ಅಭಿವೃದ್ಧಿಗಾಗಿ ಸರ್ಕಾರ ತಕ್ಷಣದ ಫಲಿತಾಂಶಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಆರ್‌ಬಿಐ ದೀರ್ಘಕಾಲೀನ ಮತ್ತು ಶಾಶ್ವತ ಉಪಶಮನಕ್ಕೆ ಆದ್ಯತೆ ನೀಡುತ್ತದೆ. ಭಿನ್ನಮತದಿಂದ ಏನೂ ಸಾಧಿಸಲಾಗದು. ಸರ್ಕಾರ ಆರ್‌ಬಿಐನ ಸ್ವಾಯತ್ತತೆಯನ್ನು ಗೌರವಿಸಬೇಕು. ಪರಸ್ಪರ ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಬೇಕು. ಆರ್‌ಬಿಐ ಮತ್ತು ಸರ್ಕಾರಗಳ ನಡುವಿನ ಕಿತ್ತಾಟ ಉತ್ತಮ ಬೆಳವಣಿಗೆಯಲ್ಲ. ಪ್ರತಿಷ್ಠೆಯನ್ನು ಬದಿಗಿಟ್ಟು ದೇಶದ ಜನತೆಯ ಹಿತವನ್ನು ಗಮನದಲ್ಲಿಟ್ಟುಕೊಳ್ಳಬೇಕು.
ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಾದ ಸಿಬಿಐ ನಲ್ಲಿ ಉಂಟಾಗಿದ್ದ ಬಿಕ್ಕಟ್ಟಿನ ಬೆನ್ನಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತು ಕೇಂದ್ರ ಸರ್ಕಾರದ ನಡುವಿನ ಭಿನ್ನಮತ ತೀವ್ರಗೊಂಡಿದೆ. ಕೇಂದ್ರೀಯ ಬ್ಯಾಂಕ್ ಆದ ಆರ್‌ಬಿಐ ಒಂದು ಸ್ವಾಯತ್ತ ಮತ್ತು ಸ್ವತಂತ್ರ ಸಂಸ್ಥೆಯಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದೇಶದ ಎಲ್ಲಾ ಬ್ಯಾಂಕ್‌ಗಳ ನಿರ್ವಹಣೆಯ ಮೇಲೆ ಹತೋಟಿ ಹೊಂದಿರುತ್ತದೆ ಮಾತ್ರವಲ್ಲದೇ ಆರ್ಥಿಕ ಪರಿಸ್ಥಿತಿ ಸರಿದೂಗಿಸುವ ದೃಷ್ಟಿಯಿಂದ ರೂಪುರೇಷೆಗಳನ್ನು ನಿರ್ಮಿಸಿ ನಿರ್ದೇಶನ ನೀಡುತ್ತದೆ.
ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಅನುತ್ಪಾದಕ ಆಸ್ತಿ (ಎನ್‌ಪಿಎ) ಹೆಚ್ಚಾಗಿರುವುದಕ್ಕೆ ಬ್ಯಾಂಕ್‌ಗಳ ಆರ್‌ಬಿಐ ಮೇಲೆ ಸೂಕ್ತ ನಿಗಾ ವಹಿಸದೇ ಇದ್ದದ್ದೇ ಕಾರಣವೆಂದು ಸರ್ಕಾರ ತನ್ನ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಸ್ತುತ ಬ್ಯಾಂಕ್‌ಗಳು 9.5 ಲಕ್ಷ ಕೋಟಿ ಭಾರೀ ಮೊತ್ತದ ಎನ್‌ಪಿಎ ಹೊಂದಿವೆ. ಈ ಕುರಿತು ಸರಕಾರ ಆರ್‌ಬಿಐ ಗೆ ಹಲವಾರು ಪತ್ರಗಳನ್ನು ಕೂಡಾ ಬರೆದಿದೆ. ಎನ್‌ಪಿಎ ಹೆಚ್ಚಾಗದಂತೆ ನಿಗ್ರಹಿಸಲು ಮೇಲಿಂದ ಮೇಲೆ ಆರ್‌ಬಿಐ ಕಾನೂನು ಪ್ರಕಾರ ಆದೇಶಗಳನ್ನು ನೀಡುತ್ತದೆ. ನಿರ್ದೇಶನ ಪಾಲಿಸದೇ ಇದ್ದಲ್ಲಿ ದೇಶದ ಆರ್ಥಿಕ ಸ್ವಾಸ್ಥ್ಯದ ಮೇಲೆ ಪ್ರತಿಕೂಲ ಪರಿಣಾಮವುಂಟಾಗುತ್ತದೆ. ಆರ್‌ಬಿಐನ ಮೇಲಾಧಿಕಾರಿಗಳು ಕೇಂದ್ರದೊಂದಿಗೆ ಸಹಕರಿಸುತ್ತಿಲ್ಲ ಮತ್ತು ಕೇಂದ್ರ ಸರ್ಕಾರದ ಸೂಚನೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ ನೆಪವೊಡ್ಡಿ ಆರ್‌ಬಿಐ ಆ್ಯಕ್ಟ್‌ನಲ್ಲಿರುವ ಕಾಲಂ 7(1) ಕಾಯಿದೆಯನ್ನು ಪ್ರಯೋಗ ಮಾಡಲು ಮುಂದಾಗಿದೆ. ಇದರಿಂದ ಆರ್‌ಬಿಐ ನ ಸ್ವಾಯತ್ತತೆಗೆ ಧಕ್ಕೆಯಾಗಲಿದೆ. ಹೀಗಾಗಿ ಆರ್‌ಬಿಐ ಅಧಿಕಾರಿಗಳು ಆತಂಕಗೊಂಡಿದ್ದಾರೆ. ಜಾಗತಿಕ ಮಟ್ಟದ ಆರ್ಥಿಕ ಬಿಕ್ಕಟ್ಟಿನ ಸನ್ನಿವೇಶಗಳು ಎದುರಾದಾಗ ಕೂಡ ಕಾಲಂ 7 ಪ್ರಸ್ತಾಪಿಸಿರಲಿಲ್ಲ. ಆರ್‌ಬಿಐನ ಸೆಕ್ಷನ್ 7(1) ಕಾಯ್ದೆ ಪ್ರಕಾರ ಆರ್‌ಬಿಐ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಸ್ವತಃ ನಿರ್ಧಾರ ತೆಗೆದುಕೊಳ್ಳಬಹು ದಾಗಿದೆಯಾದರೂ ಕೆಲವು ಸಂದರ್ಭಗಳಲ್ಲಿ ಸರ್ಕಾರ ಹೇಳಿದ್ದನ್ನು ಕೇಳಬೇಕಾಗುತ್ತದೆ. ಇತ್ತೀಚೆಗೆ ಆರ್‌ಬಿಐ ನ ಡೆಪ್ಯೂಟಿ ಗವರ್ನರ್ ಆರ್‌ಬಿಐ ಕಾರ್ಯನಿರ್ವಹಣೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಿ ಹತೋಟಿ ಸಾಧಿಸಲು ಯತ್ನಿಸುತ್ತಿರುವುದರ ಬಗ್ಗೆ ನೇರವಾಗಿ ತಮ್ಮ ಅಸಹನೆ ವ್ಯಕ್ತಪಡಿಸಿದ್ದಾರೆ. ಬ್ಯಾಂಕ್‌ಗಳಲ್ಲಿ ಎನ್‌ಪಿಎ ಹೆಚ್ಚಾಗಲು ಆರ್‌ಬಿಐ ಕಾರಣವಲ್ಲ. ಬದಲಾಗಿ ಕೇಂದ್ರ ಸರ್ಕಾರದ ಮತ ಬ್ಯಾಂಕ್‌ಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಿರುವ ದೋಷಪೂರಿತ ಆರ್ಥಿಕ ನೀತಿಗಳೇ ಕಾರಣವಾಗಿವೆ ಎಂದಿದ್ದಾರೆ. ರಾಜಕೀಯವಾಗಿ ಬಲಾಡ್ಯವಾಗಿರುವ ಕೆಲವು ರಾಜಕಾರಣಿಗಳ ಸಹಕಾರದಿಂದ ಕೆಲವು ಉದ್ಯಮಿಗಳು ಬ್ಯಾಂಕ್‌ಗಳಿಂದ ಸಾವಿರಾರು ಕೋಟಿ ರೂ. ಗಳಷ್ಟು ಸಾಲ ಪಡೆದು ಮರುಪಾವತಿಸದೇ ವಿದೇಶಗಳಿಗೆ ಪರಾರಿಯಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಎನ್‌ಪಿಎಗಳಲ್ಲಿ ಸಿಂಹಪಾಲು ಬೃಹತ್ ಉದ್ದಿಮೆಗಳದ್ದಾಗಿದೆ. ಇದರ ಕುರಿತು ಸರಕಾರ ಚಿಂತಿಸಬೇಕಾಗಿದೆ. ದೇಶದ ಆರ್ಥಿಕ ಸ್ಥಿತಿಯನ್ನು ಹಳಿಯ ಮೇಲೆ ಬರುವಂತೆ ಮಾಡಲು ಆರ್‌ಬಿಐ ತನ್ನದೇ ಆದ ಕಾನೂನು ನೀತಿ ನಿಯಮಗಳನ್ನು ಅನುಸರಿಸುತ್ತದೆ. ಆದರೆ ಸರ್ಕಾರ ತೀವ್ರಗತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದೆ. ಆರ್‌ಬಿಐ ನ ಗವರ್ನರ್, ನಿರ್ದೇಶಕರು ಮತ್ತಿತರ ಪ್ರಮುಖ ಹುದ್ದೆಗಳಿಗೆ ಸೂಕ್ತ ವ್ಯಕ್ತಿಗಳನ್ನು ನೇಮಿಸುವ ಹಕ್ಕು ಕೇಂದ್ರ ಸರ್ಕಾರಕ್ಕಿದೆ. ಆದರೆ ಇಲ್ಲಿ ಪ್ರಾಮಾಣಿಕತೆ ಮತ್ತು ಬದ್ಧತೆ ಮುಖ್ಯವಾಗಿರುತ್ತದೆ. ಸಂಘ ಪರಿವಾರದ ಚಿಂತಕರೊಬ್ಬರನ್ನು ಕೇಂದ್ರ ಸರ್ಕಾರ ಆರ್‌ಬಿಐಗೆ ನಾಮನಿರ್ದೇಶನ ಮಾಡಿರುವುದು ಹಸ್ತಕ್ಷೇಪಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಬಹುಶಃ ಈ ವಿಷಯವೇ ಬಿಕ್ಕಟ್ಟಿಗೆ ಮುಖ್ಯ ಕಾರಣವಾಗಿರಬಹುದು.
ಆರ್‌ಬಿಐನ ಹೆಚ್ಚುವರಿ ನಿಧಿಯನ್ನು ವರ್ಗಾಯಿಸುವಂತೆ ಒತ್ತಡ ಹೇರಿದ್ದರೂ ಅದರ ಗವರ್ನರ್ ಊರ್ಜಿತ ಪಟೇಲ್ ನಿರಾಕರಿಸಿದ್ದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕೇಂದ್ರ ಮತ್ತು ಆರ್‌ಬಿಐ ನಡುವಿನ ಭಿನ್ನಮತ ತಾರಕಕ್ಕೇರಿದೆ. ಊರ್ಜಿತ್ ಪಟೇಲ್ ಒತ್ತಡ ಹೆಚ್ಚಾದರೆ ರಾಜೀನಾಮೆ ಸಲ್ಲಿಸುವ ನಿರ್ಧಾರ ಮಾಡಲಿದ್ದಾರೆ ಎಂದು ವರದಿಯಾಗಿರುವುದು ಆಘಾತಕಾರಿ. ಅಭಿವೃದ್ಧಿಗಾಗಿ ಸರ್ಕಾರ ತಕ್ಷಣದ ಫಲಿತಾಂಶಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಆರ್‌ಬಿಐ ದೀರ್ಘಕಾಲೀನ ಮತ್ತು ಶಾಶ್ವತ ಉಪಶಮನಕ್ಕೆ ಆದ್ಯತೆ ನೀಡುತ್ತದೆ. ಭಿನ್ನಮತದಿಂದ ಏನೂ ಸಾಧಿಸಲಾಗದು. ಸರ್ಕಾರ ಆರ್‌ಬಿಐನ ಸ್ವಾಯತ್ತತೆಯನ್ನು ಗೌರವಿಸಬೇಕು. ಪರಸ್ಪರ ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಬೇಕು.
ಆರ್‌ಬಿಐ ಮತ್ತು ಸರ್ಕಾರಗಳ ನಡುವಿನ ಕಿತ್ತಾಟ ಉತ್ತಮ ಬೆಳವಣಿಗೆಯಲ್ಲ. ಪ್ರತಿಷ್ಠೆಯನ್ನು ಬದಿಗಿಟ್ಟು ದೇಶದ ಜನತೆಯ ಹಿತವನ್ನು ಗಮನದಲ್ಲಿಟ್ಟು ಕೊಳ್ಳಬೇಕು. ಸರ್ಕಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸ್ವಾಯತ್ತತೆಯನ್ನು ಮಾನ್ಯ ಮಾಡಿಯೇ ಭಿನ್ನಮತ ಬಗೆಹರಿಸಬೇಕೆಂಬುದೇ ಎಲ್ಲರ ಆಶಯವಾಗಿದೆ.
ಲೇಖಕರು, ಸ್ಟೇಟ್ ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕರು)
ಪಂಪಾಪತಿ ಹಿರೇಮಠ