ಬೆಂಗಳೂರು: ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿ ಪರಿಚಯಿಸಿರುವ “ಕಾಯ್ದಿರಿಸದ ಟಿಕೆಟ್ ವ್ಯವಸ್ಥೆ’ (ಯುಟಿಎಸ್)ಗೆ ಅತ್ಯುತ್ತಮ ಸ್ಪಂದನೆ ದೊರಕಿದ್ದು, ಕೇವಲ ನಾಲ್ಕು ತಿಂಗಳಲ್ಲಿ 50 ಸಾವಿರ ಪ್ರಯಾಣಿಕರು ಇದರ ಬಳಕೆ ಮಾಡುತ್ತಿದ್ದಾರೆ.
ಫೆಬ್ರವರಿಯಲ್ಲಿ ಯುಟಿಎಸ್ ಸೇವೆ ಆರಂಭಿಸಲಾಗಿತ್ತು. ಈವರೆಗೆ 51 ಸಾವಿರ ಪ್ರಯಾಣಿಕರು ಈ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಂದ್ದಾರೆ. ಈ ಪೈಕಿ 20 ಸಾವಿರಕ್ಕೂ ಅಧಿಕ ಮಂದಿ ನಿತ್ಯ ಇದನ್ನು ಬಳಕೆ ಮಾಡುತ್ತಿದ್ದಾರೆ ಎಂದು ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆರ್.ಎಸ್. ಸಕ್ಸೇನ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ಆ್ಯಪ್ ಮೂಲಕ ಖರೀದಿಸಿದ ಟಿಕೆಟ್‌ನಿಂದಾಗಿ ವಿಭಾಗಕ್ಕೆ ನಿತ್ಯ 70 ಸಾವಿರ ರು. ಆದಾಯ ಬರುತ್ತಿದೆ. ಪ್ರಯಾಣಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ಉದ್ದೇಶದಿಂದ ಪೇಟಿಎಂ, ಮೊಬಿಕ್ವಿಕ್ ಮೊಬೈಲ್ ವಾಲೆಟ್ ಮೂಲಕವೂ ಟಿಕೆಟ್ ದರ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.
ರೈಲು ನಿಲ್ದಾಣಗಳ ಟಿಕೆಟ್ ಕೌಂಟರ್‌ನಲ್ಲಿ ಸರದಿಯಲ್ಲಿ ನಿಂತು ಟಿಕೆಟ್ ಪಡೆಯುವ ಕಿರಿಕಿರಿಯಿಂದ ಜನರಿಗೆ ಮುಕ್ತಿ ನೀಡಲು ಈ ಯುಟಿಎಸ್ ಪರಿಚಯಿಸಲಾಗಿದೆ. ಉಳಿದ ವಿಭಾಗಗಳಿಗಿಂತ ಬೆಂಗಳೂರು ವಿಭಾಗದಲ್ಲಿ ಅತಿಹೆಚ್ಚು ಪ್ರಯಾಣಿಕರು ಆ್ಯಪ್ ಬಳಸುತ್ತಿದ್ದಾರೆ ಎಂದು ವಿವರಿಸಿದರು.
ಪ್ರಯಾಣಿಕರ ಸುರಕ್ಷಿತ ಪ್ರಯಾಣಕ್ಕಾಗಿ ಹಳೆಯ ರೈಲು ಹಳಿಗಳ ಬದಲಾವಣೆ ಮುಖ್ಯವಾಗಿದೆ. ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದಲ್ಲಿ 1,100 ಕಿ.ಮೀ. ರೈಲು ಹಳಿ ಬದಲಾವಣೆಯಾಗಬೇಕು. ಹಿಂದಿನ ವರ್ಷಗಳಲ್ಲಿ ನಾನಾ ಕಾರಣಗಳಿಂದ ಹಳಿ ಬದಲಾವಣೆ ಕಾಮಗಾರಿ ವಿಳಂಬವಾಗುತ್ತಿತ್ತು. 2017-18ನೇ ಸಾಲಿನಲ್ಲಿ 133 ಕಿ.ಮೀ. ಹಳಿ ಬದಲಾವಣೆ ಕಾರ್ಯ ನಡೆದ್ದಿತ್ತು. 2016-17ರಲ್ಲಿ ಕೇವಲ 60 ಕಿ.ಮೀ. ಹಳಿ ಬದಲಾವಣೆ ಮಾಡಲಾಗಿತ್ತು.