ಹುಣಸಗಿ: ಸಾರ್ವಜನಿಕರ ಪ್ರತಿಯೊಂದು ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವುದರ ಜೊತೆಗೆ ಪರಿಹರಿಸಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಮಂಗಳವಾರ ಸಾರ್ವಜನಿಕರ ಸಮಸ್ಯೆಗಳ ಕುರಿತು ಅರ್ಜಿ ಸ್ವೀಕರಿಸಿ ಮಾತನಾಡಿ, ಸಾರ್ವಜನಿಕರ ಅರ್ಜಿಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದರೆ ಸಂಬಂಧಿಸಿದ ಅಧಿಕಾರಿಗಳಿಗೆ ಅಮಾನತು ಮಾಡಲಾಗುವುದು ಎಂದು ಖಡಕ್ಕಾಗಿ ಎಚ್ಚರಿಸಿದರು.
ಹುಣಸಗಿ ಪಟ್ಟಣದಲ್ಲಿ ಸ್ವತ್ಛತೆ ಕಾಪಾಡಬೇಕು. ಎಲ್ಲೆಂದರಲ್ಲಿ ವ್ಯಾಪಾರ ತಳ್ಳು ಗಾಡಿ ನಿಲ್ಲಿಸದೆ ಸೂಕ್ತ ಸ್ಥಳಗಳಲ್ಲಿ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕು. ಸಂಚಾರಕ್ಕೆ ತೊಂದರೆ ಆಗದಂತೆ ನಿಗಾವಹಿಸಬೇಕು ಎಂದು ಪಪಂ ಮುಖ್ಯಾಧಿಕಾರಿಗಳಿಗೆ ತಿಳಿಸಿದರು.
ತಹಶೀಲ್ದಾರ್ ಕಚೇರಿ ಸುತ್ತಲು ಸ್ವಚ್ಛತೆ ಕಾಪಾಡಬೇಕು. ಕ್ರಮಬದ್ಧವಾಗಿ ಕಚೇರಿ ಸಿದ್ಧಪಡಿಸಿಕೊಳ್ಳಬೇಕು. ಅಲ್ಲದೆ ಆವರಣದಲ್ಲಿ ವಾಹನಗಳ ನಿಲುಗಡೆಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು ಎಂದು ತಹಶೀಲ್ದಾರ್ ಅಶೋಕ ಸುರಪುರಕರ್‌ಗೆ ಸೂಚಿಸಿದರು.
Related Articles
ಪ್ರತಿ ತಿಂಗಳು ತಾಲೂಕು ಕಚೇರಿಗೆ ಭೇಟಿ
ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಮುಂದುವರೆದ ಭಾಗವಾಗಿ ಪ್ರತಿ ತಿಂಗಳು ಆಯಾ ತಾಲೂಕು ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳ ಆಲಿಸಿ ಪರಿಹರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಹುಣಸಗಿ ತಾಲೂಕು ಕಚೇರಿಗೆ ಭೇಟಿ ನೀಡಿದ್ದು, ವಿವಿಧ ಸಮಸ್ಯೆಗಳ ಕುರಿತು ಅರ್ಜಿಗಳು ಪಡೆದು ಸಂಬಂಧಿಸಿದ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಈ ವೇಳೆ ಪಹಣಿ, ಪಡಿತರ ಚೀಟಿ, ಸರ್ವೇ, ವಿದ್ಯುತ್ ಸಮಸ್ಯೆ, ಸಾರಿಗೆ ಸೇರಿದಂತೆ 18ಕ್ಕೂ ಹೆಚ್ಚು ಅರ್ಜಿಗಳನ್ನು ಸಾರ್ವಜನಿಕರು ಜಿಲ್ಲಾಧಿಕಾರಿಗೆ ಸಲ್ಲಿಸಿ ಸಮಸ್ಯೆ ತೋಡಿಕೊಂಡರು. ಜಿಲ್ಲಾ ಸಹಾಯಕ ಅಧಿಕಾರಿ ಶಾಲಮ್ ಹುಸೇನ್, ತಹಶೀಲ್ದಾರ್ ಅಶೋಕ ಸುರಪುರಕರ್, ಗ್ರೇಡ್-2 ತಹಶೀಲ್ದಾರ್ ಮಹಾದೇವಪ್ಪಗೌಡ ಬಿರಾದಾರ, ತಾಪಂ ಇಒ ಬಸವರಾಜ ಸ್ವಾಮಿ, ರೇಷ್ಮೆ ವಿಸ್ತರಣಾಧಿಕಾರಿ ಸಾಬರೆಡ್ಡಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.