Advertisement

ಹಕ್ಕು ರಕ್ಷಣೆಗಾಗಿ ಅಧ್ಯಕ್ಷೆ ವಿರುದ್ಧ ತಿರುಗಿಬಿದ್ದ ಸದಸ್ಯರು

12:42 PM Mar 08, 2018 | Team Udayavani |

ಮೈಸೂರು: ನಮ್ಮ ಹಕ್ಕುಗಳನ್ನು ರಕ್ಷಣೆ ಮಾಡಲಾಗದ ನೀವು ರಾಜೀನಾಮೆ ಕೊಟ್ಟು ಹೋಗಿ, ಇಲ್ಲವೇ ನಾವೇ ರಾಜೀನಾಮೆ ಕೊಟ್ಟು ಹೋಗುತ್ತೇವೆ ಎಂದು ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ ವಿರುದ್ಧ ಜೆಡಿಎಸ್‌-ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಜಿಪಂ ಅಬ್ದುಲ್‌ ನಜೀರ್‌ಸಾಬ್‌ ಸಭಾಂಗಣದಲ್ಲಿ ಬುಧವಾರ ಬೆಳಗ್ಗೆ 11ಕ್ಕೆ ಕರೆಯಲಾಗಿದ್ದ ಸಾಮಾನ್ಯ ಸಭೆ, ಕೋರಂ ಅಭಾವದಿಂದ ಎರಡು ಬಾರಿ ಮುಂದೂಡಲ್ಪಟ್ಟು, ಕಡೆಗೂ ಮಧ್ಯಾಹ್ನ 12.45ಕ್ಕೆ ಸೇರಿದಾಗ, ಆಡಳಿತಾರೂಢ ಜೆಡಿಎಸ್‌-ಬಿಜೆಪಿ ಸದಸ್ಯರು, ನಮ್ಮ ಕ್ಷೇತ್ರಗಳಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ನಮ್ಮನ್ನು ಕಡೆಗಣಿಸಿ, ಶಿಷ್ಠಾಚಾರ ಉಲ್ಲಂ ಸಲಾಗುತ್ತಿದೆ.

ಈ ಬಗ್ಗೆ ಕಳೆದ ಎರಡು ವರ್ಷಗಳಿಂದ ಸಭೆಗಳಲ್ಲಿ ನಿಮ್ಮ ಗಮನಕ್ಕೆ ತಂದರೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮವು ಆಗುತ್ತಿಲ್ಲ. ಶಿಷ್ಠಾಚಾರ ಉಲ್ಲಂಘನೆ ಪ್ರಕರಣಗಳೂ ನಿಂತಿಲ್ಲ. ಅಧ್ಯಕ್ಷರಾಗಿ ನಮ್ಮ ಹಕ್ಕುಗಳನ್ನು ರಕ್ಷಣೆ ಮಾಡಲು ನಿಮ್ಮಿಂದ ಆಗಲಿಲ್ಲವೆಂದರೆ ಆ ಸ್ಥಾನದಲ್ಲಿ ನೀವೇಕೆ ಮುಂದುವರಿಯುತ್ತೀರಿ, ರಾಜೀನಾಮೆ ಕೊಟ್ಟು ಹೊರಡಿ. ಇಲ್ಲವಾದರೆ ನಾವುಗಳೇ ರಾಜೀನಾಮೆ ಕೊಟ್ಟು ಹೋಗಬೇಕಾಗುತ್ತದೆ ಎಂದು ತರಾಟೆಗೆ ತೆಗೆದುಕೊಂಡರು.

ಸಭೆಯ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ ಹಾಗೂ ಐಎಫ್ಎಸ್‌ ಅಧಿಕಾರಿ ಮಣಿಕಂಠನ್‌ ಅವರಿಗೆ ಸಂತಾಪ ಸೂಚಿಸಿದ ನಂತರ ಶಿಷ್ಠಾಚಾರ ಉಲ್ಲಂಘನೆ ಸಂಬಂಧ ಬಿಜೆಪಿಯ ಸದಾನಂದ, ಬೇಸಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಚರ್ಚೆ ಸಂಬಂಧ ಕಾಂಗ್ರೆಸ್‌ನ ಡಾ.ಪುಷ್ಪಾವತಿ ಅಮರನಾಥ್‌ ನಿಲುವಳಿ ಸೂಚನೆ ಕೊಟ್ಟಿದ್ದರು.

ಆದರೆ, ನಿಲುವಳಿ ಸೂಚನೆ ಮಂಡನೆಗೆ ಅವಕಾಶಕೊಡದೆ ಕಳೆದ ಸಭೆಯ ಅನುಪಾಲನಾ ವರದಿ ಕೈಗೆತ್ತಿಕೊಂಡಿದ್ದರಿಂದ ಜೆಡಿಎಸ್‌-ಬಿಜೆಪಿ ಹಾಗೂ ಕಾಂಗ್ರೆಸ್‌ ಸದಸ್ಯರು ತಿರುಗಿಬಿದ್ದು, ಮೊದಲು ನಮ್ಮ ನಿಲುವಳಿ ಸೂಚನೆ ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿದರು. ಸದಸ್ಯರ ಒತ್ತಾಯಕ್ಕೆ ಮಣಿದ ಅಧ್ಯಕ್ಷೆ ನಯಿಮಾ ಸುಲ್ತಾನ, ಶಿಷ್ಠಾಚಾರ ಉಲ್ಲಂಘನೆ ಕುರಿತ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡಿದರು.

