Advertisement

ಬಿತ್ತನೆ ಯಂತ್ರ ಆವಿಷ್ಕರಿಸಿದ ನಿವೃತ್ತ ಅಧಿಕಾರಿ

10:17 AM May 04, 2022 | Team Udayavani |

ಬೀದರ: ಬಿತ್ತನೆಗೆ ಕೂಲಿಯಾಳು ಸಮಸ್ಯೆ, ಜತೆಗೆ ದುಬಾರಿ ವೆಚ್ಚದ ಸಾಗುವಳಿಯಿಂದ ಬೇಸತ್ತಿದ್ದ ಜಿಲ್ಲೆಯ ನಿವೃತ್ತ ಅಧಿಕಾರಿಯೂ ಆಗಿರುವ ಪ್ರಗತಿಪರ ರೈತರೊಬ್ಬರು ಸ್ಥಳೀಯವಾಗಿ ಲಭ್ಯ ಅನುಪಯುಕ್ತ ವಸ್ತುಗಳಿಂದಲೇ ಬಿತ್ತನೆ ಯಂತ್ರ (ಕೂರಿಗೆ)ವನ್ನು ಆವಿಷ್ಕರಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ.

Advertisement

ತಮ್ಮ ಜಮೀನಿನಲ್ಲೇ ಕಬ್ಬು ನಾಟಿ ಯಶಸ್ವಿಯಾಗಿ ಮಾಡಿದ್ದಾರೆ. ಚಿಟಗುಪ್ಪ ತಾಲೂಕಿನ ಮುತ್ತಂಗಿ ಗ್ರಾಮದ ರಾಜೇಂದ್ರ ಕುಲಕರ್ಣಿ ಬಿತ್ತನೆ ಯಂತ್ರವನ್ನು ಅಭಿವೃದ್ಧಿಪಡಿಸಿ ಗಮನ ಸೆಳೆದವರು. ಕೃಷಿ ಚಟುವಟಿಕೆಗಳಿಗೆ ಹೊಸ ಹೊಸ ಕೃಷಿ ಯಂತ್ರೋಪಕರಣಗಳು ವರದಾನವಾಗುತ್ತಿವೆ. ಆದರೆ, ಸಾವಿರಾರು ರೂಪಾಯಿ ಬೆಲೆ ಬಾಳುವ ಯಂತ್ರ, ಜತೆಗೆ ಅವುಗಳ ನಿರ್ವಹಣೆ ಖರ್ಚು ಅಧಿಕವಾಗುತ್ತಿರುವುದು ಆರ್ಥಿಕ ಹೊರೆ ಆಗುತ್ತಿದೆ. ಆದರೆ, ಕುಲಕರ್ಣಿ ಅವರು ತಯಾರಿಸಿದ ಯಂತ್ರ ಅತಿ ಕಡಿಮೆ ಖರ್ಚು, ಅಷ್ಟೇ ಅಲ್ಲ ಬಿತ್ತನೆಗೂ ಸುಲಭವಾಗಿದೆ.

ಕಲ್ಬುರ್ಗಿ ಆಕಾಶವಾಣಿಯಲ್ಲಿ ಮುಖ್ಯಸ್ಥರಾಗಿ ನಿವೃತ್ತಿ ಜೀವನ ನಡೆಸುತ್ತಿರುವ ಕುಲಕರ್ಣಿ ಅವರದ್ದು ಕೃಷಿ ಕುಟುಂಬ. ಹಾಗಾಗಿ ನಿವೃತ್ತಿ ಬಳಿಕ ಸ್ವಗ್ರಾಮ ಮುತ್ತಂಗಿಯಲ್ಲಿ ಬೇಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಇವರಿಗೆ ಬಿತ್ತನೆಗೆ ಎದುರಾದದ್ದು ಕೂಲಿ ಆಳು ಮತ್ತು ಅವರ ಖರ್ಚಿನ ಸಮಸ್ಯೆ. ಇದನ್ನು ಮನಗಂಡ ಕುಲಕರ್ಣಿ, ಹಿರಿಯ ರೈತರಾದ ತಮ್ಮ ತಂದೆಯ ಸಲಹೆಯಂತೆ ಬಿತ್ತನೆ ಯಂತ್ರವನ್ನು ಸಿದ್ಧಪಡಿಸಿದ್ದಾರೆ. ಈ ಮೂಲಕ ಕೃಷಿಕರೆಂದರೆ ವ್ಯವಸಾಯಕ್ಕೆ ಮಾತ್ರ ಸೀಮಿತರಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಕುಬೋಟೋ ಟ್ರ್ಯಾಕ್ಟರ್‌ ಹೊಂದಿರುವ ರಾಜೇಂದ್ರ ಅವರು ಸ್ಥಳೀಯವಾಗಿ ಸಿಗುವ ಕಬ್ಬಿಣದ ತುಂಡು ಮತ್ತು ಪೈಪ್‌ಗ್ಳನ್ನು ಬಳಿಸಿ ವೆಲ್ಡರ್‌ ಸಹಾಯದಿಂದ ನೇರವಾಗಿ ಕಬ್ಬು ಬಿತ್ತುವ ಯಂತ್ರ (ಕೂರಿಗೆ) ಆವಿಷ್ಕರಿಸಿದ್ದು, ಇದಕ್ಕೆ ಕೇವಲ 7,500 ರೂ. ವೆಚ್ಚ ಮಾಡಿದ್ದಾರೆ.

