Advertisement

ಬೇಲದ ಕುಪ್ಪೆ ಜಾತ್ರೆಗೆ ಭಕರ ಪ್ರವೇಶಕ್ಕೆ ನಿರ್ಬಂಧ

11:31 AM Nov 26, 2021 | Team Udayavani |

ಎಚ್‌.ಡಿ.ಕೋಟೆ: ತಾಲೂಕಿನಲ್ಲಿ ಮೊದಲ ಜಾತ್ರೆ ಆಚರಣೆ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನದೊಳಗಿರುವ ಪ್ರಸಿದ್ಧ ಬೇಲದಕುಪ್ಪೆ ಶ್ರೀ ಮಹದೇಶ್ವರ ಸ್ವಾಮಿ ಜಾತ್ರೆಗೆ ಈ ಬಾರಿ ಸಾರ್ವಜನಿಕ ಪ್ರವೇಶ ನಿರ್ಬಂಧದೊಂದಿಗೆ ನ.27ರಂದು ಸರಳವಾಗಿ ಆಚರಣೆ ನಡೆಯಲಿದೆ.

Advertisement

ಪೂರ್ವಜರ ಕಾಲದಿಂದಲೂ ನಡೆಯುತ್ತಿತ್ತು: ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಸೇರಿದ ಯಡಿಯಾಲ ವನ್ಯಜೀವಿ ಸಂರಕ್ಷಿತ ಪ್ರದೇಶದ ಅರಣ್ಯದೊಳಗಿರುವ ಬೇಲದಕುಪ್ಪೆ ಶ್ರೀ ಮಹದೇಶ್ವರಸ್ವಾಮಿ ಜಾತ್ರೆ ಮಹೋತ್ಸವ ತಾಲೂಕಿನಲ್ಲಿಯೇ ಹೆಸರುವಾಸಿ. ಪ್ರತಿವರ್ಷ 3-4ದಿನ ದೇವರಿಗೆ ಅಭಿಷೇಕ, ಹೋಮ, ಹಾಲರವಿಸೇವೆ, ಕೊಂಡೋತ್ಸವ, ರಾಸುಗಳ ಜಾತ್ರೆ, ರಥೋತ್ಸವ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಪೂರ್ವಜರ ಕಾಲದಿಂದಲೂ ವಿಜೃಂಭಣೆಯಿಂದ ಆಚರಣೆ ಕಾಣುತ್ತಿತ್ತು.

ಮರಗಳಿಗೆ ಬೆಂಕಿ ಇಟ್ಟಿದ್ದರು: ದೇವರ ಜಾತ್ರೆಯಲ್ಲಿ ಪಾಲ್ಗೊಳ್ಳಲು ತಾಲೂಕಿನ ಭಕ್ತರಷ್ಟೇ ಅಲ್ಲದೆ ನರೆಹೊರೆಯ ತಾಲೂಕು ಜಿಲ್ಲೆಗಳಿಂದ ಭಕ್ತ ಸಮೂಹವೇ ಹರಿದು ಬರುತ್ತಿತ್ತು. ಹುಲಿಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೋಷಣೆಯಾಗುತ್ತಿದ್ದಂತೆಯೇ ಕಳೆದ 2-3ವರ್ಷಗಳ ಹಿಂದೆ ಅರಣ್ಯದೊಳಗಿನ ಬೇಲದಕುಪ್ಪೆ ಮಹದೇಶ್ವರಸ್ವಾಮಿ ಜಾತ್ರೆಗೆ ಪ್ರವೇಶ ನಿರ್ಬಂಧಿಸಲಾಗಿತ್ತು.

ಹೀಗಾಗಿ ಕುಪಿತರಾದ ವಿವಿಧ ಗ್ರಾಮಗಳ ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ವೈಷಮ್ಯ ಭುಗಿಲೆದಿತ್ತು. ಕಳೆದ 2 ವರ್ಷಗಳ ಹಿಂದೆ ಅರಣ್ಯ ಇಲಾಖೆ ಇರಿಸಿದ್ದ ಮರಗಳಿಗೆ ಬೆಂಕಿ ಇಟ್ಟ ಆರೋಪದಲ್ಲಿ ಪ್ರಕರಣವೂ ದಾಖಲಾಗಿತ್ತು. ಬಳಿಕ ಶಾಂತಿ ಸಭೆ ನಡೆಸಿ ವರ್ಷದ ಜಾತ್ರೆ ಸಂದರ್ಭದಲ್ಲಿ ಮಾತ್ರ ಪ್ರವೇಶ ನೀಡಲು ಮೌಖೀಕವಾಗಿ ತೀರ್ಮಾನಿಸಿಕೊಂಡು ಕಳೆದ 2 ವರ್ಷದ ಹಿಂದೆ ವರ್ಷ ಕೂಡ ಜಾತ್ರೆ ನೆರವೇರಿಸಲಾಗಿತ್ತು.

