ಮೈಸೂರು: ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಬರಬೇಕಾಗಿರುವ ನ್ಯಾಯಯುತ ಪಾಲಿನ ವಿಚಾರದಲ್ಲಿ ನಾವು ಹೇಳುತ್ತಿರುವುದು ಸುಳ್ಳು ಎಂದಾದರೆ ನಾನು ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ. ಕೇಂದ್ರ ಸರ್ಕಾರ ಸುಳ್ಳು ಹೇಳಿದೆ ಎಂದಾದರೆ ನರೇಂದ್ರ ಮೋದಿ ರಾಜೀನಾಮೆ ನೀಡುತ್ತಾರೆಯೆ? ನಿರ್ಮಲಾ ಸೀತಾರಾಮನ್ ರಾಜೀನಾಮೆ ನೀಡುತ್ತಾರೆಯೆ? ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಭಾನುವಾರ ನಡೆದ ಕೃಷ್ಣರಾಜ, ಚಾಮರಾಜ, ನರಸಿಂಹರಾಜ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರ ಸಭೆ ಹಾಗೂ ವಿವಿಧ ಪಕ್ಷಗಳ ಮುಖಂಡರ ಸೇರ್ಪಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ವಿಚಾರವಾಗಿ ಬಹಿರಂಗ ಚರ್ಚೆಗೆ ಬರಲಿ, ನಾವು ದಾಖಲೆ ಸಮೇತ ಬಂದು ಯಾರು ಸುಳ್ಳು ಹೇಳುತ್ತಿದ್ದಾರೆ ಎನ್ನುವುದನ್ನು ಸಾಬೀತು ಮಾಡುತ್ತೇವೆ ಎಂದು ಕೇಂದ್ರ ಸರ್ಕಾಕ್ಕೆ ಪಂಥಾಹ್ವಾನ ನೀಡಿದರು.
ಕೇಂದ್ರದಿಂದ ನ್ಯಾಯಯುತವಾಗಿ ಬರಬೇಕಾದ ಹಣ ಕೇಳಿದರೆ, ಅವರು ಗ್ಯಾರಂಟಿ ಯೋಜನೆಗಳಿಗೆ ಹಣ ಕೇಳುತ್ತಿದ್ದಾರೆ ಎಂದು ಅಪಪ್ರಚಾರ ಮಾಡುತ್ತಾರೆ. ನಮ್ಮ ಗ್ಯಾರಂಟಿ ಯೋಜನೆಗಳಿಗೆ ಅವರಿಂದ ಒಂದು ಪೈಸೆಯೂ ಬೇಡ. ಆ ಯೋಜನೆಗಳಿಗೆ 23-24 ಸಾಲಿನಲ್ಲಿ 34 ಸಾವಿರ ಕೊಟಿ ವೆಚ್ಚ ಮಾಡಿದ್ದೇವೆ. ಒಂದು ಪೈಸೆಯನ್ನೂ ಕೇಳಿಲ್ಲ. ಮುಂದಿನ ಸಾಲಿಗೆ 59 ಸಾವಿರ ಕೋಟಿ ತೆಗೆದಿಟ್ಟಿದ್ದೇವೆ ಎಂದು ಹೇಳಿದರು.
ಕೇಂದ್ರದ ಆಯವ್ಯಯದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ.ಕೊಡುತ್ತೇವೆ ಎಂದರು. ಆದರೆ , ಈ ಆರ್ಥಿಕ ವರ್ಷ ಮುಗಿಯುತ ಬಂದಿದೆ,ಒಂದೇ ಒಂದು ಪೈಸೆ ಬಂದಿಲ್ಲ. ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ರಾಜ್ಯ ಬಜೆಟ್ ಮಂಡಿಸುತ್ತಾ, ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡಿರುವ ಕೇಂದ್ರಕ್ಕೆ ಧನ್ಯಾವಾದ ಎಂದು ಹೇಳಿದ್ದರು. ಈಗ ಅವರು ಹೇಳಿರುವುದು ಸುಳ್ಳು ಎಂದಾಯಿತು? ಅವರು (ಬಿಜೆಪಿ) ದೇವರ ಮೇಲೆ ನಂಬಿಕೆ ಇದ್ದರೆ ಪ್ರಮಾಣ ಮಾಡಲಿ ನೋಡೋಣ. ಅವರು ಬಜೆಟ್ ನಲ್ಲಿ ಓದಿರುವುದನ್ನು ನಾನು ಪ್ರದರ್ಶನ ಮಾಡುತ್ತೇನೆ ಎಂದು ಸವಾಲು ಹಾಕಿದರು.