ಉಡುಪಿ: ಜಿಲ್ಲೆಯಲ್ಲಿ ಜಲ ಜೀವನ್‌ಮಿಷನ್(ಜೆಜೆಎಂ) ಕಾಮಗಾರಿಯು ಈವರೆಗೆ ಶೇ.77.07ರಷ್ಟು ಪೂರ್ಣಗೊಂಡಿದ್ದು, 2024ರವೇಳೆಗೆ ಶೇ.100ರಷ್ಟು ಕಾಮಗಾರಿ ಪೂರ್ಣವಾದರೂ ನಳ್ಳಿ ಸಂಪರ್ಕ ಪಡೆದ ಎಲ್ಲ ಮನೆಗಳಿಗೂ ನೀರು ಸಿಗಲು 2025ರ ವರೆಗೂ ಕಾಯಲೇ ಬೇಕು.
ಚುನಾವಣೆ ನೀತಿ ಸಂಹಿತೆಯಿಂದ ವಿಳಂಬವಾಗಿರುವ ಜೆಜೆಎಂ ಕಾಮಗಾರಿಯು ಚುನಾವಣೆ ಅನಂತರ ಚುರುಕು ಪಡೆದಿದೆ. ಜಿಲ್ಲೆಯ ಎಲ್ಲ ಗ್ರಾ.ಪಂ.ಗಳಲ್ಲೂ ಜೆಜೆಎಂ ಕಾಮಗಾರಿ ನಡೆಯುತ್ತಿದೆ ಮತ್ತು ಪೈಪ್‌ಲೈನ್ ಅವಳವಡಿಸುವ ಕಾರ್ಯವೂ ನಡೆಯುತ್ತಿದೆ. ಆದರೆ, ಹಲವು ಕಡೆಗಳಲ್ಲಿ ಇನ್ನೂ ಓವರ್ ಹೆಡ್ ಟ್ಯಾಂಕ್ ನಿರ್ಮಾಣ, ಓವರ್ ಹೆಡ್ ಟ್ಯಾಂಕ್‌ಗೆ ನೀರಿನ ಮೂಲ ಪತ್ತೆ ಹಚ್ಚುವುದು ಇತ್ಯಾದಿಗಳು ಇನ್ನೂ ಪೂರ್ಣವಾಗಿಲ್ಲ. ಹೀಗಾಗಿ ಜೆಜೆಎಂ ಕಾಮಗಾರಿ ಪೂರ್ಣವಾದ ಕೂಡಲೇ ಮನೆ ಮನೆಗೆ ನಳ್ಳಿ ಮೂಲಕ ನೀರು ಬರಲಿದೆ ಎಂದು ಹೇಳಲು ಸಾಧ್ಯವಿಲ್ಲ. ಶೇ.100ರಷ್ಟು ಮನೆ ಮನೆಗೆ ನಳ್ಳಿ ಸಂಪರ್ಕವಾದ ಅನಂತರದಲ್ಲೂ ನೀರಿನ ಪೂರೈಕೆ ಏಕಕಾಲದಲ್ಲಿ ಆಗಲಿದೆ ಎನ್ನಲು ಸಾಧ್ಯವಿಲ್ಲ. ಒಮ್ಮೆ ನೀರಿನ ವ್ಯವಸ್ಥೆ ಎಲ್ಲೆಡೆಯಲ್ಲೂ ಸರಿಯಾದ ಅನಂತರದಲ್ಲಿ ಮನೆ ಮನೆಗೆ ನಿತ್ಯವೂ ನೀರು ಸಿಗಲಿದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯವಾಗಿದೆ.
ಜಿಲ್ಲೆಯ 155 ಗ್ರಾ.ಪಂ.ಗಳ 246 ಹಳ್ಳಿಗಳ 3402 ಜನ ವಸತಿ ಪ್ರದೇಶಕ್ಕೆ ಜೆಜೆಎಂ ಮೂಲಕ ಮನೆ ಮನೆಗೆ ನೀರು ಸರಬರಾಜು ಮಾಡಲಾಗುತ್ತದೆ. ಇದರಡಿಯಲ್ಲಿ ಜಿಲ್ಲೆಯ 2,47,190 ಮನೆಗಳಿಗೆ ನೇರವಾಗಿ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ. ಈವರೆಗೂ ಜಿಲ್ಲೆಯ 1,90,505 ಮನೆಗಳಿಗೆ ನಳ್ಳಿ ಸಂಪರ್ಕ ನೀಡಲಾಗಿದೆ. ಅಂದರೆ, ಶೇ.77.01ರಷ್ಟು ಮನೆಗಳಿಗೆ ನಳ್ಳಿ ಸಂಪರ್ಕ ಕಲ್ಪಿಸಲಾಗಿದೆ. ಜಿಲ್ಲೆಯ 56,685 ಮನೆಗಳಿಗೆ (ಶೇ.22.99ರಷ್ಟು ) ಪೈಪ್‌ಲೈನ್ ಸಂಪರ್ಕ ನೀಡಲು ಬಾಕಿಯಿದೆ.
