೆಗಳನ್ನು ಹಾಡುತ್ತಾ “ರಿವರ್ಸ್ ಸಿಂಗರ್’ ಎನಿಸಿಕೊಂಡಳು.
ಹಾಡುಗಾರಿಕೆಯಷ್ಟೇ ಅಲ್ಲದೇ, ಅಭಿನಯದಲ್ಲೂ ಅನುಷಾರದ್ದು ಎತ್ತಿದ ಕೈ. ಪೌರಾಣಿಕ, ಐತಿಹಾಸಿಕ ಪಾತ್ರಗಳ ಒಳಹೊಕ್ಕು ಭಾವತುಂಬಿ ಅಭಿನಯಿಸುವುದು ಈಕೆಗೆ ಲೀಲಾಜಾಲ. ಉದಯ ವಾಹಿನಿಯ ಚಿಣ್ಣರಲೋಕ, ಈ ಟಿ.ವಿ.ಯ ಬಾಲಗಂಧರ್ವ, ಸುವರ್ಣ ವಾಹಿನಿಯ ಕಲಾಕ್ಷೇತ್ರ, ಸೂಪರ್‌ಸ್ಟಾರ್ ಆಫ್ ಕರ್ನಾಟಕ, ಅಡ್ಡಾದಿಡ್ಡಿ, ಕಸ್ತೂರಿ ಚಾನೆಲ್‌ನ ಕಾಮನಬಿಲ್ಲು, ಝೀ ವಾಹಿನಿಯ ಕಾಮಿಡಿ ಕಿಲಾಡಿಗಳು, ಚಂದನ ವಾಹಿನಿಯ ಚಿಣ್ಣರಲೋಕ, ಅಷ್ಟೇ ಅಲ್ಲದೆ ಖಾಸಗಿ ಸುದ್ದಿವಾಹಿನಿಗಳಲ್ಲೂ ಪ್ರತಿಭೆ ಪ್ರದರ್ಶಿಸಿದ್ದಾರೆ.
ಹಾಡುಗಾರಿಕೆಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿದ್ದಾರೆ. ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಲ್ಲಿ ತಮ್ಮದೇ ವೇದಿಕೆ ನಿರ್ಮಿಸಿಕೊಂಡು, (ರಿವರ್ಸ್ ಸಿಂಗರ್ ಅನುಷಾ) ಅಭಿಮಾನಿಗಳಿಂದ ಸಲಹೆ ಪಡೆಯುತ್ತಾ, ಅವರ ಪ್ರಶಂಸೆಯನ್ನೂ ಗಳಿಸಿದ್ದಾರೆ. ಅವರ ರಿವರ್ಸ್ ಹಾಡುಗಳನ್ನು ಕೇಳಲು ಅನುಷಾರ ಎಫ್ಬಿ ಪೇಜ್‌ಗೆ ಭೇಟಿ ನೀಡಿ.
ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆ ಸುಪ್ತವಾಗಿರುತ್ತದೆ. ನಮ್ಮ ಪ್ರತಿಭೆಯನ್ನು ನಾವು ಮೊದಲು ಗುರುತಿಸಿ, ಬೆಳೆಸಿಕೊಳ್ಳಬೇಕು. ಆಗ ಮಾತ್ರ ಜನರಿಗೆ ನಾವು ಹತ್ತಿರವಾಗಲು ಸಾಧ್ಯ.
ಅನುಷಾ ಜೆ.
ಶೈಲಜಾ