Advertisement

Revenge of BJP-JDS: ನನ್ನ ವಿರುದ್ಧದ ಹೊಟ್ಟೆಕಿಚ್ಚಿನ ಪಿತೂರಿ ಸಹಿಸಬೇಡಿ: ಸಿಎಂ

01:12 AM Aug 31, 2024 | Team Udayavani |

ಹಾವೇರಿ: ನನ್ನ ವಿರುದ್ಧ ನಡೆಯುತ್ತಿರುವ ಬಿಜೆಪಿ-ಜೆಡಿಎಸ್‌ ಪಕ್ಷಗಳ ಸೇಡು, ಹೊಟ್ಟೆಕಿಚ್ಚಿನ ಪಿತೂರಿ ಸಹಿಸಬೇಡಿ. ಜನರ ಆಶೀರ್ವಾದ ಇರುವವರೆಗೂ ನನಗೆ ಯಾರೂ ಏನೂ ಮಾಡಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ರಾಣಿಬೆನ್ನೂರು ತಾಲೂಕು ದೇವರಗುಡ್ಡದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಂಚಿನ ಪುತ್ಥಳಿ, ಕನಕ ಭವನ ಉದ್ಘಾಟಿಸಿ ಮಾತನಾಡಿದ ಅವರು, ಮಾಲತೇಶ ದೇವರ ಆಶೀರ್ವಾದ-ನಿಮ್ಮ ಪ್ರೀತಿ ನನ್ನ ಮೇಲಿರಲಿ. ನಾನು ಜನರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿ ಜನರಿಗೆ ಕೊಟ್ಟ ಮಾತನ್ನು ಈಡೇರಿಸುತ್ತಿದ್ದೇನೆ.

ಮೊದಲ ಬಾರಿ ಮುಖ್ಯಮಂತ್ರಿ ಆದಾಗಲೂ ಹಲವು ಭಾಗ್ಯಗಳನ್ನು ಜನರ ಮಡಿಲಿಗೆ ಹಾಕುವ ಮೂಲಕ ನುಡಿದಂತೆ ನಡೆದಿದ್ದೇನೆ. ಎರಡನೇ ಬಾರಿ ಸಿಎಂ ಆಗಿ ಒಂದೇ ವರ್ಷದಲ್ಲಿ ಐದಕ್ಕೆ ಐದೂ ಗ್ಯಾರಂಟಿಗಳನ್ನೂ ಜಾರಿ ಮಾಡಿದ್ದೇನೆ. ಇದೇ ಬಿಜೆಪಿ-ಜೆಡಿಎಸ್‌ನವರಿಗೆ ಹೊಟ್ಟೆಕಿಚ್ಚು. ಈ ಹೊಟ್ಟೆಕಿಚ್ಚಿನಿಂದ ಅವರೇ ನಾಶ ಆಗುತ್ತಾರೆಯೇ ಹೊರತು ನನ್ನನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದರು.

ನಾನು ಯಾರಿಗೂ, ಯಾವುದೇ ಪಿತೂರಿ-ಷಡ್ಯಂತ್ರಕ್ಕೂ ಭಯ ಪಡು ವವನಲ್ಲ. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಗೆರಿಲ್ಲಾ ಸೇನಾನಿ ರಾಯಣ್ಣನನ್ನು ಬ್ರಿಟಿಷರಿಗೆ ಮೋಸದಿಂದ ಹಿಡಿದುಕೊಟ್ಟವರು ನಮ್ಮವರೇ. ಇಂಥ ದೇಶದ್ರೋಹಿಗಳು ನಮ್ಮೊಳಗೆ ಈಗಲೂ ಇದ್ದಾರೆ. ಸಂಗೊಳ್ಳಿ ರಾಯಣ್ಣನ ದೇಶಪ್ರೇಮ, ಹೋರಾಟ ಮನೋಭಾವವನ್ನು ನಾವು ರೂಢಿಸಿಕೊಂಡಾಗ ಮಾತ್ರ ರಾಯಣ್ಣನ ಆಶಯ ಈಡೇರುತ್ತದೆ ಎಂದರು.

ನಾಲ್ವರ ವಿರುದ್ಧ ಅಭಿಯೋಜನೆ ಅನುಮತಿಗೆ ಇಂದು ರಾಜ್ಯಪಾಲರ ಭೇಟಿ: ಸಿದ್ದರಾಮಯ್ಯ
ಹುಬ್ಬಳ್ಳಿ: ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಸಚಿವರಾದ ಮುರುಗೇಶ ನಿರಾಣಿ, ಶಶಿಕಲಾ ಜೊಲ್ಲೆ, ಜನಾರ್ದನ ರೆಡ್ಡಿ ವಿರುದ್ಧದ ಪ್ರಕರಣಗಳ ಬಗ್ಗೆ ಅಭಿಯೋಜನೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಸಚಿವರು, ಶಾಸಕರೊಂದಿಗೆ ಶನಿವಾರ ರಾಜ್ಯಪಾಲರನ್ನು ಭೇಟಿ ಮಾಡಿ ಆಗ್ರಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Advertisement

