Advertisement
ಉಡುಪಿ: ನಗರಸಭೆ ವ್ಯಾಪ್ತಿಯ ಕಪ್ಪೆಟ್ಟು, ಕಿನ್ನಿಮೂಲ್ಕಿ, ಶಾರದಾ, ಮಠದಬೆಟ್ಟು ವೆಟ್‌ವೆಲ್‌ಗಳಿಗೆ ವಾರದೊಳಗಾಗಿ ಬೇಕಾದ ಸೌಲಭ್ಯ ಕಲ್ಪಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ. ಆ ಬಳಿಕ ಅವು ಸರಿಯಾಗಿ ಕಾರ್ಯ ನಿರ್ವಹಿಸಲಿವೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಒಂದು ಹನಿ ತ್ಯಾಜ್ಯ ನೀರು ಇಂದ್ರಾಣಿಗೆ ಹರಿಬಿಡದಂತೆ ಎಚ್ಚರ ವಹಿಸಲಾಗುತ್ತದೆ. ಗುತ್ತಿಗೆ ಆಧಾರದ ಮೆಲೆ ಕೆಲಸ ನಿರ್ವಹಿಸುತ್ತಿರುವವರಿಗೆ ಈ ಸಂಬಂಧ ಎಚ್ಚರ ವಹಿಸುವಂತೆ ಕಟ್ಟು ನಿಟ್ಟಾಗಿ ಆದೇಶಿಸಲಾಗಿದೆ. ಕೆಲಸಗಾರರ ನಿರ್ವಹಣೆಯ ಕೊರತೆಯಿಂದ ಯಂತ್ರಗಳು ಹಾಳಾಗುತ್ತಿದ್ದವು. ಈ ಬಗ್ಗೆಯೂ ಎಚ್ಚರ ವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
Related Articles
ಮುಂದಿನ ದಿನಗಳಲ್ಲಿ ವೆಟ್‌ವೆಲ್‌ಗಳ ಹಾಗೂ ಮನೆ, ಹೊಟೇಲ್, ವಾಣಿಜ್ಯ ಮಳಿಗೆಗಳ ತ್ಯಾಜ್ಯ ನೀರು ನೇರವಾಗಿ ಇಂದ್ರಾಣಿಗೆ ಬಿಡುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುತ್ತದೆ. ಇದರಲ್ಲಿ ಎರಡು ಮಾತಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಪ್ರಸ್ತುತ ನಗರಸಭೆಯಲ್ಲಿ ಶೇ. 17ರಷ್ಟು ಕಡೆಗಳಿಗೆ ಒಳಚರಂಡಿ ಸಂಪರ್ಕ ನೀಡಲಾಗಿದೆ. ನಗರದ ಎಲ್ಲ ಕಟ್ಟಡಗಳಿಗೂ ಒಳಚರಂಡಿ ಸಂಪರ್ಕ ಕಲ್ಪಿಸಿದರೆ ಇಂದ್ರಾಣಿ ನದಿ ಸ್ವತ್ಛವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಯತ್ತಿದೆ ಎಂದು ವಿವರಿಸಿದರು.
Advertisement
ಅಧಿಕಾರಿಗಳ ಜತೆಗೆ ಮಾತುಕತೆಒಳಚರಂಡಿ ಉನ್ನತೀಕರಣ ಹಾಗೂ ವಿಸ್ತರಣೆ ಕುರಿತು ನಗರಾಭಿವೃದ್ಧಿ ಸಚಿವಾಲಯದ ಪ್ರ. ಕಾರ್ಯದರ್ಶಿ ಹಾಗೂ ಕರ್ನಾಟಕ ನೀರು ಹಾಗೂ ಒಳಚರಂಡಿ ಮಂಡಳಿ ಅಧಿಕಾರಿಗಳು, ನಗರಸಭೆ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ ಎಂದರು. ಹೊಸ ಯುಜಿಡಿಗೆ 400 ಕೋ.ರೂ.
