ಬೆಂಗಳೂರು: ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ಕಲ್ಪಿಸಲು ರಾಜ್ಯ ವಿಧಾನ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಆಗ್ರಹಿಸಿದ್ದಾರೆ.
ಸಂವಿಧಾನದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇವೇಗೌಡರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಮಹಿಳಿಯರಿಗೆ ಶೇಕಡಾ 33% ರಷ್ಟು ಮೀಸಲಾತಿ ನೀಡುವ ವಿಧೇಯಕ ಅಂಗೀಕಾರವಾಗಿದೆ. 24 ವರ್ಷ ಕಳೆದರೂ ಎರಡೂ ರಾಷ್ಟ್ರೀಯ ಪಕ್ಷಗಳು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳದೇ ಅನಗತ್ಯ ವಿಳಂಬ ಧೋರಣೆ ತಾಳುತ್ತಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳು ಮಹಿಳೆಯರ ಬಗ್ಗೆ ಕಾಳಜಿ ಇಲ್ಲ ಎಂದು ಹೇಳಿ ಬಿಡಿ ಎಂದರು.
ಈ ಸಂಧರ್ಭದಲ್ಲಿ ಮಧ್ಯ ಪ್ರವೇಶಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಹಾಸನ ಜಿಲ್ಲೆಯಲ್ಲಿ ಒಬ್ಬ ಮಹಿಳೆ ಸಭೆ ನಡೆಸಲು ಅವಕಾಶ ಕೊಡುತ್ತಿಲ್ಲ ಎಂದು ನೀವೇ ಆರೋಪ ಮಾಡುತ್ತೀರಿ. ಇಲ್ಲಿ ಬಂದು ಮಹಿಳಾ ಮೀಸಲಾತಿ ಕೊಡಬೇಕೆಂದು ಹೇಳುತ್ತೀರಿ ಎಂದು ಕಾಲೆಳೆದರು.
ಆಗ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಶಾಸಕ ಕೃಷ್ಣ ಬೈರೇಗೌಡ, ರೇವಣ್ಣ ಅವರು ಎದ್ದು ನಿಂತರೆ ಹಾಸನ ಜಿಲ್ಲೆ ಬಿಟ್ಟರೆ ಬೇರೆ ವಿಷಯ ಚರ್ಚೆಯೇ ಆಗುವುದಿಲ್ಲ. ಹಾಸನದ ಬಗ್ಗೆ ಚರ್ಚಿಸಲು ಪ್ರತ್ಯೇಕ ಅಧಿವೇಶನ ನಡೆಸಿಕೊಳ್ಳಿ ಎಂದರು.
ರೇವಣ್ಣ ನಾನು ರಾಷ್ಟ್ರೀಯ ವಿಷಯ ಮಾತನಾಡುತ್ತಿದ್ದೇನೆ. ಯುಪಿಎ ಸರ್ಕಾರ ಕೇಂದ್ರದಲ್ಲಿ 10 ವರ್ಷ ಅಧಿಕಾರದಲ್ಲಿತ್ತು. ಆಗಲೂ ಮಹಿಳಾ ಮೀಸಲಾತಿ ಜಾರಿಗೆ ತರಲಿಲ್ಲ. ಈಗಿನ ಎನ್‌ಡಿಎ ಸರ್ಕಾರ ಕೂಡ ಆಸಕ್ತಿ ತೋರುತ್ತಿಲ್ಲ. ಮಹಿಳಿಯರಿಗೆ ಶೇ 33 ರಷ್ಟು ಮೀಸಲಾತಿ ಕಲ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ನಿರ್ಣಯಕೈಗೊಳ್ಳುವಂತೆ ಮನವಿ ಆಗ್ರಹಿಸಿದರು.