Advertisement

ಸಚಿವರ “ಗ್ರಾಮವಾಸ್ತವ್ಯ’ದ ಇಂದಿನ ವಾಸ್ತವ

02:31 AM Feb 19, 2022 | Team Udayavani |

ಕಂದಾಯ ಸಚಿವ ಆರ್‌. ಅಶೋಕ್‌ ಫೆ. 19ರಂದು ಬ್ರಹ್ಮಾವರ ತಾಲೂಕಿನ ಆರೂರಿನಲ್ಲಿ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ. ಆರು ವರ್ಷಗಳ ಹಿಂದೆ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಮೂರೂರು ಕೊರಗರ ಕಾಲನಿಯಲ್ಲಿ ಆಗಿನ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ಸಚಿವ ಎಚ್‌. ಆಂಜನೇಯ ಗ್ರಾಮವಾಸ್ತವ್ಯ ಮಾಡಿದ್ದರು. ಆಗ ಸಚಿವರು ನೀಡಿದ್ದ ಭರವಸೆಗಳು ಈಡೇರಿವೆಯೇ? ಏನೆಲ್ಲ ಬೇಡಿಕೆಗಳು ಬಾಕಿ ಇವೆ? ಅಂದಿನ ಸಚಿವರ ಗ್ರಾಮವಾಸ್ತವ್ಯ ಫಲಪ್ರದವಾಗಿದೆಯೇ? ಸಚಿವರ ಗ್ರಾಮವಾಸ್ತವ್ಯದ ಇಂದಿನ ವಾಸ್ತವ ಏನು ಅನ್ನುವುದರ ಮಾಹಿತಿಯನ್ನು “ಉದಯವಾಣಿ’ ಕಲೆ ಹಾಕಿದೆ.

Advertisement

ಕುಂದಾಪುರ: ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಮೂರೂರಿನ ಕೊರಗ ಕಾಲೋನಿಯಲ್ಲಿ 2016ರ ಡಿ. 31 ಹಾಗೂ 2017ರ ಜ. 1ರಂದು ಎರಡು ದಿನ ಆಗಿನ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್‌. ಆಂಜನೇಯ ಗ್ರಾಮವಾಸ್ತವ್ಯ ಹೂಡಿದ್ದರು.

ಅನಂತರ ಗ್ರಾಮದ ಸ್ಥಿತಿ ನಿರೀಕ್ಷೆಯಷ್ಟು ಸುಧಾರಿಸಿಲ್ಲ. ಅಂಬೇಡ್ಕರ್‌ ಭವನ, ಕುಡಿಯುವ ನೀರಿನ ವ್ಯವಸ್ಥೆ ಸಹಿತ ಒಂದಷ್ಟು ಬೇಡಿಕೆ ಈಡೇರಿದ್ದು ಬಿಟ್ಟರೆ ಪ್ರಮುಖ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ.

ಆಗಿದ್ದೇನು?
2 ಕೋ.ರೂ. ವೆಚ್ಚದಲ್ಲಿ ಅರೆಶಿರೂರಿ ನಿಂದ ಮೂರೂರಿಗೆ ಸಂಪರ್ಕಿಸುವ 2.5 ಕಿ.ಮೀ. ದೂರದ ಕಾಂಕ್ರೀಟ್‌ ರಸ್ತೆ ಆಗಿದೆ. ಕುಡಿಯುವ ನೀರಿಗಾಗಿ 30 ಲಕ್ಷ ರೂ. ವೆಚ್ಚದಲ್ಲಿ ಬೋರ್‌ವೆಲ್‌, ಟ್ಯಾಂಕ್‌ ಹಾಗೂ ನಳ್ಳಿ ವ್ಯವಸ್ಥೆ ಮಾಡಿಕೊಡಲಾಗಿದೆ. 25 ಲಕ್ಷ ರೂ. ವೆಚ್ಚದಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣವಾಗಿದೆ. 2-3 ಮನೆಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಇಲ್ಲಿ ಒಟ್ಟು 8 ಕೊರಗರ ಮನೆಗಳಿದ್ದು, ಒಂದು ಕುಟುಂಬಕ್ಕೆ ಇನ್ನೂ ಜಾಗದ ಹಕ್ಕುಪತ್ರ ಸಿಕ್ಕಿಲ್ಲ. ಮೂರೂರು ಹಿಲ್ಕಲ್‌ಕಟ್ಟು ಸೇತುವೆಗೆ ಸಚಿವರ ಭೇಟಿಯ ಮೊದಲೇ ಅನುದಾನ ಮಂಜೂರಾಗಿದ್ದು, ಈಗ ಪೂರ್ಣಗೊಂಡಿದೆ. ಇದರಿಂದ ಮೂರೂರಿಗೆ ಕಾಲೊ¤àಡು ಸನಿಹವಾಗಿದೆ.

