ಕಲಬುರಗಿ: ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಜತೆಗೆ ಅವರಿಗೆ ಅಗುತ್ತಿರುವ ಅನ್ಯಾಯ ಮತ್ತು ದೌರ್ಜನ್ಯ ತಡೆಯುವುದು ಎಲ್ಲ ಇಲಾಖೆಗಳ ಜವಾಬ್ದಾರಿಯಾಗಿದೆ. ಆದ್ದರಿಂದ ಎಲ್ಲ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿನ ಮಕ್ಕಳ ಹಕ್ಕುಗಳ ರಕ್ಷಣೆಗೆ ಇರುವ ಕಾಯ್ದೆಗಳ ಕುರಿತು ಅರಿಯಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶ ಸುಶಾಂತ ಎಂ. ಚೌಗಲೆ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಮಕ್ಕಳ ರಕ್ಷಣಾ ಘಟಕ ಸಂಯುಕ್ತಾಶ್ರಯದಲ್ಲಿ ನಡೆದ ಮಕ್ಕಳ ರಕ್ಷಣೆ ಮತ್ತು ಕಾಯ್ದೆಗಳ ಅನುಷ್ಠಾನ, ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳ ಹಕ್ಕುಗಳ ರಕ್ಷಣೆಗೆ ಮಕ್ಕಳ ರಕ್ಷಣಾ ಘಟಕ ಒಂದೇ ಕೆಲಸ ಮಾಡಿದರೆ ಸಾಲದು. ಎಲ್ಲ ಇಲಾಖೆಗಳು ಮಕ್ಕಳ ಹಕ್ಕುಗಳ ರಕ್ಷಣೆ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಈ ಮೂಲಕ ಮಕ್ಕಳಿಗೆ ಆಗುತ್ತಿರುವ ಅನ್ಯಾಯ, ತಾರತಮ್ಯ ತಡೆಯಬೇಕು ಎಂದು ಸೂಚಿಸಿದರು.
ಅನೇಕ ಕಡೆಗಳಲ್ಲಿ ಹೋಟೆಲ್‌ಗಳು, ಅಪಾಯಕಾರಿ ಕಾರ್ಖಾನೆಗಳಲ್ಲಿ ಕೆಲಸ ಮಾಡುವುದು, ಭಿಕ್ಷಾಟನೆ, ಕುರಿ, ದನ ಕಾಯುವುದು, ಪೋಷಕರಿಗೆ ಹೊಲಗಳಲ್ಲಿ ಸಹಾಯ ಮಾಡುವ ಕೆಲಸವನ್ನು ಮಕ್ಕಳು ಮಾಡುತ್ತಿದ್ದಾರೆ. ಈ ಎಲ್ಲ ಹಂತಗಳಲ್ಲಿಯೂ ಮಕ್ಕಳು ಶಿಕ್ಷಣದಿಂದ ದೂರ ಉಳಿಯುತ್ತಿದ್ದಾರೆ. ಹೀಗಾಗಿ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
Related Articles
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ| ಜಯಶ್ರೀ ಚನ್ನಾಳ ಮಾತನಾಡಿ, ಶಾಲೆಗಳಲ್ಲಿ ಬಿಸಿಯೂಟ, ಮೊಟ್ಟೆ, ಬಾಳೆ ಹಣ್ಣು ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ನೀಡಲಾಗುತ್ತಿದೆ. ಹೀಗಾಗಿ ಮಕ್ಕಳು ಶಾಲೆಗೆ ಹೋದರೆ ಅವರ ಅರ್ಧ ಸಮಸ್ಯೆಗಳು ನಿವಾರಣೆ ಆಗುತ್ತವೆ. ಪೋಷಕರು ಮಕ್ಕಳನ್ನು ತಪ್ಪದೆ ಶಾಲೆಗೆ ಕಳಿಸಬೇಕು ಎಂದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶರಣಬಸಪ್ಪ ಬೆಳಗುಂಪಿ ಮಾತನಾಡಿ, ಈಗ ಕೋವಿಡ್ ಮೂರನೇ ಅಲೆ ಆರಂಭವಾಗಿದೆ. ಮತ್ತೆ ಲಾಕ್‌ಡೌನ್ ಆದರೆ ಮಕ್ಕಳು ಕಲಿಕೆಯಲ್ಲಿ ಹಿಂದೆ ಬೀಳುತ್ತಾರೆ. ಹೀಗೆ ಆಗದಂತೆ ನೋಡಿಕೊಳ್ಳಬೇಕು ಎಂದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಡಾ| ಯಲ್ಲಾಲಿಂಗ ಕಾಳನೂರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರಮೇಶ ಸಂಗಾ, ನಗರ ಸಹಾಯಕ ಪೊಲೀಸ್ ಆಯುಕ್ತ ಎಂ.ಎನ್ .ದೀಪನ್ ಮಾತನಾಡಿದರು. ವಿವಿಧ ಇಲಾಖೆ ಅಧಿಕಾರಿಗಳು ಮತ್ತು ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಸಿಗಬೇಕು. ಕೋವಿಡ್ ಕಾರಣ ಈಗ ಆನ್‌ಲೈನ್ ತರಗತಿಗಳು ಹೆಚ್ಚು ನಡೆಯುತ್ತಿವೆ. ಆದರೆ, ಆನ್‌ಲೈನ್ ತರಗತಿಗಳಲ್ಲಿ ಭಾಗವಹಿಸಲು ಎಲ್ಲ ಮಕ್ಕಳಿಗೂ ಸಾಧ್ಯವಾಗುವುದಿಲ್ಲ. ಅಂತಹ ಮಕ್ಕಳನ್ನು ಗುರುತಿಸಿ ಶಿಕ್ಷಣ ಸಿಗುವಂತೆ ಮಾಡಬೇಕು. -ಡಾ| ಜಯಶ್ರೀ ಚನ್ನಾಳ, ಅಧ್ಯಕ್ಷೆ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ
ಸದ್ಯ ಅಂತರ್ಜಾಲ ಯುಗದಲ್ಲಿ ಮಕ್ಕಳು ಇದ್ದಾರೆ. ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚುತ್ತಿದೆ. ಹೀಗಾಗಿ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿದೆ. ಈ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸಬೇಕು. -ಎಂ.ಎನ್.ದೀಪನ್, ಎಸಿಪಿ
ಮಗು ತಾಯಿ ಗರ್ಭದಲ್ಲಿ ಇರುವಾಗಲೇ ಅದಕ್ಕೆ ಪೌಷ್ಟಿಕ ಆಹಾರದ ಹಕ್ಕು ಸಿಗುತ್ತದೆ. ಅದಕ್ಕಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಹೀಗಾಗಿ ಅಂಗನವಾಡಿ ಕಾರ್ಯಕರ್ತೆಯರು ತಾಯಂದಿರಿಗೆ ಸರ್ಕಾರದ ಸೌಲಭ್ಯ ತಲುಪಿಸುವ ಕೆಲಸ ಮಾಡಬೇಕು. -ಸುಶಾಂತ ಎಂ.ಚೌಗಲೆ, ಹಿರಿಯ ಸಿವಿಲ್ ನ್ಯಾಯಾಧೀಶ