ಸುದ್ದಿಗಾರರ ಜತೆ ಮಾತನಾಡಿ, ನಾಲ್ವರ ವಿರುದ್ಧದ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ಗೆ ಕೇಳಿ ಬಹಳ ದಿನಗಳು ಕಳೆದಿವೆ. ಈ ಪ್ರಕರಣಗಳಲ್ಲಿ ಈಗಾಗಲೇ ವಿಚಾರಣೆ ಮುಗಿದು ದೋಷಾರೋಪಣೆ ಪಟ್ಟಿ ಸಲ್ಲಿಸಲು ಬಾಕಿಯಿದೆ. ಆದರೆ ನನ್ನ ಪ್ರಕರಣದಲ್ಲಿ ಯಾವುದೇ ವಿಚಾರಣೆ ನಡೆದಿಲ್ಲ. ವರದಿಯೂ ಇಲ್ಲ. ಬಿಜೆಪಿ ಹೈಕಮಾಂಡ್‌ ಹಾಗೂ ಜೆಡಿಎಸ್‌ ಸೇರಿಕೊಂಡು ನನ್ನ ಹಾಗೂ ನಮ್ಮ ಸರಕಾರವನ್ನು ಗುರಿ ಮಾಡಿದ್ದಾರೆ. ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನದಲ್ಲಿದ್ದಾರೆ ಎಂದರು.

ಬಿಜೆಪಿ ನಾಯಕರು ರಾಜೀನಾಮೆಗೆ ಆಗ್ರಹಿಸಿದ ಕೂಡಲೇ ಕೊಡಲಾಗದು. ವಿಜಯೇಂದ್ರ ರಾಜೀನಾಮೆ ನೀಡುವಂತೆ ನಾನೂ ಆಗ್ರಹಿಸುತ್ತೇನೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅವರು ರಾಜೀನಾಮೆ ಕೊಡುತ್ತಾರಾ? ಅಭಿಯೋಜನೆ ವಿಚಾರವಾಗಿ ಶನಿವಾರ ವಿಚಾರಣೆ ನಡೆಯಲಿದೆ. ಹೈಕೋರ್ಟ್‌ ತೀರ್ಮಾನ ಏನೆಂಬುದು ಸ್ಪಷ್ಟವಾಗಲಿದೆ. ಈ ವಿಚಾರದಲ್ಲಿ ನಾವೇನು ತಪ್ಪು ಮಾಡಿಲ್ಲ ಎಂದರು.

ಬಿಜೆಪಿ ನಾಯಕರಿಂದ ಆಪರೇಷನ್‌ ಕಮಲಕ್ಕೆ ನಿರಂತರ ಯತ್ನ: ಸಿದ್ದರಾಮಯ್ಯ
ನಮ್ಮ ಶಾಸಕರು ದುಡ್ಡಿನ ಆಸೆಗೆ ಬಲಿಯಾಗುವವರಲ್ಲ: ಸಿಎಂ

ಬಿಜೆಪಿ ನಾಯಕರು ಆಪರೇಷನ್‌ ಕಮಲಕ್ಕೆ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಬಿಜೆಪಿಯವರು ನಮ್ಮ ಶಾಸಕರ ಸಂಪರ್ಕ ವಿಷಯವಾಗಿ ಶಾಸಕ ರವಿ ಗಣಿಗ ಹೇಳಿದ್ದಾರೆ. ನಾನು ಅವರೊಂದಿಗೆ ಮಾತನಾಡಿದಾಗ ಇದು ನಿಜ ಎಂದಿದ್ದಾರೆ. ಬಿಜೆಪಿ ನಾಯಕರಿಗೆ ಜನರಿಂದ ಆಶೀರ್ವಾದ ಪಡೆದು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಉದಾಹರಣೆಗಳಿಲ್ಲ. ಆಪರೇಷನ್‌ ಕಮಲದ ಮೂಲಕವೇ ಅಧಿಕಾರಕ್ಕೆ ಬಂದಿದ್ದಾರೆ. ಆದರೆ ಈ ಬಾರಿ ಆಪರೇಷನ್‌ ಕಮಲ ಸರಳವಾಗಿಲ್ಲ. ಸುಮಾರು 60 ಶಾಸಕರ ರಾಜೀನಾಮೆ ಕೊಡಿಸಬೇಕು. ನಮ್ಮ ಶಾಸಕರು ಯಾರೂ ದುಡ್ಡಿನ ಆಸೆಗೆ ಬಲಿಯಾಗುವುದಿಲ್ಲ ಎಂದರು.

ಮಹದಾಯಿ ಯೋಜನೆ ಅನುಷ್ಠಾನಕ್ಕೆ ನಾವು ಸಿದ್ಧರಿದ್ದೇವೆ. ಕೇಂದ್ರ ಸರಕಾರದ ಪರಿಸರ ಇಲಾಖೆಯಿಂದ ಅನುಮತಿ ಕೊಡಿಸಬೇಕು. ಪರಿಸರ ಇಲಾಖೆ ಅನುಮತಿ ಕೊಡಿಸಿದರೆ ಇಂದೇ ಪ್ರಾರಂಭಿಸಲಾಗುವುದು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಕೇಳಬೇಕಾದ ಪ್ರಶ್ನೆಯನ್ನು ನನ್ನ ಕೇಳಿದರೆ ಹೇಗೆ. ಅವರಿಗೂ ಈ ಕುರಿತು ಪ್ರಶ್ನೆ ಕೇಳಬೇಕು ಎಂದರು.

ದರ್ಶನ್‌ಗೆ ಜೈಲಿನಲ್ಲಿ ರಾಜ್ಯಾತಿಥ್ಯ ಸಂಬಂಧಿಸಿ ಯಾರು ತಪ್ಪು ಮಾಡಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ಆರೋಪಿತರನ್ನು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರ ಮಾಡಲಾಗಿದೆ. ಘಟನೆಗೆ ಸಂಬಂಧಿಸಿ ಹಿರಿಯ ಅಧಿಕಾರಿಗಳಿಗೂ ನೋಟಿಸ್‌ ನೀಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next