ಈ ಯಂತ್ರದಿಂದಲೇ ತಮ್ಮ ಜಮೀನಿನಲ್ಲಿ ಒಂದೇ ದಿನದಲ್ಲಿ ಮೂರು ಎಕರೆಯಷ್ಟು ಕಬ್ಬು ಬಿತ್ತನೆ ಯಶಸ್ವಿಯಾಗಿ ಮಾಡಿದ್ದಾರೆ. ಈ ಕೂರಿಗೆಯಿಂದ ಕಬ್ಬು, ಶುಂಠಿ, ಅರಿಶಿಣ ಬಿತ್ತುವುದಷ್ಟೇ ಅಲ್ಲದೇ ರಸಾಯನಿಕ ಗೊಬ್ಬರ, ಹುಡಿಯಾಗಿ ಇರುವ ತಿಪ್ಪೆಗೊಬ್ಬರ, ಎರೆಹುಳು ಗೊಬ್ಬರ ಸಹ ಸಲೀಸಾಗಿ ಬೆಳೆಯೊಂದಿಗೆ ಬಿತ್ತಬಹುದು. ಜತೆಗೆ ಇದೊಂದೇ ಯಂತ್ರದಿಂದ ಏಕಕಾಲಕ್ಕೆ ಜಮೀನು ಬೋದು ಏರಿಸುವುದು, ಬೀಜ, ಗೊಬ್ಬರ ಹಾಕಬಹುದು.

Advertisement

ಏಳೆಂಟು ಜನರು ಮಾಡುವ ಕೆಲಸವನ್ನು ಈ ಒಂದು ಯಂತ್ರ ಮಾಡುತ್ತಿದ್ದು, ಕೂಲಿ ಹಣ ಮತ್ತು ಸಮಯ ಎಲ್ಲವನ್ನೂ ಉಳಿಸುತ್ತಿದೆ. ವಿನೂತನ ಮಾದರಿಯ ಈ ಯಂತ್ರ ಸದ್ಯ ರೈತರಿಗೆ ಆಕರ್ಷಣೆಯಾಗಿದ್ದು, ಜಮೀನಿಗೆ ಭೇಟಿ ನೀಡಿ ಕೂರಿಗೆ ಮತ್ತು ಬಿತ್ತನೆ ಕಾರ್ಯವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕಡಿಮೆ ಸಮಯ ಮತ್ತು ಕಡಿಮೆ ಖರ್ಚಿನಲ್ಲಿ ಸ್ಥಳೀಯವಾಗಿಯೇ ಯಾರು ಬೇಕಾದರೂ ತಯ್ನಾರಿಸಬಹುದು ಮತ್ತು ಬಳಸಬಹುದು. ರೈತರು ಆಸಕ್ತರಿದ್ದಲ್ಲಿ ಅವರಿಗೆ ಸಹಾಯ ಮಾಡುತ್ತೇನೆ ಎನ್ನುತ್ತಾರೆ ರಾಜೇಂದ್ರ ಕುಲಕರ್ಣಿ.

ನಮ್ಮದು ಕೃಷಿ ಕುಟುಂಬವಾಗಿದ್ದು, ನಿವೃತ್ತಿ ನಂತರವೂ ಕೃಷಿಕ ಕಾಯಕ ಮುಂದುವರೆಸಿದ್ದೇನೆ. ನಮ್ಮ ಭಾಗದಲ್ಲಿ ಕಬ್ಬು, ಶುಂಠಿ ಮತ್ತು ಅರಶಿಣ ಬೆಳೆಯಲಾಗುತ್ತದೆ. ಆದರೆ, ಕೂಲಿ ಆಳುಗಳು, ಅವರ ಖರ್ಚಿನ ಸಮಸ್ಯೆ ಇದೆ. ಇದನ್ನು ಮನಗಂಡು, ತಂದೆಯವರ ಪ್ರೇರಣೆಯಿಂದ ಬಿತ್ತನೆ ಯಂತ್ರ (ಕೂರಿಗೆ) ತಯ್ನಾರಿಸಿದ್ದೇನೆ. ಸ್ಥಳೀಯವಾಗಿ ಲಭ್ಯ ವಸ್ತುಗಳನ್ನು ಬಳಸಿ, ಒಂದೇ ದಿನದಲ್ಲಿ ಕೇವಲ 7,500 ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದ್ದೇನೆ. ಈ ಕೂರಿಗೆಯಿಂದ ಒಂದೇ ದಿನ 3 ಎಕರೆ ಕಬ್ಬು ನಾಟಿ ಯಶಸ್ವಿಯಾಗಿ ಮಾಡಿದ್ದೇನೆ. ರಾಜೇಂದ್ರ ಕುಲಕರ್ಣಿ, ರೈತ ಮತ್ತು ನಿವೃತ್ತ ಆಕಾಶವಾಣಿ ಮುಖ್ಯಸ್ಥ

ಶಶಿಕಾಂತ ಬಂಬುಳ

Advertisement

Udayavani is now on Telegram. Click here to join our channel and stay updated with the latest news.

Next