Advertisement

ಈ ಬಗ್ಗೆ ಮಾತನಾಡಿದ ಬಿಜೆಪಿಯ ಮಂಗಳಾ ಸೋಮಶೇಖರ್‌, ನಂಜನಗೂಡಿನಲ್ಲಿ 9ರಂದು ನಡೆಯುವ ಮುಖ್ಯಮಂತ್ರಿಯವರ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಜಿಪಂ ಸದಸ್ಯರುಗಳ ಹೆಸರಿಲ್ಲ. ಬದಲಿಗೆ ಮಾಜಿ ಸದಸ್ಯರು, ಕಾಂಗ್ರೆಸ್‌ ಮುಖಂಡರುಗಳ ಹೆಸರು ಹಾಕಿಸಿದ್ದಾರೆ. ಇದು ಹಕ್ಕುಚ್ಯುತಿ ಅಲ್ಲವೇ? ಇಂತಹ ವ್ಯವಸ್ಥೆಯೊಳಗೆ ಇರಲು ನಮಗಿಷ್ಟವಿಲ್ಲ. ಅಧ್ಯಕ್ಷ ಸ್ಥಾನಕ್ಕೆ ನೀವು ರಾಜೀನಾಮೆ ಕೊಡಿ, ಇಲ್ಲವೇ ನಮ್ಮ ರಾಜೀನಾಮೆ ಪಡೆದುಕೊಳ್ಳಿ ಎಂದು ಆಗ್ರಹಿಸಿದರು.

ಅಧಿಕಾರಿಗಳ ಹಾರಿಕೆ ಉತ್ತರ: ಬಿಜೆಪಿಯ ಸದಾನಂದ ಮಾತನಾಡಿ, ಮಾ.1ರಂದು ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸಂಸದ ಧ್ರುವನಾರಾಯಣ ಹಾಗೂ ಡಾ.ಯತೀಂದ್ರ ಅವರು ವಿವಿಧ ಕಾಮಗಾರಿಗಳನ್ನು ಉದ್ಘಾಟನೆ ಮಾಡಿದ್ದಾರೆ. ಸ್ಥಳೀಯ ಚುನಾಯಿತ ಪ್ರತಿನಿಧಿಗಳಾರನ್ನೂ ಈ ಕಾರ್ಯಕ್ರಮಕ್ಕೆ ಕರೆದಿಲ್ಲ. ಈಬಗ್ಗೆ ಜಿಲ್ಲಾಧಿಕಾರಿ ಮತ್ತು ಎಸ್‌.ಪಿ ಅವರನ್ನು ಕೇಳಿದರೆ ಜಿಪಂ ಸಿಇಒ ಜವಾಬ್ದಾರರು ಎನ್ನುತ್ತಾರೆ. ಸಿಇಒ ಹಾರಿಕೆ ಉತ್ತರ ಕೊಡುತ್ತಾರೆ ಎಂದರು.

ಹಕ್ಕು ರಕ್ಷಣೆ ಮಾಡುತ್ತಿಲ್ಲ: ಸದಸ್ಯ ವೆಂಕಟಸ್ವಾಮಿ ಮಾತನಾಡಿ, ನಮ್ಮ ಎಚ್‌.ಡಿ.ಕೋಟೆ ಕ್ಷೇತ್ರದಲ್ಲಿ ಶಾಸಕರಿಲ್ಲದಿರುವುದರಿಂದ ಎಲ್ಲವನ್ನೂ ಸಂಸದ ಧ್ರುವನಾರಾಯಣ ಅವರೇ ಮಾಡಿಕೊಂಡು ಹೋಗುತ್ತಿದ್ದಾರೆ. ಇತ್ತೀಚೆಗೆ ಎಚ್‌.ಡಿ.ಕೋಟೆ ತಾಲೂಕಿನಲ್ಲಿ ಡಯಾಲಿಸೀಸ್‌ ಕೇಂದ್ರ ಉದ್ಘಾಟನಾ ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ಜಿಪಂ ಸದಸ್ಯರ ಹೆಸರೇ ಇರಲಿಲ್ಲ. ಈ ಬಗ್ಗೆ ಕೇಳಿದರೆ ಅಧಿಕಾರಿಗಳು ಹಾರಿಕೆ ಉತ್ತರ ಕೊಡುತ್ತಾರೆ. ಜಿಪಂ ಅಧ್ಯಕ್ಷ-ಉಪಾಧ್ಯಕ್ಷರೂ ನಮ್ಮ ಹಕ್ಕು ರಕ್ಷಣೆ ಮಾಡುತ್ತಿಲ್ಲ ಎಂದರೆ, ಮಂಗಳಾ ಸೋಮಶೇಖರ್‌ 2 ವರ್ಷದಿಂದ ನಮ್ಮ ಹಕ್ಕುಗಳಿಗೇ ಹೋರಾಡಬೇಕಾದ ದುಸ್ಥಿತಿ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜೆಡಿಎಸ್‌ನ ಬೀರಿಹುಂಡಿ ಬಸವಣ್ಣ, ಕಳೆದ 22 ತಿಂಗಳಲ್ಲಿ 40 ಸಾವಿರ ಜನರನ್ನು ಪ್ರತಿನಿಧಿಸುವ ಜಿಪಂ ಸದಸ್ಯರ ಹಕ್ಕುಗಳಿಗೆ ಚ್ಯುತಿ ಬರುತ್ತಿದೆ. ನಮ್ಮ ಹಕ್ಕುಗಳನ್ನೇ ರಕ್ಷಣೆ ಮಾಡಿಕೊಳ್ಳಲಾಗದಿದ್ದರೆ ನಾವೇಕೆ ಸದಸ್ಯರಾಗಿರಬೇಕು ಎಂದರು. ಚುನಾಯಿತ ಪ್ರತಿನಿಧಿಯಲ್ಲದವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಂದು ಶಾಲಾ ಕಟ್ಟಡ ಉದ್ಘಾಟಿಸುತ್ತಾರೆ.