ದೇವಸ್ಥಾನ ಸಮಿತಿ ಮತ್ತು ಅಧಿಕಾರಿಗಳ ತಂಡದೊಂದಿಗೆ ಇದೇ ನ.27ರಂದು ಜಾತ್ರೆ ನೆರವೇರಿಸಲು ಸಿದ್ಧತೆ ನಡೆದಿದೆಯಾದರೂ ಭಕ್ತರಿಗೆ ಪ್ರವೇಶ ನಿರ್ಬಂಧಿಸಿರುವುದು ಬೇಸರ ಮೂಡಿಸಿದೆ. ಪ್ರತಿವರ್ಷ ಸಾವಿರಾರು ಭಕ್ತರ ಸಮಕ್ಷಮದಲ್ಲಿ ವಿಜೃಂಭಣೆಯ ಆಚರಣೆ ಕಾಣುತ್ತಿದ್ದ ಜಾತ್ರೆ ಕಳೆದ ಸಾಲಿನಂತೆ ಈ ಬಾರಿಯೂ ಸರಳವಾಗಿ ಆಚರಣೆಗೆ ಸಿದ್ಧತೆಗೊಂಡಿದೆ.

Advertisement

ಭಕ್ತ ಸಮೂಹಕ್ಕೆ ನಿರಾಸೆ

ಕಳೆದ ಸಾಲಿನಲ್ಲಿ ಮತ್ತು ಪ್ರಸಕ್ತ ಸಾಲಿನಲ್ಲಿ ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಬೇಲದ ಕುಪ್ಪೆ ಜಾತ್ರೆಗೆ ಭಕ್ತರು ಮತ್ತು ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ದೇವಸ್ಥಾನ ಸಮಿತಿ ಸದಸ್ಯರು ಮತ್ತು ಅಗತ್ಯ ಇರುವ ಅಧಿಕಾರಿಗಳಿಗಷ್ಟೇ ಪ್ರವೇಶ ನೀಡಿ ಇನ್ನುಳಿದ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈ ಆದೇಶದಿಂದ ತಲೆ ಮಾರುಗಳಿಂದ ದೇವರ ಜಾತ್ರಾ ಕೈಂಕರ್ಯದಲ್ಲಿ ಪಾಲ್ಗೊಂಡು ಭಕ್ತಿಯ ಪರಾಕಾಷ್ಟೆ ಮೆರೆಯುತ್ತಿದ್ದ ಭಕ್ತ ಸಮೂಹಕ್ಕೆ ನೋವಾಗಿದೆ.

“ನಾವು ಪಾರಂಪರಿಕವಾಗಿ ಜಾತ್ರೆ ಆಚರಿಸಿಕೊಂಡು ಬರುತ್ತಿದ್ದೇವೆ. ಈಗ, ಧಾರ್ಮಿಕ ಆಚರಣೆಗೆ ತಡೆ ನೀಡುವ ಮೂಲಕ ಸಂಪ್ರದಾಯಕ್ಕೆ ಆಚರಣೆಗೆ ಉಲ್ಲಂಘನೆ ಸರಿಯಲ್ಲ.– ಪ್ರಕಾಶ, ಸ್ಥಳೀಯ ನಿವಾಸಿ

 “ಇಡೀ ವರ್ಷ ಧಾರ್ಮಿಕ ಆಚರಣೆಗೆ ಅವಕಾಶ ನೀಡದೇ ಇದ್ದರೂ ಸರಿ. ಆದರೆ, ಜಾತ್ರೆಯ ದಿನಗಳಲ್ಲಾದರೂ ಅಧಿಕಾರಿಗಳ ಉಪಸ್ಥಿತಿಯಲ್ಲಿ ಜಾತ್ರೆಗೆ ಅವಕಾಶ ನೀಡುವುದು ಒಳಿತು.” – ಮೋಹನ್‌, ಗ್ರಾಮಸ್ಥರು

Advertisement

Udayavani is now on Telegram. Click here to join our channel and stay updated with the latest news.

Next