Advertisement

2,000 ರೂ ನೋಟು ವಾಪಸ್‌: ವಾಕ್ಸಮರ ಬಿರುಸು

10:30 PM May 20, 2023 | Team Udayavani |
ಉತ್ತಮ ಶಿಕ್ಷಣ ಹೊಂದಿದ ಪ್ರಧಾನಿ ಬೇಕು: ದಿಲ್ಲಿ ಸಿಎಂ
ಶಿಕ್ಷಣ ವ್ಯಕ್ತಿಯನ್ನು ಜ್ಞಾನಿಯನ್ನಾಗಿಸುವುದಿಲ್ಲ: ಪ್ರಧಾನ್‌
ನವದೆಹಲಿ:  2 ಸಾವಿರ ರೂ. ನೋಟುಗಳನ್ನು ಮಂಗಳವಾರ (ಮೇ 23)ದಿಂದ ಅನ್ವಯವಾಗುವಂತೆ ಹಿಂಪಡೆಯಲು ಆರ್‌ಬಿಐ ನಿರ್ಧರಿಸಿರುವಂತೆಯೇ ಅದರ ವಿರುದ್ಧ ಪರ ವಿರೋಧಗಳ ಚರ್ಚೆ ಶುರುವಾಗಿದೆ. ದೇಶಕ್ಕೆ ಉತ್ತಮ ಶಿಕ್ಷಣ ಹೊಂದಿರುವ ಪ್ರಧಾನಿ ಬೇಕು ಎಂದು ಟ್ವೀಟ್‌ ಮಾಡಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ “ಶಿಕ್ಷಿತ  ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌  ಮತ್ತೆ ಸುಳ್ಳುಗಳನ್ನು ಮಾರಾಟ ಮಾಡಲು ಹೊರಟಿದ್ದಾರೆ,’ ಎಂದು ಹೇಳಿದ್ದಾರೆ.
“2,000 ರೂ. ಮುಖಬೆಲೆಯ ನೋಟುಗಳು ಪರಿಚಯಿಸುವುದರಿಂದ ಭ್ರಷ್ಟಾಚಾರ ನಿರ್ಮೂಲನೆಯಾಗಲಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಇದೀಗ 2,000 ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದರಿಂದ ಭ್ರಷ್ಟಾಚಾರ ನಿರ್ಮೂಲನೆಯಾಗಲಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ನಾನು ಹೇಳುವುದು ನಮಗೆ ಶಿಕ್ಷಿತ ಪ್ರಧಾನಿ ಬೇಕು ಎಂದು,’ ಎಂಬುದಾಗಿ ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದಾರೆ.
“ಕೇವಲ ಶಿಕ್ಷಣವು ವ್ಯಕ್ತಿಯನ್ನು ಜ್ಞಾನಿಯಾಗಿ ಮಾಡುವುದಿಲ್ಲ’ ಎಂಬ ಕಬೀರರ ದೋಹೆಯನ್ನು ಉಲ್ಲೇಖೀಸಿದ ಸಚಿವ ಪ್ರಧಾನ್‌, “2,000 ರೂ. ಮುಖಬೆಲೆಯ ನೋಟುಗಳಿಗೆ ಕಾನೂನು ಮಾನ್ಯತೆ ಮುಂದುವರಿಯಲಿದೆ. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ನವೀಕರಣಗೊಂಡ ಶೀಶ್‌ ಮಹಲ್‌ನಲ್ಲಿ ವಾಸಿಸುತ್ತಿರುವ ಕಡು ಭ್ರಷ್ಟರು ಈ ಕ್ರಮದಿಂದ ಗಲಿಬಿಲಿಗೊಳ್ಳುವುದು ಸಾಮಾನ್ಯ,’ ಎಂದು ಪ್ರಧಾನ್‌ ವ್ಯಂಗ್ಯವಾಡಿದ್ದಾರೆ.
ಪರಿಣಾಮ ಬೀರದು: 
“2000 ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆಯುವ ಆರ್‌ಬಿಐ ನಿರ್ಧಾರದಿಂದ ಆರ್ಥಿಕತೆಯ ಮೇಲೆ ಯಾವುದೇ “ಗ್ರಾಹ್ಯ ಪರಿಣಾಮ’ ಬೀರುವುದಿಲ್ಲ. ಏಕೆಂದರೆ ಹಿಂತಿರುಗಿಸಿದ ಅಂತಹ ನೋಟುಗಳನ್ನು ಕಡಿಮೆ ಮುಖಬೆಲೆಯ ನೋಟುಗಳಲ್ಲಿ ಸಮಾನವಾದ ನಗದು ಅಥವಾ ಠೇವಣಿಯಿಂದ ಬದಲಾಯಿಸಲಾಗುತ್ತದೆ,’ ಎಂದು ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ಅರವಿಂದ ಪನಗಾರಿಯ ಹೇಳಿದ್ದಾರೆ.