ಸ್ಥಳೀಯ ಜಿಪಂ ಸದಸ್ಯೆ ರೂಪಾ ಲೋಕೇಶ್‌ ಅವರ ಮನೆಯ ಮುಂದೆಯೇ ಕಾರ್ಯಕ್ರಮ ನಡೆದರೂ ಅವರನ್ನು ಶಿಷ್ಠಾಚಾರದ ಪ್ರಕಾರ ಆಹ್ವಾನಿಸುವುದಿರಲಿ, ಅವರಿಗೆ ಮಾಹಿತಿಯೇ ಇರುವುದಿಲ್ಲ. ಈ ಬಗ್ಗೆ ಅವರ ಪತಿ ಲೋಕೇಶ್‌ ಕೇಳಲು ಹೋದರೆ ಪೊಲೀಸರನ್ನು ಕರೆಸಿ ದಬ್ಟಾಳಿಕೆ ಮಾಡಿ ಜೀಪ್‌ ಎತ್ತಿಹಾಕಿಕೊಂಡು ಹೋಗಿ ಎಫ್ಐಆರ್‌ ಹಾಕುತ್ತಾರೆ. ಅಧಿಕಾರಿಗಳು ಏನು ಮಾಡುತ್ತಿದ್ದಾರೆ.

ಸದಸ್ಯರ ಹಕ್ಕುಗಳನ್ನು ರಕ್ಷಣೆ ಮಾಡುವಲ್ಲಿ ಅಧ್ಯಕ್ಷರು ವಿಫ‌ಲರಾಗಿದ್ದಾರೆ. ಈ ಬಗ್ಗೆ ನಿರ್ಣಯ ಆಗಲಿ ಎಂದು ಒತ್ತಾಯಿಸಿದರು. ಅಚ್ಯುತಾನಂದ, ಎಂ.ಪಿ.ನಾಗರಾಜ್‌, ಡಿ.ರವಿಶಂಕರ್‌, ಚಂದ್ರಿಕಾ ಸುರೇಶ್‌ ಮೊದಲಾದವರು ಇದಕ್ಕೆ ದನಿಗೂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಸಿಇಒ ಪಿ.ಶಿವಶಂಕರ್‌, ಜಿಲ್ಲೆಯಲ್ಲಿ ಶಿಷ್ಠಾಚಾರ ರಕ್ಷಣೆ ಮಾಡುವ ಅಧಿಕಾರಿ ಜಿಲ್ಲಾಧಿಕಾರಿಯವರು,

ಡೀಸಿ ಕಚೇರಿಯ ಶಿಷ್ಠಾಚಾರ ವಿಭಾಗವೇ ಆಹ್ವಾನ ಪತ್ರಿಕೆ ಅಂತಿಮಗೊಳಿಸುತ್ತದೆ. ಗುದ್ದಲಿಪೂಜೆ ಎಂಬುದು ಶಿಷ್ಠಾಚಾರ ವ್ಯಾಪ್ತಿಯೊಳಗೆ ಬರಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಘಟನೆ ಸಂಬಂಧ ಮೇಲ್ನೋಟಕ್ಕೆ ಶಿಷ್ಠಾಚಾರ ಉಲ್ಲಂಘನೆ ಕಂಡುಬಂದಿದ್ದರಿಂದ ಸಂಬಂಧಿಸಿದ ಅಧಿಕಾರಿ ವಿರುದ್ಧ ವಿಚಾರಣೆ ನಡೆದಿದೆ. ಅಮಾನತುಮಾಡುವ ಅಧಿಕಾರ ನನಗಿಲ್ಲ. ಸಕ್ಷಮ ಪ್ರಾಧಿಕಾರಕ್ಕೆ ಶಿಫಾರಸು ಮಾಡಬಹುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next