ನಗರಸಭೆಗೆ ಹೊಸ ಯುಜಿಡಿಗೆ ಅಗತ್ಯವಿರುವ 400 ಕೋ.ರೂ. ಏಶ್ಯನ್ ಡೆವಲಪ್ಮೆಂಟ್ ಬ್ಯಾಂಕ್‌ನ (ಅಭಿವೃದ್ಧಿ ಶೀಲ ಸದಸ್ಯ ರಾಷ್ಟ್ರಗಳ ಆರ್ಥಿಕ ಮತ್ತು ಸಾಮಾಜಿಕ ಉನ್ನತೀಕರಣಕ್ಕಾಗಿ ಸಾಲ ಮತ್ತು ಷೇರು ಹೂಡಿಕೆಗಳನ್ನು ಒದಗಿಸುವ ಬ್ಯಾಂಕ್) ಸಹಾಯ ಕೋರಲಾಗಿದೆ. ಸಹಾಯ ಸಿಗುವ ಭರವಸೆ ದೊರಕಿದ್ದು, ಸವಿವರವಾದ ಯೋಜನೆ ರೂಪಿಸಲು (ಡಿಪಿಆರ್) ಆದೇಶ ನೀಡಿದ್ದಾರೆ ಎಂದು ಮಾಹಿತಿ ನೀಡಿದರು. ಇಂದ್ರಾಣಿ ನದಿ ಬಹು ವರ್ಷಗಳಿಂದ ಕಲು ಷಿತಗೊಳ್ಳುತ್ತಿದ್ದು ಅದನ್ನು ಸರಿಪಡಿಸುವಂತೆ ಆಗ್ರಹಿಸಿ ಸಮಸ್ಯೆ ಪೀಡಿತ ಪ್ರದೇಶದ ಹಲವು ಸಂಘಟನೆಗಳು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸುತ್ತಿ ರುವುದನ್ನು ಸ್ಮರಿಸಬಹುದು. ಮುಂದಿನ ವಾರ ಭೇಟಿ
ಇಂದ್ರಾಣಿ ನದಿಯ ಸಮಸ್ಯೆಯಿಂದ ನಲುಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ಜಿಲ್ಲಾಧಿಕಾರಿ ಹೇಳಿದ್ದಾರೆ. ಒಂದು ವಾರದೊಳಗೆ ಎಸ್‌ಟಿಪಿ, ವೆಟ್‌ವೆಲ್‌ಗಳ ಸಮಸ್ಯೆ ಪರಿಹಾರವಾಗಲಿದೆ ಎಂದ ಅವರು, ಮುಂದಿನ ವಾರ ಇಂದ್ರಾಣಿ ಸಮಸ್ಯೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸುವೆ. ಈ ಹಿಂದೆಯೂ ಒಳಚರಂಡಿ ಸಮಸ್ಯೆ ಇರುವ ಪ್ರದೇಶಗಳಿಗೆ ಭೇಟಿ ನೀಡಿದ್ದ ಅವರ ಸಮಸ್ಯೆಯನ್ನು ಆಲಿಸಿದ್ದೆ. ಈಗ ಇಂದ್ರಾಣಿ ಸಮಸ್ಯೆ ಪೀಡಿತ ಪ್ರದೇಶಗಳಿಗೂ ಭೇಟಿ ನೀಡುವೆ. ಇಂದ್ರಾಣಿ ಕಲುಷಿತಗೊಳಿಸುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಪುನರುಚ್ಚರಿಸಿದರು.
ಎಲ್ಲ ವೆಟ್‌ವೆಲ್ ಹಾಗೂ ಎಸ್‌ಟಿಪಿಗಳು ಶೀಘ್ರದಲ್ಲೇ ಸಂಪೂರ್ಣವಾಗಿ ಸುಸಜ್ಜಿತಗೊಳ್ಳಲಿವೆ. ಇದರಿಂದ ಕೊಳಚೆ ನೀರಿನ ಸಮಸ್ಯೆಗೆ ಶೇ. 50ರಷ್ಟು ಪರಿಹಾರ ಸಿಗಲಿದೆ.
-ಮೋಹನ್ ರಾಜ್, ಎಇಇ. ನಗರಸಭೆ ನಿಮ್ಮ ಅಭಿಪ್ರಾಯ ಕಳಿಸಿ
ಇಂದ್ರಾಣಿ ನದಿಯ ಸಮಸ್ಯೆ ಕುರಿತು ನಗರಸಭೆ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆಯುವ ಸಲುವಾಗಿ ಉದಯವಾಣಿ ಸುದಿನ ಅಧ್ಯಯನ ತಂಡ ಕೂಲಂಕಷವಾಗಿ ಅಧ್ಯಯನ ಮಾಡಿ ವರದಿ ಪ್ರಕಟಿಸಿದೆ. ಉಡುಪಿ ನಗರದ ನಾಗರಿಕರಾದ ನೀವೂ ಇಂದ್ರಾಣಿ ಶುದ್ಧೀಕರಣದ ಅಗತ್ಯವನ್ನು ನಿಮ್ಮ ಅಭಿಪ್ರಾಯದ ಮೂಲಕ ಮನದಟ್ಟು ಮಾಡಿಕೊಡಬಹುದು. ನಿಮ್ಮ ಅಭಿಪ್ರಾಯವನ್ನು ಚುಟುಕಾಗಿ ಬರೆದು ವಾಟ್ಸಾಪ್‌ಗೆ ಕಳುಹಿಸಿ, ಜತೆಗೆ ನಿಮ್ಮದೊಂದು ಫೋಟೋ ಇರಲಿ. ಯಾವುದೇ ವೈಯಕ್ತಿಕ ಟೀಕೆ ಬೇಡ. 76187 74529