ನೋಟುಗಳ ಬದಲಾವಣೆ ಹೇಗೆ?
23ರ ನಂತರ ನೀವು ಯಾವುದೇ ಬ್ಯಾಂಕಿಗೆ ಹೋಗಿ, ಒಂದು ದಿನದಲ್ಲಿ 2,000 ರೂ. ಮುಖಬೆಲೆಯ ಗರಿಷ್ಠ 10 ನೋಟುಗಳನ್ನು ಬೇರೆ ಮುಖಬೆಲೆಯ ನೋಟುಗಳೊಂದಿಗೆ ವಿನಿಮಯ ಮಾಡಿಕೊಳ್ಳಬಹುದು. ಸೆ.30ರವರೆಗೆ ಇರಲಿದೆ. ಬ್ಯಾಂಕುಗಳ ಇಲ್ಲದ ಪ್ರದೇಶಗಳಲ್ಲಿ ಬಿಸೆನೆಸ್‌ ಕರೆಸ್ಪಾಂಡೆಟ್ಸ್‌ ಮೂಲಕ ಒಬ್ಬ ಖಾತೆದಾರರು ದಿನಕ್ಕೆ ಗರಿಷ್ಠ 4,000 ರೂ.ಗಳನ್ನು ಬದಲಾಯಿಸಿಕೊಳ್ಳಬಹುದು. ನಿಮ್ಮದೇ ಬ್ಯಾಂಕ್‌ ಖಾತೆಯಲ್ಲಿ ಡೆಪಾಸಿಟ್‌ ಮಾಡಬೇಕಾದರೆ, ಅದಕ್ಕೆ ಯಾವುದೇ ಮಿತಿ ಇಲ್ಲ. ಆದರೆ ಕೆವೈಸಿ ಸೇರಿದಂತೆ ಕೆಲವು ಸಾಮಾನ್ಯ ನಿಬಂಧನೆಗಳನ್ನು ಪೂರೈಸಿರಬೇಕು.
ಈ ಪ್ರಕ್ರಿಯೆಗೆ ಶುಲ್ಕ ಇದೆಯೇ?
ನೋಟುಗಳ ಬದಲಾವಣೆಗೆ ಯಾವುದೇ ಶುಲ್ಕ ಇರುವುದಿಲ್ಲ. ಸಂಪೂರ್ಣ ಉಚಿತವಾಗಿರುತ್ತದೆ.
ನೋಟುಗಳನ್ನು ಪಡೆಯಲು ಬ್ಯಾಂಕುಗಳು ನಿರಾಕರಿಸಿದರೆ?
2,000 ರೂ. ನೋಟುಗಳನ್ನು ಪಡೆಯಲು ಬ್ಯಾಂಕುಗಳು ನಿರಾಕರಿಸಿದರೆ, ಆ ನಿಗದಿತ ಬ್ಯಾಂಕಿಗೆ ಮೊದಲು ದೂರು ನೀಡಬೇಕು. 30 ದಿನಗಳವರೆಗೂ ದೂರಿನ ಕುರಿತು ಬ್ಯಾಂಕು ಪ್ರತಿಕ್ರಿಯಿಸದೇ ಇದ್ದರೆ ಅಥವಾ ದೂರುದಾರರಿಗೆ ತೃಪ್ತಿಕರವಾಗದಿದ್ದರೆ ರಿಸರ್ವ್‌ ಬ್ಯಾಂಕ್‌-ಇಂಟಿಗ್ರೇಟೆಡ್‌ ಒಂಬುಡ್ಸಮನ್‌ ಸ್ಕೀಮ್‌-2021ರ ಅಡಿಯಲ್ಲಿ ಆರ್‌ಬಿಐನ ದೂರು ನಿರ್ವಹಣಾ ವ್ಯವಸ್ಥೆಯ ಪೋರ್ಟಲ್‌ನಲ್ಲಿ ದೂರು ದಾಖಲಿಸಿಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next