Advertisement

ನೀಲಗಾರ ಪರಂಪರೆ, ಸಂಸ್ಕೃತಿ ಗೌರವಿಸಿ; ಸುತ್ತೂರು ಶ್ರೀ

05:46 PM Jun 16, 2022 | Team Udayavani |

ಚಾಮರಾಜನಗರ: ದೇಶದ ಶ್ರೀಮಂತ ಸಂಸ್ಕೃತಿ, ನೀಲಗಾರರ ಪರಂಪರೆ, ನೈಸರ್ಗಿಕ ಸಂಪತ್ತು ಹಾಗೂ ಸಾಹಿತ್ಯ ಕಲಾಪ್ರಕಾರಗಳ ಘನತೆಯನ್ನು ಮನವರಿಕೆ ಮಾಡಿಕೊಂಡು ಗೌರವಿಸುವುದು ಪೋಷಿಸುವುದು ಅಗತ್ಯವಾಗಿದೆ ಎಂದು ಸುತ್ತೂರು ವೀರಸಿಂಹಾಸನ ಮಠಾಧ್ಯಕ್ಷರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

Advertisement

ನಗರದ ಹೊರವಲಯದಲ್ಲಿರುವ ಸುವರ್ಣಗಂಗೋತ್ರಿಯ ಡಾ.ಬಿ.ಆರ್‌. ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರದ ನಿಜಗುಣ ಸಭಾಂಗಣದಲ್ಲಿ ಬುಧವಾರ, ಶ್ರೀ ಮಂಟೇಸ್ವಾಮಿ, ಸಿದ್ದಪ್ಪಾಜಿ, ರಾಚಪ್ಪಾಜಿ ಅಧ್ಯಯನ ಪೀಠದ ವತಿಯಿಂದ ಆಯೋಜಿಸಿದ್ದ ಮಂಟೇಸ್ವಾಮಿ ಪರಂಪರೆಯ ನೀಲಗಾರ ಆತ್ಮಕಥನವಾದ ನಾವು ಕೂಗುವ ಕೂಗು ಕೃತಿ ಬಿಡುಗಡೆಗೊಳಿಸಿ, ಸ್ನಾತಕೋತ್ತರ ಕೇಂದ್ರದ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಿ ಮಾತನಾಡಿದರು.

ಪ್ರಾಕೃತಿಕವಾಗಿ ಶ್ರೀಮಂತಿಕೆ: ಭಾರತವು ಸಮೃದ್ಧ ಸಂಸ್ಕೃತಿ ಹೊಂದಿದ ದೇಶವಾಗಿದೆ. ಹಾಗೆಯೇ ಜಿಲ್ಲೆಯು ಸಹ ಸಾಂಸ್ಕೃತಿಕ ಮತ್ತು ಪ್ರಾಕೃತಿಕವಾಗಿ ಶ್ರೀಮಂತಿಕೆಯನ್ನು ಹೊಂದಿದ್ದು, ನೀಲಗಾರ ಪಂರಪರೆಯನ್ನು ಇಲ್ಲಿನ ಕಲಾವಿದರು ಯಾವುದೇ ಅಪೇಕ್ಷೆ ಇಲ್ಲದೆ ವಂಶಪಾರಂಪರ್ಯವಾಗಿ ಉಳಿಸಿಕೊಂಡು ಬಂದಿದ್ದಾರೆ. ನೀಲಗಾರರ ಬದುಕನ್ನು ಸುಲಲಿತವಾಗಿ ಹಾಡಿನ ಮೂಲಕ ಕಟ್ಟಿಕೊಡುವ ಮಳವಳ್ಳಿ ಮಹದೇವಸ್ವಾಮಿಯವರಿಗೆ ಲಭಿಸಿರುವ ಗೌರವ ಡಾಕ್ಟರೆಟ್‌ ನೀಲಗಾರರಿಗೆ ಸಂದ ಗೌರವವಾಗಿದೆ. ನೀಲಗಾರರ ಆರ್ಥಿಕ ಮತ್ತು ಸಾಮಾಜಿಕ ಜೀವನವನ್ನು ನಾವು ಕೂಗುವ ಕೂಗು ಕೃತಿಯಲ್ಲಿ ಅಚ್ಚುಕಟ್ಟಾಗಿ ಬಿಂಬಿಸಲಾಗಿದೆ ಎಂದರು.

