Advertisement

ಸರ್ಕಾರಕ್ಕೆ ಬಡ್ತಿ ಮೀಸಲಾತಿ ತಲೆಬಿಸಿ

09:54 AM Aug 31, 2017 | Team Udayavani |

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದ ಅಧಿಕಾರಿಗಳಿಗೆ ಬಡ್ತಿ ಮೀಸಲಾತಿ ನೀಡಿರುವ ಸಂಬಂಧ ಹೊರಡಿಸಿರುವ ಸುಗ್ರೀವಾಜ್ಞೆ ವಿಚಾರದಲ್ಲಿ ರಾಜ್ಯ ಸರ್ಕಾರ ಮುಂದೇನು ಎಂಬ ಆತಂಕದಲ್ಲಿದೆ.

Advertisement

ರಾಜ್ಯಪಾಲರು ಸುಗ್ರೀವಾಜ್ಞೆ ಕುರಿತು ಕೆಲವೊಂದು ಸ್ಪಷ್ಟನೆ ಕೋರಿದ್ದಾರೆ. ಲಿಖೀತವಾಗಿ ಸ್ಪಷ್ಟನೆ ನೀಡಲಾಗಿದೆಯಾದರೂ ರಾಜ್ಯಪಾಲರನ್ನು ಖುದ್ದು ಭೇಟಿ ಮಾಡಲು ಕಾನೂನು ಸಚಿವ ಟಿ.ಬಿ.ಜಯಚಂದ್ರ ಕಾಯುತ್ತಿದ್ದಾರೆ. ರಾಜ್ಯಪಾಲರು ಗುಜರಾತ್‌ನ ರಾಜ್‌ಕೋಟ್‌ ಗೆ ಹೋಗಿರುವುದರಿಂದ ಭೇಟಿ ಸಾಧ್ಯವಾಗಿಲ್ಲ. ಗುರುವಾರ ಬೆಳಗ್ಗೆ ರಾಜ್ಯಪಾಲರು ನಗರಕ್ಕೆ ಆಗಮಿಸಲಿದ್ದು ನಂತರ ಸಮಯ ಕೇಳಿ ಭೇಟಿ ಮಾಡಬೇಕಿದೆ. ಈ ಮಧ್ಯೆ, ಸೆ.1ರಂದು ಸುಪ್ರೀಂ ಕೋರ್ಟ್‌ನಲ್ಲಿ ಬಡ್ತಿ ಮೀಸಲಾತಿ ವಿಚಾರಣೆ ಬರಲಿದೆ. ಅಷ್ಟರಲ್ಲಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಗೀಕಾರ ಪಡೆದು ಪ್ರಮಾಣ ಪತ್ರದೊಂದಿಗೆ ಸಲ್ಲಿಸಬೇಕಿದೆ. ಒಂದೊಮ್ಮೆ ರಾಜ್ಯಪಾಲರು ಸ್ಪಷ್ಟನೆ ಒಪ್ಪದೆ ಇದ್ದರೆ ಸುಗ್ರೀವಾಜ್ಞೆ ವಾಪಸ್‌ ಆಗಲಿದೆ. ಆಗ ಏನು ಮಾಡಬೇಕು ಎಂಬುದು ಸರ್ಕಾರಕ್ಕೆ ತಲೆಬಿಸಿಯಾಗಿದೆ.

ನ್ಯಾಯಾಲಯದ ಸಂಘರ್ಷ ಬೇಡ ಎನ್ನುವುದಾದರೆ ಬಡ್ತಿ ಮೀಸಲಾತಿ ಪಡೆದವರಿಗೆ ಹಿಂಬಡ್ತಿ ನೀಡಿ ಬಡ್ತಿ ಮೀಸಲಾತಿಯಿಂದ ಅನ್ಯಾಯವಾಗಿರುವವರಿಗೆ ಬಡ್ತಿ ನೀಡಿರುವ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಆದರೆ, ಈಗಾಗಲೇ ಬಡ್ತಿ ಪಡೆದವರಿಗೆ ಹಿಂಬಡ್ತಿ ನೀಡಲು ರಾಜ್ಯ ಸರ್ಕಾರಕ್ಕೆ ಇಷ್ಟವಿಲ್ಲ. ಹೀಗಾಗಿ, ಮುಂದೇನು ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಮಾಜಿ ಅಡ್ವೋಕೇಟ್‌ ಜನರಲ್‌ ಪ್ರೊ. ರವಿವರ್ಮಕುಮಾರ್‌ ಅವರ ಪ್ರಕಾರ, ರಾಜ್ಯಪಾಲರು ಯಾವುದೇ ನಿರ್ಧಾರ  ಕೈಗೊಳ್ಳದಿದ್ದರೆ ಬಡ್ತಿ ಸುಗ್ರೀವಾಜ್ಞೆ ರಾಜ್ಯಪಾಲರ ಬಳಿ ಪರಿಶೀಲನೆಯಲ್ಲಿದೆ ಎಂದು ಸದ್ಯದ ಯಥಾಸ್ಥಿತಿಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬಹುದು.  ರಾಜ್ಯಪಾಲರು ಸರ್ಕಾರದ ಸಲಹೆಗಾರರು. ಅವರು ಸುಗ್ರೀವಾಜ್ಞೆ ತಿರಸ್ಕರಿಸಲು ಅವಕಾಶ ಇಲ್ಲ. ಒಂದೊಮ್ಮೆ ಆ ರೀತಿ ಮಾಡಿದ್ದೇ ಆದರೆ ಅದಕ್ಕೆ ಪರಿಹಾರ ಕಂಡುಕೊಳ್ಳಲು ಸರ್ಕಾರಕ್ಕೆ ಅದರದೇ ಆದ ಮಾರ್ಗಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next