Advertisement

ಫಲಿತಾಂಶ ತಿರಸ್ಕರಿಸಿದವರಿಗೆ ಮತ್ತೆ ಪರೀಕ್ಷೆ

05:16 PM Aug 14, 2021 | Team Udayavani |

ದಾವಣಗೆರೆ: ಈಗಾಗಲೇ ಪ್ರಕಟಿಸಲಾಗಿರುವ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ತಿರಸ್ಕರಿಸಿ, ಪುನಃ ಪರೀಕ್ಷೆ
ಬರೆಯಲು ಆಸಕ್ತಿ ತೋರಿದ ವಿದ್ಯಾರ್ಥಿಗಳಿಗೆ ಹಾಗೂ ಖಾಸಗಿಯಾಗಿ ಪರೀಕ್ಷೆ ತೆಗೆದುಕೊಂಡಿರುವ ವಿದ್ಯಾರ್ಥಿಗಳಿಗೆ ಆ.19ರಿಂದ ಸೆ.3ವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಕೋವಿಡ್‌ ಮಾರ್ಗಸೂಚಿಯಂತೆ ನಡೆಯಲಿದ್ದು, ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ದ್ವಿತೀಯ ಪಿಯು ಪರೀಕ್ಷೆ ಸಿದ್ಧತೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಏರ್ಪಡಿಸಲಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆ
ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಐದು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಒಟ್ಟು 368 ವಿದ್ಯಾರ್ಥಿಗಳು
ಹಾಜರಾಗಲಿದ್ದಾರೆ. ಕೋವಿಡ್‌ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಪರೀಕ್ಷಾ ಕೇಂದ್ರಗಳಿಗೆ ಕಡ್ಡಾಯವಾಗಿ ಸ್ಯಾನಿಟೈಸರ್‌ ಮಾಡಬೇಕು ಹಾಗೂ ಪ್ರತಿ ವಿದ್ಯಾರ್ಥಿಗೆ ಮಾಸ್ಕ್ ನೀಡುವುದರ ಜೊತೆ ಸೋಂಕಿನ ಲಕ್ಷಣಗಳಿರುವ ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ಕೋವಿಡ್‌-19 ಮಾರ್ಗಸೂಚಿ ಅನುಸರಿಸಿ ಪರೀಕ್ಷೆ ನಡೆಸಬೇಕು. ದಾವಣಗೆರೆಯ ಮೋತಿವೀರಪ್ಪ ಸರ್ಕಾರಿ ಪದವಿಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ 166 ವಿದ್ಯಾರ್ಥಿಗಳು, ಡಿಆರ್‌ ಎಂ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 45, ಜಗಳೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 26, ಹೊನ್ನಾಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 84 ಹಾಗೂ ಚನ್ನಗಿರಿ ಸರ್ಕಾರಿ ಪದವಿ ಪೂರ್ವ
ಕಾಲೇಜು ಪರೀಕ್ಷಾ ಕೇಂದ್ರದಲ್ಲಿ 47 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 368 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಬರೆಯಲಿದ್ದಾರೆ.

ಇದನ್ನೂ ಓದಿ:ಮೊಬೈಲ್‌ ಶೋರೂಂನಲ್ಲಿ ಕಳವು ಪ್ರಕರಣ : 40 ಲ.ರೂ. ಮೌಲ್ಯದ ಮೊಬೈಲ್‌ಗ‌ಳ ಸಹಿತ ಓರ್ವನ ಬಂಧನ

ನಿಷೇಧಾಜ್ಞೆ: ಈಗಾಗಲೆ ಸೆಕ್ಷನ್‌ 144ರಂತೆ ಪರೀಕ್ಷಾ ಕೇಂದ್ರ ಸುತ್ತ 200ಮೀಟರ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದು, ಪರೀಕ್ಷಾಕೇಂದ್ರಗಳಿಗೆ ಪರೀಕ್ಷೆ ಮುಗಿಯುವವರೆಗೆ ಪ್ರತಿದಿನ ಹಾಗೂ ಪರೀಕ್ಷಾ ಗೌಪ್ಯ ವಸ್ತುಗಳನ್ನು ಇಡಲಾಗಿರುವ ಖಜಾನೆಗೆ ಪೂರ್ಣಾವಧಿ ಪೊಲೀಸ್‌ ಬಂದೋಬಸ್ತ್ ಮಾಡಲಾಗುವುದು. ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಜೆರಾಕ್ಸ್‌ ಅಂಗಡಿಗಳನ್ನು ಮುಚ್ಚುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಪರೀಕ್ಷಾ ದಿನದಂದು ಖಜಾನೆಗಳಿಂದ ಪ್ರಶ್ನೆಪತ್ರಿಕೆ ಸ್ವೀಕೃತಿ ಹಾಗೂ ಪರೀಕ್ಷಾ ಕೇಂದ್ರಗಳಿಗೆ ವಿತರಣೆ ಮಾಡುವ ವಾಹನಗಳಿಗೆ ಜಿಪಿಎಸ್‌ ವ್ಯವಸ್ಥೆ ಅಳವಡಿಸಲಾಗುವುದು. ಪರೀಕ್ಷಾ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಯು ಕಡ್ಡಾಯವಾಗಿ ಗುರುತಿನ ಪತ್ರ ಧರಿಸಬೇಕು ಹಾಗೂ ಜಿಲ್ಲಾ ವ್ಯಾಪಿಯಲ್ಲಿರುವ ಕೇಂದ್ರಗಳಿಗೆ ವಿವಿಧ ಇಲಾಖೆಯ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಿಸಲಾಗುವುದು ಎಂದರು.

Advertisement

ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್‌ ಹಾಗೂ ಇತರೆ ವಿದ್ಯುನ್ಮಾನ ಉಪಕರಣ ತರುವುದನ್ನು ಕಡ್ಡಾಯವಾಗಿ ನಿಷೇಧಿಸಿದ್ದು, ವಿದ್ಯಾರ್ಥಿಗಳು ಕೋವಿಡ್‌ ನಿಯಮಾವಳಿಗಳನ್ನು ಪಾಲಿಸುವುದರ ಜೊತೆಗೆ,ತಪ್ಪದೇ ಪರೀಕ್ಷಾ ಗುರುತಿನ ಚೀಟಿಯನ್ನು ತರಬೇಕು. ಕೊಠಡಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವ ಕಾರಣ ವಿದ್ಯಾರ್ಥಿಗಳು ಅಗತ್ಯವಿದ್ದಲ್ಲಿ ಮನೆಯಿಂದಲೇ ನೀರಿನ ಬಾಟಲಿಯನ್ನು ತರಬೇಕು ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌.ಬಿ.ರಿಷ್ಯಂತ್‌, ಜಿಲ್ಲಾ ಆರೋಗ್ಯಾಧಿಕಾರಿ ನಾಗರಾಜು, ಪಪೂ ಉಪನಿರ್ದೇಶಕ ಶಿವರಾಜು ಎಂ., ತಹಶೀಲ್ದಾರ್‌ ಗಿರೀಶ್‌, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪ್ರಶ್ನೆಪತ್ರಿಕೆ ವಿತರಣಾಧಿಕಾರಿಗಳು, ಮಾರ್ಗಾಧಿಕಾರಿಗಳು ಹಾಗು ಪರೀಕ್ಷಾ ಕೇಂದ್ರಗಳ ಪ್ರಾಂಶುಪಾಲರು ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next