ಬೇಲೂರು: ಪಟ್ಟಣದ ಸರ್ಕಾರಿ ನೌಕರರ ಭವನದ ಅಂಗಡಿ ಮಳಿಗೆಗಳ ಕಂದಾಯ ಬಾಕಿ ಸುಮಾರು 6.75 ಲಕ್ಷ ರೂಗಳನ್ನು ಪುರಸಭೆಗೆ ಪಾವತಿಸದ ಇರುವ ಕಾರಣ ಅಂಗಡಿ ಮಳಿಗೆಗೆ ಪುರಸಭೆ ಸಿಬಂದಿ ಬೀಗ ಮುದ್ರೆ ಹಾಕಿದರು.
ಪುರಸಭೆ ಮುಖ್ಯಾಧಿಕಾರಿ ಸುಜಯ್ ಕುಮಾರ್ ನೇತೃತ್ವದ ತಂಡ ಸರ್ಕಾರಿ ನೌಕರರ ಭವನದ ಎಲ್ಲಾ ಅಂಗಡಿ ಮಳಿಗೆಗಳಿಗೆ ಬೀಗ ಹಾಕಿದ ನಂತರ ಮಾತನಾಡಿದ ಅವರು, ಸುಮಾರು 4 ವರ್ಷಗಳಿಂದಸರ್ಕಾರಿ ನೌಕರರ ಭವನದ ಅಂಗಡಿ ಮಳಿಗೆಗಳ ಸುಮಾರು 6.75 ಲಕ್ಷ ಕಂದಾಯ ಬಾಕಿ ಇದ್ದು, ಹಲವಾರು ಬಾರಿ ನೋಟಿಸ್ ನೀಡಿ ಮೌಕಿಕವಾಗಿ ತಿಳಿಸಿದರು. ಇಲ್ಲಿನ ಅಡಳಿತ ಮಂಡಳಿ ಹಣ ಕಟ್ಟಲುಮುಂದಾಗಿಲ್ಲ ಅದರಿಂದ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.
ಸರ್ಕಾರಿ ನೌಕರರ ಭವನದ ಅಂಗಡಿ ಮಳಿಗೆಗಳು ಅಲ್ಲದೆ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಕೆಲವು ಅಂಗಡಿ ಮಳಿಗೆಗೆಳಲ್ಲಿ ಕಂದಾಯ ಬಾಕಿ ಉಳಿಸಿಕೊಂಡಂತಹ ಅಂಗಡಿಗಳನ್ನು ಬೀಗಮುದ್ರೆ ಹಾಕಲಾಯಿತು. ಪುರಸಭೆ ವ್ಯಾಪ್ತಿಯ ಐಡಿಎಮ್‌ಸಿ ಮಳಿಗೆಗಳು ಕಂದಾಯ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಅವುಗಳಿಗೆ ಬೀಗ ಮುದ್ರೆ ಹಾಕಲಾಗುತ್ತಿದೆ ಎಂದು ತಿಳಿಸಿದರು.
ಐಡಿಎಮ್‌ಸಿ ವಾಣಿಜ್ಯ ಸಂಕೀರ್ಣಗಳಲ್ಲಿ 11 ಲಕ್ಷ ಕಂದಾಯ ಬಾಕಿ ಉಳಿಸಿಕೊಂಡಿದ್ದು, ಅವುಗಳನ್ನು ಸಂಪೂರ್ಣವಾಗಿ ವಸೂಲಾತಿ ಮಾಡಲು ಈಗಾಗಲೇ ಪುರಸಭೆ ಸಿಬ್ಬಂದಿಗಳೊಂದಿಗೆಸ್ಥಳಕ್ಕೆ ತೆರಳಿ ಬಾಕಿ ಇರುವ ಅಂಗಡಿಗಳಿಗೆ ಬೀಗ ಮುದ್ರೆ ಹಾಕಲಾಗುತ್ತಿದೆ. ಅದಲ್ಲದೆ ಮುಖ್ಯರಸ್ತೆಯ ಕೆಲವು ಅಂಗಡಿಗಳಲ್ಲೂ ಇದೇ ರೀತಿ ಕಂದಾಯ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಒಂದು ದಿನದ ಕಾಲಾವಕಾಶ ನೀಡಿದ್ದು, ಅದನ್ನು ಸಂಪೂರ್ಣ ಕಟ್ಟಬೇಕು ಇಲ್ಲವಾದಲ್ಲಿ ಅವುಗಳಿಗೂ ಬೀಗ ಮುದ್ರೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಲೋಕೇಗೌಡ ಉದಯವಾಣಿಯೊಂದಿಗೆ ಮಾತನಾಡಿ, ಸರ್ಕಾರಿ ನೌಕರರ ಭವನದಲ್ಲಿ ಅಂಗಡಿ ಮಳಿಗೆ ಪಡೆದಿರುವ ವ್ಯಾಪಾರಸ್ಥರು ಮಳಿಗೆಯ ತಿಂಗಳ ಬಾಡಿಗೆಯನ್ನು ಸರಿಯಾಗಿ ಕಟ್ಟುತ್ತಿಲ್ಲ. ಎರಡು ಜನ ವಕೀಲರು ಮಾತ್ರ ತಿಂಗಳ ಬಾಡಿಗೆ ಪಾವತಿ ಮಾಡಿದ್ದಾರೆ. ಮಿಕ್ಕವರು ತಿಂಗಳ ಬಾಡಿಗೆ ಕಟ್ಟದೆ ಇರುವುದರಿಂದ ಪುರಸಭೆಗೆ ಕಂದಾಯ ಕಟ್ಟಲುವಿಳಂಬವಾಗಿದೆ. ಇನ್ನೆರಡು ದಿನಗಳಲ್ಲಿ ಕಂದಾ ಯವನ್ನು ಪಾವತಿಸುವುದಾಗಿ ತಿಳಿಸಿದ್ದಾರೆ ಎಂದರು.
ಪುರಸಭೆ ಕಂದಾಯ ಅಧಿಕಾರಿ ಪುನೀತ್,ಆದರ್ಶ, ಆರೋಗ್ಯ ಅಧಿಕಾರಿ ಲೋಹಿತ್,ವ್ಯವಸ್ಥಾಪಕ ಮಂಜೇಗೌಡ, ಸಿಬ್ಬಂದಿಗಳಾದ ಪೃಥ್ವಿ, ಸಲ್ಮಾನ್, ಮೋಹನೇಶ್,ಆದಿನಾರಾಯಣ್ ಇದ್ದರು.