Advertisement
ಒಂದು ಕಾಲದಲ್ಲಿ ಪರಿಸರದ ಕೃಷಿಕರ ಬದುಕು ಹಸನಾಗಿಸಿದ್ದ ಜಪ್ಪಿನಮೊಗರು ಗ್ರಾಮದ ಶ್ರೀ ಕೋರ್ದಬ್ಬು ದೈವದ ನಾಗಸನ್ನಿಧಿ ಕೆರೆ ಮತ್ತು ಪಡ್ಡೆಯಿಕೆರೆಗಳು ಈಗ ಅಭಿವೃದ್ಧಿಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿವೆ. ಜಪ್ಪಿನಮೊಗರು ತಾರ್ದೊಲ್ಯ ಶ್ರೀ ಕೋರªಬ್ಬು ದೈವಸ್ಥಾನದ ನಾಗಸನ್ನಿಧಿ ಬಳಿಯ ಕೆರೆ, ಪಡ್ಡೆಯಿಕೆರೆಗಳಿಗೆ 300 ವರ್ಷಗಳ ಇತಿಹಾಸವಿದೆ. ಹಿಂದಿನ ಕಾಲದಲ್ಲಿ ಈ ಪರಿಸರ ಕೃಷಿ ಬದುಕಿನೊಂದಿಗೆ ಬೆಸೆದುಕೊಂಡಿತ್ತು.
ಪಾಳುಬಿದ್ದ ಕೆರೆ ಬಗ್ಗೆ ತಾರ್ದೊಲ್ಯ ಶ್ರೀ ಕೋರ್ದಬ್ಬು ಸೇವಾ ಸಮಿತಿ ಮತ್ತು ಊರಿನ ಪ್ರಮುಖರು ಶಾಸಕ ಲೋಬೋಗೆ ತಿಳಿಸಿ, ಅಭಿವೃದ್ಧಿಗೆ ಸಹಕರಿಸುವಂತೆ ಕೇಳಿ ಕೊಂಡಿದ್ದರು. ತತ್‌ಕ್ಷಣ ಸ್ಪಂದಿಸಿದ ಶಾಸಕರು, ಸರಕಾರದ ಕೆರೆ ಅಭಿವೃದ್ಧಿ, ಸಣ್ಣ ನೀರಾವರಿ ಯೋಜನೆಯಡಿ 50 ಲಕ್ಷ ರೂ. ಅನುದಾನ ನೀಡಿದ್ದಾರೆ. ಸುಮಾರು 6 ತಿಂಗಳಿನಿಂದ ಕೆರೆಗಳ ಪುನರ್‌ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ. ನ. 26ರಿಂದ ಕೆರೆಗಳನ್ನು ಜನರ ಉಪಯೋಗಕ್ಕೆ ನೀಡಲಾಗುತ್ತಿದ್ದು, ದೈವಸ್ಥಾನ ಹಾಗೂ ಸುತ್ತಮುತ್ತಲಿನ ಸುಮಾರು 500 ಮನೆಗಳಿಗೆ ಇವು ನೀರುಣಿಸಲಿವೆ.
Related Articles
ಜನರ ದಾಹ ತಣಿಸುವುದರೊಂದಿಗೆ ಸಂಬಂಧ ಬೆಸೆಯುವುದಕ್ಕೂ ಕೆರೆಗಳು ಸಾಕ್ಷಿಯಾಗಬೇಕು ಎಂಬ ನಿಟ್ಟಿನಲ್ಲಿ ಕೆರೆಯ ಸುತ್ತಲೂ ವಾಕಿಂಗ್ ಟ್ರಾಫಿಕ್ ನಿರ್ಮಾಣಗೊಳ್ಳುತ್ತಿದೆ. ಪಾಲಿಕೆಯ ಅನುದಾನದೊಂದಿಗೆ ಬೆಂಚ್‌ಗಳನ್ನು ಅಳವಡಿಸುವ ಯೋಜನೆಯಿದೆ. ಲೈಟಿಂಗ್ಸ್ ಅಳವಡಿಕೆ ಮತ್ತು ಗಿಡಗಳನ್ನು ನೆಟ್ಟು ಸಣ್ಣ ಪಾರ್ಕ್ ಮಾದರಿಯಲ್ಲಿ ದಡಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಸಂಜೆಯ ಹೊತ್ತಿನಲ್ಲಿ ನೀರಿನ ತಂಪಿನೊಂದಿಗೆ ಆಹ್ಲಾದಕರ ವಾತಾವರಣವನ್ನು ಇದು ಒದಗಿಸಲಿದೆ ಎಂದು ಕಾರ್ಪೋರೇಟರ್ ಪ್ರವೀಣ್‌ಚಂದ್ರ ಆಳ್ವ ‘ಉದಯವಾಣಿ-ಸುದಿನ’ಕ್ಕೆ ತಿಳಿಸಿದ್ದಾರೆ. ಸುಮಾರು 70 ಸೆಂಟ್ಸ್ ಜಾಗದಲ್ಲಿ ಕೆರೆ ಹೊಸ ರೂಪದೊಂದಿಗೆ ನಿರ್ಮಾಣಗೊಳ್ಳುತ್ತಿದೆ.
