Advertisement
ಇಷ್ಟೆಲ್ಲಾ ಪರಿವರ್ತನೆಗಳ ನಡುವೆಯೂ ಕುಟುಂಬ ಮನೆ ಮಕ್ಕಳು ಸಮಾಜ ಕೆಲಸ ಎಲ್ಲವನ್ನೂ ಸಮಾನವಾಗಿ ತೂಗಿಸಿಕೊಂಡು ಹೋಗುತ್ತಿದ್ದಾಳೆ ಈ ದೇಶದಲ್ಲಿ ಹಲವು ಮಹಾನ್ ಸಾಧಕರು ಜನಿಸಿದ್ದಾರೆ ಅದರಲ್ಲಿ ಸಾಕಷ್ಟು ಮಹಿಳೆಯರ ಪಟ್ಟಿಯೂ ಇದೆ. ಬದಲಾದ ಕಾಲಕ್ಕೆ ಹೊಂದಿಕೊಂಡ ಮಹಿಳೆ ತನ್ನ ಅಸ್ಮಿತೆಯನ್ನು ಕಾಯ್ದುಕೊಳ್ಳುವ ಸಲುವಾಗಿ ಬದಲಾವಣೆಯನ್ನು ಒಪ್ಪಿಕೊಂಡಿದ್ದರೂ ಕೆಲವು ಮೂಲಭೂತ ಸಮಸ್ಯೆಗಳನ್ನು ಮಹಿಳೆ ಎದುರಿಸುತ್ತಿದ್ದಾಳೆ.
Related Articles
Advertisement
ಶತಮಾನಗಳು ಕಳೆದರೂ ಬದಲಾವಣೆಯಾದರೂ ಆಧುನಿಕತೆಯ ಪರಿವರ್ತನೆ ಆದರೂ ಕಾನೂನು ಸಹ ಮಹಿಳೆಯರನ್ನು ಪುರುಷರಿಗೆ ಸರಿ ಸಮಾನ ಎಂದು ಘೋಷಿಸಿದ್ದರೂ ವೃತ್ತಿಪರ ಕ್ಷೇತ್ರದಲ್ಲಿ ಕೆಲಸ ಮಾಡುವ ಬಹುಪಾಲು ಮಹಿಳೆಯರು ಪ್ರತಿನಿತ್ಯ ಸಂಕಷ್ಟಕ್ಕೆ ಒಳಗಾಗುತ್ತಲೇ ಇದ್ದಾರೆ.
ಪುರುಷ ಪ್ರಧಾನ ಸಮಾಜದಲ್ಲಿ ದುಡಿಯುವ ಮಹಿಳೆಯರನ್ನು ನೋಡುವ ರೀತಿಯು ವಿಭಿನ್ನವಾಗಿರುವುದು. ತಮ್ಮ ಅನುಕೂಲಕ್ಕೆ ತಕ್ಕಂತೆ ಮಹಿಳೆಯರನ್ನು ಅನೇಕ ವಿಧವಾಗಿ ಚಿತ್ರಿಸಿ ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತಾರೆ. ಔದ್ಯೋಗಿಕ ಕ್ಷೇತ್ರಗಳಲ್ಲಿ ಸಿಗುವ ಉತ್ತಮ ಅವಕಾಶಗಳನ್ನು ತಪ್ಪಿಸಿ ಅದರಿಂದ ವಂಚಿತರನ್ನಾಗಿ ಮಾಡುವ ಒಂದು ವರ್ಗವೂ ಇದೆ. ಪುರುಷರಷ್ಟೇ ಸರಿ ಸಮಾನವಾಗಿ ದುಡಿಯುತ್ತಿದ್ದರು ಮೊದಲಿಗೆ ವೇತನ ತಾರತಮ್ಯ ಲಿಂಗ ತಾರತಮ್ಯ ಬಹುಮುಖ್ಯ ಸಮಸ್ಯೆಯಾಗಿರುವುದು
ಜೀವನದ ಅವಿಭಾಜ್ಯ ಅಂಗ ವೃತ್ತಿ ಜೀವನವೂ ಸಹ. ಜವಾಬ್ದಾರಿ ಮತ್ತು ಅವಕಾಶ ಇರುವಂತೆಯೇ ನಮ್ಮ ವೃತ್ತಿ ಜೀವನವೂ ಸಹ ಜವಾಬ್ದಾರಿಯಿಂದ ಕೂಡಿರುವದು. ಜೀವನದ ಗುಣಮಟ್ಟ ಸಹ ಎಲ್ಲರೂ ಅಪೇಕ್ಷಿಸುವ ವಿಷಯ. ಕೆಲಸ ಮತ್ತು ಮನೆ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿದ್ದರೂ ಆಧುನಿಕ ಮಹಿಳೆ ಇಂದು ಸಮಾಜದ ನಿಂದನೆಗೆ ಒಳಪಡುತ್ತಿದ್ದಾಳೆ. ಬಹುತೇಕ ಮಹಿಳೆಯರು ಗೃಹಿಣಿಯಾಗಿರಬೇಕೆಂದು ಅಪೇಕ್ಷಿಸಿದರೂ ಸಾಧ್ಯವಾಗುವುದಿಲ್ಲ ಆರ್ಥಿಕ ಅನುಕೂಲಕ್ಕೆ ಕುಟುಂಬದ ಹೊರೆಯನ್ನು ಹೆಗಲ ಮೇಲೆ ಸ್ವಲ್ಪಮಟ್ಟಿಗೆ ಹೊರಬೇಕಾಗಿರುತ್ತದೆ.
