ಗದಗ: ಕಪ್ಪತ್ತಗುಡ್ಡ ವನ್ಯಜೀವಿಧಾಮ ಎಂದು ಘೋಷಿಸಿರುವುದು ಬಗರಹುಕುಂ ಸಾಗುವಳಿದಾರರಿಗೆ ಮರಣ ಶಾಸನ ಬರೆದಂತಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಸರಕಾರ ವನ್ಯಧಾಮ ಘೋಷಣೆ ಹಿಂಪಡೆಯಬೇಕು ಎಂದು ಬಗರ್ ಹುಕುಂ ಸಾಗುವಳಿದಾರರ ರಕ್ಷಣಾ ವೇದಿಕೆ ಒತ್ತಾಯಿಸಿದೆ.
ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಕಪ್ಪತ ಉತ್ಸವದಲ್ಲಿ ಸಾಗುವಳಿದಾರರ ರಕ್ಷಣಾ ವೇದಿಕೆ ಪ್ರಮುಖರು ಧಾರವಾಡ ವಲಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚೌಹಾಣ್ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯ ಮುಂಡರಗಿ, ಶಿರಹಟ್ಟಿ, ರೋಣ ಮತಕ್ಷೇತ್ರಗಳ ವ್ಯಾಪ್ತಿಯ ಸಾವಿರಾರು ಬಡ ರೈತ ಕುಟುಂಬಗಳು ತಲೆತಲಾಂತರದಿಂದ ಕಪ್ಪತಗುಡ್ಡ ವ್ಯಾಪ್ತಿಯ ಬರಡು ಭೂಮಿಯನ್ನು ಹಸನಮಾಡಿಕೊಂಡು ಉಳುಮೆ ಮಾಡಿ, ತುತ್ತಿನ ಚೀಲ ತುಂಬಿಕೊಳ್ಳುತ್ತಿದ್ದಾರೆ. ಆದರೆ, ಈಗ ಸರಕಾರ ಕಪ್ಪತ್ತಗುಡ್ಡವನ್ನು ವನ್ಯಜೀವಿ ಧಾಮವನ್ನಾಗಿ ಘೋಷಿಸಿರುವುದು ಸರಿಯಲ್ಲ. ಸರಕಾರದ ಈ ನಡೆಯಿಂದ ಈ ಭಾಗದ ರೈತರಲ್ಲಿ ಒಕ್ಕಲೆಬ್ಬಿಸುವ ಭೀತಿ ಎದುರಾಗಿದೆ ಎಂದು ದೂರಿದರು.
ಬಗರಹುಕುಂ ಸಾಗುವಳಿದಾರರ ಹಿತ ಕಾಪಾಡುವುದರ ಜೊತೆಗೆ ಬಗರಹುಕುಂ ಸಾಗುವಳಿದಾರರಿಗೆ ನ್ಯಾಯ ಒದಗಿಸಬೇಕು ಎಂದು ಬಗರ್ ಹುಕುಂ ಸಾಗುವಳಿದಾರರ ರಕ್ಷಣಾ ವೇದಿಕೆಯ ಉಪಾಧ್ಯಕ್ಷ ಶಂಕರಗೌಡ ಜಾಯನಗೌಡ್ರ ಆಗ್ರಹಿಸಿದ್ದಾರೆ. ಶೇಖಪ್ಪ ಲಮಾಣಿ, ಈಶ್ವರಗೌಡ್ರ ಪಾಟೀಲ, ಕುಮಾರ ಬಂಡಿವಡ್ಡರ, ರವಿ ಲಮಾಣಿ, ರಾಜು ರಾಠಢೋಡ, ಪುಟ್ಟಪ್ಪ ಲಮಾಣಿ, ದೇವು ಲಮಾಣಿ, ಹುಚ್ಚಪ್ಪ ಬಂಡಿವಡ್ಡರ, ಬರಮಪ್ಪ ಚಲವಾದಿ, ಪರಮೇಸಿ ಹೊಸಳ್ಳಿ, ಬಸವಣ್ಣೆಯ್ಯ ಹಿರೇಮಠ ಮಹೇಶ ದಾಸರ, ಮಹೇಶ ಪಾಟೀಲ, ಶಿವು ಬಂಡಿವಡ್ಡರ ಇದ್ದರು.