Advertisement
ಅಂತರ್ಜಲ ವೃದ್ಧಿ ಕೆರೆಯ ಪುನರ್ ನಿರ್ಮಾಣ ಕಾಮಗಾರಿಗೂ ಮುನ್ನ ಇದರಲ್ಲಿ ಕೆಸರು ಮಿಶ್ರಿತ ನೀರು, ಚರಂಡಿ ನೀರು ತುಂಬಿ ಕಲುಷಿತಗೊಂಡು ಕಪ್ಪಾಗಿ ಕಾಣುತ್ತಿತ್ತು. ಈಗ ಎರಡೂ ಕೆರೆಗಳಿಗೆ ತಡೆಗೋಡೆ ನಿರ್ಮಿಸಿ ನೀರು ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಚರಂಡಿ ನೀರು ಒಳನುಗ್ಗದಂತೆ ತಡೆಯಲಾಗಿದೆ. ನಾಗಸನ್ನಿಧಿಯ ಕೆರೆ 11 ಮೀ. ಅಗಲ ಮತ್ತು 11 ಮೀ. ಉದ್ದ ಹೊಂದಿದೆ. ಇದರಲ್ಲಿ 22 ಅಡಿಯಷ್ಟು ನೀರಿದೆ. ಪಡ್ಡೆಯಿಕೆರೆಯು 17 ಮೀ. ಉದ್ದ ಮತ್ತು 15 ಮೀ. ಅಗಲವಿದೆ. ಇದರಲ್ಲಿ 20 ಅಡಿಯಷ್ಟು ನೀರು ತುಂಬಿಕೊಂಡಿದೆ. ಒಟ್ಟು ಕೆರೆ ಅಭಿವೃದ್ಧಿಯಿಂದಾಗಿ ಈ ಭಾಗದ ಸುಮಾರು 15 ಎಕರೆ ಪ್ರದೇಶದಲ್ಲಿ ಅಂತರ್ಜಲ ಮಟ್ಟವೂ ವೃದ್ಧಿಗೊಳ್ಳಲಿದೆ. ಸಮಸ್ಯೆಗೆ ಪರಿಹಾರ
ಈ ಪರಿಸರದ ಜನತೆ ಮತ್ತು ಶಾಸಕ ಲೋಬೊ ಕನಸಿನಂತೆ ಉಭಯ ಕೆರೆಗಳು ಹೊಸತನದೊಂದಿಗೆ ನಿರ್ಮಾಣವಾಗಿದೆ. ಈಗಾಗಲೇ ಮಂಗಳೂರು ನೀರಿನ ಅಭಾವ ಎದುರಿಸುತ್ತಿದ್ದು, ಕುಡಿಯುವ ನೀರಿಗೆ ಕಷ್ಟಪಡಬೇಕಾದ ಪರಿಸ್ಥಿತಿ ಇದೆ. ಈಗ ಕೆರೆ ಅಭಿವೃದ್ಧಿ ಮಾಡಿರುವುದರಿಂದ ತಾರ್ದೊಲ್ಯ ಜನತೆಗೆ ಈ ಬೇಸಗೆಯಲ್ಲಿ ನೀರಿನ ಸಮಸ್ಯೆ ಬಾರದು. ಇಲ್ಲಿನ ಅಂತರ್ಜಲ ಮಟ್ಟವೂ ವೃದ್ಧಿಯಾಗಲಿದೆ.
-ಪ್ರವೀಣ್‌ಚಂದ್ರ ಆಳ್ವ, ಕಾರ್ಪೊರೇಟರ್ ಧನ್ಯಾ ಬಾಳೆಕಜೆ