Advertisement

ಆದಾಯ 5 ಲಕ್ಷಕ್ಕಿಂತ ಕಡಿಮೆಯಿದ್ದರೂ ರಿಟರ್ನ್ಸ್ ಫೈಲಿಂಗ್‌ ಕಡ್ಡಾಯ

01:11 AM Feb 03, 2019 | |

ನವದೆಹಲಿ: ‘ಅಂತೂ, ಬಜೆಟ್‌ನಲ್ಲಿ 5 ಲಕ್ಷ ರೂ. ವರೆಗಿನ ಆದಾಯಕ್ಕೆ ತೆರಿಗೆ ವಿನಾಯ್ತಿ ಘೋಷಿಸಲಾಗಿದೆ. ನನ್ನ ಸಂಬಳವಂತೂ 5 ಲಕ್ಷದೊಳಗೇ ಇದೆ. ಹಾಗಾಗಿ, ಇನ್ನು ಮುಂದೆ ರಿಟರ್ನ್ಸ್ ಸಲ್ಲಿಸುವ ತಲೆಬಿಸಿ ಇಲ್ಲ.’ ಹೀಗೇನಾದರೂ ನೀವು ಅಂದುಕೊಂಡಿದ್ದರೆ ಅದು ತಪ್ಪು. 5 ಲಕ್ಷದೊಳಗಿನ ಆದಾಯಕ್ಕೆ ತೆರಿಗೆ ವಿನಾಯ್ತಿ ಘೋಷಿಸಿರುವುದು ನಿಜ. ಆದರೆ, ಈ ವಿನಾಯ್ತಿಯ ಮಿತಿ 60 ವರ್ಷದೊಳಗಿನ ಎಲ್ಲ ನಾಗರಿಕರಿಗೆ ಈಗಲೂ 2.5 ಲಕ್ಷ ರೂ.ಗಲೇ ಆಗಿದೆ. ಈ ಮಿತಿಯಲ್ಲಿ ಸರ್ಕಾರ ಯಾವುದೇ ಬದಲಾವಣೆ ಮಾಡಿಲ್ಲ. ಹಾಗಾಗಿ, ನಿಮ್ಮ ಆದಾಯ 5 ಲಕ್ಷಕ್ಕಿಂತ ಕಡಿಮೆಯಿದ್ದರೂ ನೀವು ಐಟಿ ರಿಟರ್ನ್ಸ್ ಸಲ್ಲಿಸಲೇಬೇಕು. ವಿನಾಯ್ತಿಯಿದೆ ಎಂದು ತಿಳಿದು ರಿಟರ್ನ್ಸ್ ಸಲ್ಲಿಸದೇ ಇದ್ದರೆ, ಐಟಿ ಇಲಾಖೆಯಿಂದ ನೋಟಿಸ್‌ ಬರುವುದು ಖಚಿತ. ಮೂಲ ವಿನಾಯ್ತಿ ಮಿತಿ ಈಗಲೂ 2.5 ಲಕ್ಷ ರೂ.ಗಳೇ ಆಗಿದೆ. ಹಾಗಾಗಿ, ಎರಡೂವರೆ ಲಕ್ಷಕ್ಕಿಂತ ಹೆಚ್ಚಿನ ವೇತನವನ್ನು ಹೊಂದಿರುವ ಎಲ್ಲರೂ ರಿಟರ್ನ್ಸ್ ಸಲ್ಲಿಸಬೇಕು.