ಜಿಲ್ಲೆಯಲ್ಲಿ ಜೆಜೆಎಂ ಅಡಿಯಲ್ಲಿ ಮೂರು ಹಂತದಲ್ಲಿ 527 ಕಾಮಗಾರಿಗಳು ನಡೆಯುತ್ತಿದೆ. ಇದರಲ್ಲಿ 170 ಕಾಮಗಾರಿ ನಡೆಯುತ್ತಿದ್ದು, 346 ಕಾಮಗಾರಿ ಪೂರ್ಣಗೊಂಡಿದೆ. (ಸುಮಾರು 11 ಕಾಮಗಾರಿ ಇನ್ನಷ್ಟೆ ಆರಂಭವಾಗಬೇಕಿದೆ). ಜಿಲ್ಲೆಯಲ್ಲಿ ಅಂದಾಜು 682 ಕೋ.ರೂ. ವೆಚ್ಚದಲ್ಲಿ ಜೆಜೆಎಂ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ನಡೆಯಲಿದೆ. ಈಗಾಗಲೇ 169.66 ಕೋ.ರೂ.ಗಳನ್ನು ವೆಚ್ಚ ಮಾಡಲಾಗಿದೆ. ಒಟ್ಟಾರೆ ಮೀಸಲಿರಿಸಿರುವ ಅನುದಾನದಲ್ಲಿ ಶೇ.25ರಷ್ಟು ಈಗಾಗಲೇ ವೆಚ್ಚ ಮಾಡಲಾಗಿದೆ.
Related Articles
ಮಳೆಗಾಲದಲ್ಲಿ ವಿಳಂಬ ಸಾಧ್ಯತೆ
ಜೆಜೆಎಂ ಅಡಿಯಲ್ಲಿ ಈಗಾಗಲೇ ಪೂರ್ಣ ಪ್ರಮಾಣದ ಕಾಮಗಾರಿ ಮುಗಿದು ಮನೆ ಮನೆಗೆ ನೀರು ಪೂರೈಕೆ ಆರಂಭವಾಗಬೇಕಿತ್ತು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಒಂದು ವರ್ಷ ಸರಿಯಾಗಿ ಕಾಮಗಾರಿ ನಡೆದಿಲ್ಲ. ಕೊರೊನಾ ಅನಂತರ ಕಾಮಗಾರಿ ಚುರುಕುಗೊಂಡರೂ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಚುನಾವಣೆ ನೀತಿ ಸಂಹಿತೆಯಿಂದ ಇನ್ನಷ್ಟು ವಿಳಂಬವಾಗಿದೆ. ಜೂನ್ ತಿಂಗಳಲ್ಲಿ ಮಳೆ ಆರಂಭವಾಗಲಿದೆ. ಸೆಪ್ಟೆಂಬರ್ ವರೆಗೂ ಮಳೆ ಹೆಚ್ಚಿರಲಿದೆ. ಮಳೆಗಾಲದಲಿ ಪೈಪ್‌ಲೈನ್ ಕಾಮಗಾರಿ ಅಸಾಧ್ಯ. ಹೀಗಾಗಿ ಈ ವರ್ಷವೂ ಜೆಜೆಎಂ ಕಾಮಗಾರಿ ಸ್ಪಷ್ಟ ವಿಳಂಬವಾಗುವ ಸಾಧ್ಯತೆಯಿದೆ.
ಶೇ. 86ರಷ್ಟು ಕಾಮಗಾರಿ ಪೂರ್ಣ ದ.ಕ.ದಲ್ಲಿ ಜೆಜೆಎಂ ಅಡಿಯಲ್ಲಿ 3,34,184 ಮನೆಗಳಿಗೆ ನಳ್ಳಿ ಮೂಲಕ ನೀರು ಪೂರೈಸಲು ಗುರಿ ಹೊಂದಲಾಗಿದೆ. ಇದರಲ್ಲಿ 2,88,953 ಮನೆಗಳಿಗೆ ಈಗಾಗಲೇ ನೀರು ಪೂರೈಕೆಗೆ ಬೇಕಾದ ನಳ್ಳಿ ಸಂಪರ್ಕ ಕಲ್ಪಿಸಲಾಗಿದೆ. ಶೇ. 86.47ರಷ್ಟು ಕಾಮಗಾರಿಯು ಪೂರ್ಣಗೊಂಡಿದೆ. 62 ಹಳ್ಳಿಗಳಿಗೆ ಶೇ.100ರಷ್ಟು ನಳ್ಳಿ ಸಂಪರ್ಕ ಕಲ್ಪಿಸಲಾಗಿದೆ.
ತ್ವರಿತ ಕಾಮಗಾರಿ
ಜೆಜೆಎಂ ಕಾಮಗಾರಿ ಪೂರ್ಣ
ಮುಗಿದ ತತ್‌ಕ್ಷಣವೇ ಎಲ್ಲ ಮನೆಗಳಿಗೂ ನೀರು ಪೂರೈಕೆಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ನೀರು ಸಂಗ್ರಹದ ಟ್ಯಾಂಕ್ ನಿರ್ಮಾಣ ಸಹಿತವಾಗಿ ಟ್ಯಾಂಕ್‌ಗೆ ನೀರು ಪೂರೈಸಲು ಎಲ್ಲ ವ್ಯವಸ್ಥೆಯಾದ ಅನಂತರದಲ್ಲಿ ಪೂರ್ಣ ಪ್ರಮಾಣದಲ್ಲಿ ಮನೆ ಮನೆಗೆ ನಳ್ಳಿ ಮೂಲಕ ನೀರು ಪೂರೈಕೆಯಾಗಲಿದೆ. ಜೆಜೆಎಂ ಕಾಮಗಾರಿ ವೇಗವಾಗಿ ಸಾಗುತ್ತಿದೆ.
–ಪ್ರಸನ್ನ ಎಚ್., ಜಿ.ಪಂ. ಸಿಇಒ, ಉಡುಪಿ
-ರಾಜು ಖಾರ್ವಿ ಕೊಡೇರಿ