ಸುವರ್ಣ ಗಂಗೋತ್ರಿಯು ಅತಿ ವೇಗವಾಗಿ ಅಭಿವೃದ್ಧಿ ಹೊಂದುತಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗುತ್ತಿದೆ. ಮುಂದಿನ ದಿನಗಳಲ್ಲಿ ಸುವರ್ಣಗಂಗೋತ್ರಿ ಹೆಚ್ಚಿನ ಅಭಿವೃದ್ಧಿ ಕಾಣಲಿ, ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಆಶಾಕಿರಣವಾಗಲಿ ಎಂದು ಸ್ವಾಮೀಜಿ ಹಾರೈಸಿದರು.

ಮೈಸೂರು ವಿ.ವಿ. ಕುಲಪತಿ ಪ್ರೊ. ಹೇಮಂತಕುಮಾರ್‌ ಮಾತನಾಡಿ, ಕೇವಲ 6 ತಿಂಗಳಲ್ಲಿ ನೀಲಗಾರ ಪರಂಪರೆ ಕಲಾವಿದರನ್ನು ಒಗ್ಗೂಡಿಸಿ ಮಾಹಿತಿಯನ್ನು ಸಂಗ್ರಹಿಸಿ ನಾವು ಕೂಗುವ ಕೂಗು ಕೃತಿ ರಚಿಸಲಾಗಿದೆ. ಸ್ನಾತಕೋತ್ತರ ಕೇಂದ್ರವನ್ನು ಆಧುನಿಕ ಶಿಕ್ಷಣ ಪದ್ಧತಿಗೆ ಅನುಗುಣವಾಗಿ ಅಭಿವೃದ್ಧಿ ಪಡಿಸಲಾಗುತಿದ್ದು ಇನ್ನು ಹಲವು ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದರು.

Advertisement

ನೀಲಗಾರರ ಸಂಸ್ಕೃತಿ ಮುಂದುವರಿಸಿ: ಮಂಟೇಸ್ವಾಮಿ ಅಧ್ಯಯನ ಪೀಠ ಹಾಗೂ ಕನ್ನಡ ವಿಭಾಗದ ಸಂದರ್ಶಕ ಪ್ರಾಧ್ಯಾಪಕ ಡಾ. ಕೃಷ್ಣಮೂರ್ತಿ ಹನೂರು ಮಾತನಾಡಿ ಹಲವಾರು ತತ್ವಪದಗಳನ್ನು ಒಳಗೊಂಡಿರುವ ನೀಲಗಾರರ ಸಾಹಿತ್ಯಗಳು ಸುಧೀರ್ಘ‌ವಾಗಿ ಹಾಡುವ ಕಲೆಯಾಗಿದೆ.ನೀಲಗಾರರ ಸಂಸ್ಕೃತಿ ನಶಿಸಿಹೋಗದಂತೆ ದಾಖಲೀಕರಿಸಿ ಮುಂದಿನ ಪೀಳಿಗೆಗೆ ಉಳಿಸಿ, ಮುಂದುವರೆಸುವ ಕೆಲಸ ಆಗಬೇಕಿದೆ ಎಂದರು.

ಈ ಸಂದರ್ಭದಲ್ಲಿ ಮೈಸೂರು ವಿ.ವಿ. ಕುಲಸಚಿವ ಆರ್‌. ಶಿವಪ್ಪ, ಹಣಕಾಸು ಅಧಿಕಾರಿ ಡಾ. ಸಂಗೀತಾ ಗಜಾನನ, ಸಿಂಡಿಕೇಟ್‌ ಸದಸ್ಯ ಪ್ರದೀಪ್‌ಕುಮಾರ್‌ ದೀಕ್ಷಿತ್‌, ಡಾ. ಬಿ.ಆರ್‌. ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪೊ›. ಆರ್‌. ಮಹೇಶ್‌, ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ. ವಿಜಯಕುಮಾರಿ ಕರಿಕಲ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next