ಮಂಗಳೂರು: ವೀಕೆಂಡ್ ರಾತ್ರಿಯಲ್ಲಿ ನಿವೃತ್ತ SPಯೊಬ್ಬರ ಅವಾಂತರದಿಂದಾಗಿ ಸರಣಿ ಅಪಘಾತ ಸಂಭವಿಸಿ, ಸಾರ್ವಜನಿಕರು ರೊಚ್ಚಿಗೆದ್ದ ಕಾರಣದಿಂದ ಗುಂಪು ಚದುರಿಸಲು ಕದ್ರಿ ಪೊಲೀಸರು ಲಾಠಿ ಬೀಸಿ ಗುಂಪನ್ನು ಚದುರಿಸಬೇಕಾದ ಅನಿವಾರ್ಯತೆ ಎದುರಾಯಿತು.
ನಡೆದಿದ್ದಿಷ್ಟು…
ನಿವೃತ್ತ ಸೂಪರಿಂಡೆಂಟ್ ಆಫ್ ಪೊಲೀಸ್ ಮಿತ್ರಾ ಹೆರಾಜೆಯವರ ಕಾರು ನಗರದ ಬಿಜೈ ರಸ್ತೆಯಲ್ಲಿ ರಾಂಗ್ ಸೈಡ್ ನಲ್ಲಿ ಅಡ್ಡಾದಿಡ್ಡಿ ಚಲಿಸಿದೆ. ಬಿಜೈನಿಂದ ಕೆ.ಪಿ.ಟಿ.ಗೆ ಸಾಗುವ ದಾರಿಯಲ್ಲಿ ಯದ್ವಾ ತದ್ವಾ ಚಲಿಸಿದ ಹೆರಾಜೆಯವರ ಕಾರು ಈ ಸಂದರ್ಭದಲ್ಲಿ ಅಲ್ಲಿದ್ದ ಕೆಲವು ವಾಹನಗಳಿಗೆ ಢಿಕ್ಕಿ ಹೊಡೆಯಿತು ಎಂಬ ಮಾಹಿತಿ ಪ್ರತ್ಯಕ್ಷದರ್ಶಿಗಳಿಂದ ತಿಳಿದುಬಂದಿದೆ.
ಬಳಿಕ ಅಲ್ಲೇ ಪಕ್ಕದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದ ಮನೆಯೊಂದರಿಂದ ಕೆಲವರು ಅಪಘಾತದ ಶಬ್ದಕ್ಕೆ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಈ ಸಂದರ್ಭದಲ್ಲಿ ಹೆರಾಜೆಯವರು ನಾನು ನಿವೃತ್ತ ಎಸ್.ಪಿ. ಎಂದು ಹೇಳಿಕೊಂಡಿದ್ದು ಅಲ್ಲಿ ಸೇರಿದ್ದವರು ಇನ್ನಷ್ಟು ಕೆರಳಲು ಕಾರಣವಾಗುತ್ತದೆ. ಈ ವೇಳೆಗೆ ಸ್ಥಳಕ್ಕೆ ಆಗಮಿಸಿದ ಕದ್ರಿ ಪೊಲೀಸ್ ಠಾಣಾ ಸಿಬ್ಬಂದಿಗಳು ಹೆರಾಜೆಯವರನ್ನು ತಮ್ಮ ವಾಹನದಲ್ಲಿ ಠಾಣೆಗೆ ಕರೆದೊಯ್ಯುತ್ತಾರೆ. ಇದೇ ಸಂದರ್ಭದಲ್ಲಿ ಸಾರ್ವಜನಿಕರು ಪೊಲೀಸರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದಾಗ ಅನಿವಾರ್ಯವಾಗಿ ಗುಂಪನ್ನು ಚದುರಿಸಲು ಠಾಣಾಧಿಕಾರಿ ಮಾರುತಿ ನಾಯಕ್ ನೇತೃತ್ವದಲ್ಲಿ ಪೊಲೀಸರು ಲಾಠಿ ಬೀಸಿ ಗುಂಪನ್ನು ಚದುರಿಸಿದ್ದಾರೆ.
ಹೆರಾಜೆಯವರು ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದ್ದೇ ಈ ರಾದ್ದಾಂತಕ್ಕೆಲ್ಲ ಕಾರಣ ಎಂದು ಪ್ರತ್ಯಕ್ಷದರ್ಶಿಗಳ ಅಭಿಪ್ರಾಯವಾಗಿದೆ.