ಆಗಬೇಕಾದದ್ದೇನು?
– ಮೂರೂರು – ಕಪ್ಪಾಡಿ ಸರಕಾರಿ ಕಿ.ಪ್ರಾ. ಶಾಲೆಗೆ ಹೊಸ ಕಟ್ಟಡ ಮಂಜೂರಾಗಿಲ್ಲ.
– ಮೂರೂರಿನಿಂದ 6-7 ಕಿ.ಮೀ. ದೂರದ ಗೋಳಿಹೊಳೆ ಪ್ರೌಢಶಾಲೆಗೆ ಸಚಿವರು ವಾಹನ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದರು. ಅದಿನ್ನೂ ಆಗಿಲ್ಲ.
– ಅರೆಶಿರೂರಿನಿಂದ ಮೂರೂರು ರಸ್ತೆಯಲ್ಲಿ 1.5 ಕಿ.ಮೀ. ದೂರ ಸಂಚಾರ ನರಕಸದೃಶವಾಗಿದೆ.
– ಮೂರೂರು- ಕಾಲೊ¤àಡು 5 ಕಿ.ಮೀ. ರಸ್ತೆಯ ಡಾಮರು ಎದ್ದು ಹೋಗಿ ಹೊಂಡಮಯವಾಗಿದೆ. ಮರು ಡಾಮರೀಕರಣ ಆಗಬೇಕಿದೆ.
– ಕೃಷಿ ಪಂಪ್‌ಗೆ ತ್ರೀಫೇಸ್‌ ವಿದ್ಯುತ್‌ಗೆ ಬೇಡಿಕೆ ಸಲ್ಲಿಸಿದ್ದರು. ಆದರೆ ಈಗಲೂ ಈಡೇರಿಲ್ಲ.

Advertisement

ಒಳಮೀಸಲಾತಿ ಭರವಸೆಯಷ್ಟೇ
ಸಚಿವರು ಆರ್ಥಿಕವಾಗಿ ಹಿಂದುಳಿದಿರುವ ಕೊರಗ ಹಾಗೂ ಜೇನುಕುರುಬ ಜಾತಿಗೆ ಒಳಮೀಸಲಾತಿಯನ್ನು ಜಾರಿಗೆ ತರುವಲ್ಲಿ ಸರಕಾರ ಚಿಂತನೆ ನಡೆಸಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಕಾರ್ಯೋನ್ಮುಖವಾಗಲಿದೆ ಎಂದು ಭರವಸೆ ನೀಡಿದ್ದರು. ಆದರೆ 5 ವರ್ಷ ಕಳೆದರೂ ಒಳಮೀಸಲಾತಿ ಸಿಕ್ಕಿಲ್ಲ.

ಸಚಿವರ ಭೇಟಿಯಿಂದಾಗಿ ರಸ್ತೆ, ಬೋರ್‌ವೆಲ್‌, ಅಂಬೇಡ್ಕರ್‌ ಭವನ ಆಗಿದೆ. ಆದರೆ ರಸ್ತೆ ಪೂರ್ಣಗೊಂಡಿಲ್ಲ. ಶಾಲೆಗೆ ಹೊಸ ಕಟ್ಟಡ ಬೇಕಿದೆ. ಒಳಮೀಸಲಾತಿಯೂ ಸಿಕ್ಕಿಲ್ಲ. ಶಾಲಾ ಮಕ್ಕಳಿಗೆ ವಾಹನ ವ್ಯವಸ್ಥೆಯೂ ಕಲ್ಪಿಸಿಲ್ಲ.
– ಅಣ್ಣಪ್ಪ ಮೂರೂರು, ಸ್ಥಳೀಯರು

ಸಚಿವ ಆಂಜನೇಯ ಭೇಟಿ ಬಳಿಕ ಒಂದಷ್ಟು ಬೇಡಿಕೆಗಳು ಈಡೇರಿವೆ. ಆದರೆ ಕೆಲವು ಬೇಡಿಕೆಗಳು ಹಾಗೇ ಇವೆ.
– ಅಣ್ಣಪ್ಪ ಶೆಟ್ಟಿ , ಗ್ರಾ.ಪಂ. ಮಾಜಿ ಅಧ್ಯಕ್ಷರು, ಕಾಲ್ತೋಡು

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next