ಇಂತಹ ಸಂಕಷ್ಟಗಳನ್ನು ಮನೆಯಿಂದ ಕಚೇರಿಯವರೆಗೆ ದಿನನಿತ್ಯ ಎದುರಿಸುತ್ತಿದ್ದರೂ ಆಯಾ ಆಯಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಮಹಿಳೆಯರೂ ಇದ್ದಾರೆ. ಮಹಿಳೆಯರ ಬೆಳವಣಿಗೆಯನ್ನು ಸಹಿಸಲಾಗದ ಪುರುಷರು ಅವರನ್ನು ಮಾನಸಿಕವಾಗಿ ಕುಗ್ಗಿಸಲು ನಾನಾ ರೀತಿಯ ಸರ್ಕಸ್ ಗಳನ್ನು ಮಾಡುತ್ತಿರುತ್ತಾರೆ. ಸಾಧಾರಣ ಮಟ್ಟಿಗೆ ಎಲ್ಲ ಮಹಿಳೆಯರು ಚಾರಿತ್ರ್ಯ ವಧೆಗೆ ಹೆದರುತ್ತಾರೆ. ಅದೇ ಪುರುಷ ವರ್ಗದ ಅಸ್ತ್ರವೂ ಆಗಿರಬಹುದು.
ಯತ್ರ ನಾರ್ಯಸ್ತು ತತ್ರ ಪೂಜ್ಯಂತೆ.. ಎಂಬ ಸನಾತನ ಮಾತಿನಂತೆ, ದೇವ – ದೇವತೆಗಳ ಕಾಲದಿಂದಲೂ ಮಹಿಳೆಯರನ್ನು ಭೋಗ ವಸ್ತುವಾಗಿ ಚಿತ್ರಿಸಿದ್ದೇ ಜಾಸ್ತಿ. ಈ ವಿಷಯ ಪುರುಷ ವರ್ಗಕ್ಕೆ ಖಾರವೆನಿಸಿದರೂ ಸತ್ಯದಿಂದ ಹೊರತಾಗಿಲ್ಲ. ಎಲ್ಲ ಪುರುಷರಿಗೂ ಅನ್ವಯಿಸುವದಿಲ್ಲ. ಈ ಮಾತನ್ನು ಬಹುತೇಕ ಪುರುಷರು ಅಲ್ಲಗಳೆದರೂ, ಸರಿ ಸಮಾನವಾಗಿ ಗೌರವ ಕೊಡುತ್ತೇವೆಂದು ಪ್ರತಿಪಾದಿಸಿದರೂ ಕೇವಲ ಕಾನೂನಿನಲ್ಲಿ ಲಾ ಪಾಯಿಂಟ್ ಆಗಿ ಶಿಷ್ಟಾಚಾರವಾಗಿ ಉಳಿದಿದೆಯೇ ಹೊರತು ವಾಸ್ತವದಲ್ಲಿ ನಡೆನುಡಿಯಲ್ಲಿ ಅದೆಲ್ಲೂ ಕಾಣಿಸುತ್ತಿಲ್ಲ.
ಎಲ್ಲರ ಜೀವನದಲ್ಲೂ ಒಂದು ಹೆಣ್ಣು ತಾಯಿಗಾಗಿ ತಂಗಿಯಾಗಿ ಸಂಗಾತಿಯಾಗಿ ಜೀವನದ ಎಲ್ಲಾ ಹಂತಗಳಲ್ಲೂ ಬಹುಮುಖ್ಯ ಪಾತ್ರವನ್ನು ವಹಿಸುತ್ತಾಳೆ. ಕುಟುಂಬದ ಸರ್ವೋತ್ತಮ ಬೆಳವಣಿಗೆಗೆ ಪ್ರತಿಫಲ ಅಪೇಕ್ಷಿಸದೇ ಕೆಲಸ ಮಾಡುತ್ತಾಳೆ. ದುಡಿಯುವ ಮಹಿಳೆಗೂ ಕೆಲಸ ನಿರ್ವಹಿಸುವ ಪೂರಕ ವಾತಾವರಣ ಮುಖ್ಯ.
ಕೆಲಸಕ್ಕೆ ಹೋಗುವ ಮಹಿಳೆಯರ ಬಗ್ಗೆ ದ್ವಂದ್ವ ನಿಲುವನ್ನು ಹೊಂದಿರುವ ವ್ಯಕ್ತಿಗಳು ಆಗಿರಲಿ ಆತರ ಪ್ರವೃತ್ತಿಯವರು ಯಾರೇ ಆಗಿರಲಿ ಈ ಮನೋಭಾವನೆಯಿಂದ ಹೊರಬಂದು ಸ್ವಚ್ಛ ಹೃದಯದಿಂದ ಮಹಿಳೆಯರನ್ನು ಗೌರವಿಸಿ, ಗೌರವ ಕೊಟ್ಟು ತಮ್ಮ ಘನತೆಯನ್ನು ಹೆಚ್ಚಿಸಿಕೊಳ್ಳುವುದು ಎಲ್ಲರಿಗೂ ಆದರ್ಶವೆಣಿಸುತ್ತದೆ. ಮಹಿಳೆಯರಿಗೂ ಅವರದೇ ಆದ ವ್ಯಕ್ತಿತ್ವವಿದೆ ಅದನ್ನು ಗೌರವಿಸಿ.– ಶ್ವೇತಾ ಪ್ರಸನ್ನ ಹೆಗಡೆ, ಶಿರಸಿ