Advertisement

ಮೊದಲು ಐಟಿ ರಿಟರ್ನ್ಸ್ ಸಲ್ಲಿಸುವ ಮೂಲಕ ನಿಮ್ಮ ಒಟ್ಟು ಆದಾಯವನ್ನು ಘೋಷಿಸಬೇಕು (ಇದರಲ್ಲಿ ನಿಮ್ಮ ವೇತನ, ಉಳಿತಾಯ ಖಾತೆಯಿಂದ ಬಂದ ಬಡ್ಡಿ, ನಿಶ್ಚಿತ ಠೇವಣಿ ಇತ್ಯಾದಿ ಆದಾಯದ ಮೂಲಗಳು ಒಳಗೊಂಡಿರಬೇಕು). ನಂತರ ಮನೆ ಬಾಡಿಗೆ ಭತ್ಯೆ(ಎಚ್ಆರ್‌ಎ), ಸ್ಟಾಂಡರ್ಡ್‌ ಡಿಡಕ್ಷನ್‌, ಸೆಕ್ಷನ್‌ 80ಸಿ, 80ಡಿ ಅನ್ವಯ ಬರುವ ಡಿಡಕ್ಷನ್‌ಗಳು, ಗೃಹ ಸಾಲದ ಬಡ್ಡಿ… ಮುಂತಾದವು ಗಳನ್ನು ತೋರಿಸಿ ವಿನಾಯ್ತಿಯನ್ನು ಕ್ಲೇಮ್‌ ಮಾಡ ಬೇಕು. ಈ ಎಲ್ಲ ಡಿಡಕ್ಷನ್‌ಗಳನ್ನು ಕಳೆದ ನಂತರ, ನಿಮ್ಮ ನಿವ್ವಳ ತೆರಿಗೆಯುಕ್ತ ಆದಾಯ 5 ಲಕ್ಷ ರೂ.ಗಳನ್ನು ಮೀರದೇ ಇದ್ದರೆ, ಆಗ ಮಾತ್ರ ನೀವು ಸೆಕ್ಷನ್‌ 87ಎ ಅನ್ವಯ ರಿಬೇಟ್ ಪಡೆಯಲು ಅರ್ಹ ರಾಗಿರುತ್ತೀರಿ.

ನಿಮ್ಮ ಆದಾಯ 5 ಲಕ್ಷ ರೂ. ದಾಟಿದ್ದರೆ?: ಈ ಬಜೆಟ್‌ನಲ್ಲಿ ಆದಾಯ ತೆರಿಗೆಯ ಸ್ಲ್ಯಾಬ್‌ನಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಹೀಗಾಗಿ, ನಿಮ್ಮ ಆದಾಯವು 5 ಲಕ್ಷ ರೂ.ಗಳನ್ನು ದಾಟಿದ್ದರೆ, ನಿಮಗೆ ರಿಬೇಟ್‌ನ ಲಾಭ ಸಿಗುವುದಿಲ್ಲ. ಅಂದರೆ, ನಿಮ್ಮ ಆದಾಯ 5 ಲಕ್ಷ ರೂ.ಗಳಿಗಿಂತ 1 ರೂ. ಹೆಚ್ಚಿದ್ದರೂ ನೀವು ಈ ಹಿಂದೆ ಇದ್ದ ಸ್ಲ್ಯಾಬ್‌ನಂತೆಯೇ ಶೇ.20ರಷ್ಟು ತೆರಿಗೆ ಪಾವತಿಸಲೇಬೇಕು (ಅಂದರೆ, 2.5 ಲಕ್ಷ ರೂ.ಗಳಿಂದಲೇ ನಿಮ್ಮ ತೆರಿಗೆ ಆರಂಭವಾಗುತ್ತದೆ).

ಗ್ರಾಚುಟಿ ಮಿತಿಯೂ ಏರಿಕೆ: ಬಜೆಟ್‌ನಲ್ಲಿ ನೌಕರರಿಗೆ ನೀಡಲಾಗಿರುವ ಮತ್ತೂಂದು ಸಿಹಿಸುದ್ದಿಯೆಂದರೆ ಗ್ರಾಚುಟಿ ಮಿತಿ ಏರಿಕೆ. ಈವರೆಗೆ 10 ಲಕ್ಷ ರೂ.ಗಳಿದ್ದ ಗ್ರಾಚುಟಿ ಮಿತಿಯನ್ನು ಈಗ 20 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ. ಕನಿಷ್ಠ 10 ನೌಕರರನ್ನು ಹೊಂದಿರುವ ಯಾವುದೇ ಸಂಸ್ಥೆಯಲ್ಲಿ ಕನಿಷ್ಠ 5 ವರ್ಷ ಕಾರ್ಯನಿರ್ವಹಿಸುವ ನೌಕರನಿಗೆ ಗ್ರಾಚುಟಿಯ ಲಾಭ ಸಿಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next