ಮಂಗಳೂರು: ಯುವಜನತೆ ದೇಶದ ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಗೌರವ ಇರಿಸಿಕೊಳ್ಳಬೇಕು. ದೇಶದ ಸಮಗ್ರತೆಮತ್ತು ಜಾತ್ಯತೀತ ತತ್ತ್ವಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು ಎಂದು ಮಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ| ಪಿ. ಸುಬ್ರಹ್ಮಣ್ಯ ಎಡಪಡಿತ್ತಾಯ ಹೇಳಿದರು.
ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ವತಿಯಿಂದ ನೆಹರೂ ಯುವ ಕೇಂದ್ರ ಮಂಗಳೂರು ಸಹಯೋಗದೊಂದಿಗೆ ನಗರದ ಜಿಲ್ಲಾ ಪಂಚಾಯತ್ ನೇತ್ರಾ ವತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಯುವ ಸಂಸತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ದ.ಕ. ಜಿ.ಪಂ. ಸಿಇಒ ಡಾ| ಸೆಲ್ವಮಣಿ ಆರ್. ಮಾತನಾಡಿ, ಯುವ ಸಂಸತ್ ಮೂಲಕ ವಿದ್ಯಾರ್ಥಿಗಳು ದೇಶದ ಸಂಸದೀಯ ವ್ಯವಸ್ಥೆಯ ಬಗ್ಗೆ ತಿಳಿವಳಿಕೆ ಹೊಂದಿಭವಿಷ್ಯದಲ್ಲಿ ಸಂಸದೀಯ ವ್ಯವಸ್ಥೆಯನ್ನು ಮಾದರಿಯಾಗಿ ಮುಂದು ವರಿಸಬೇಕು ಎಂದರು.
ಪ್ರೊಬೇಷನರಿ ಐಎಎಸ್ ಅಧಿಕಾರಿ ರಾಹುಲ್ ಶಿಂಧೆ ಮಾತನಾಡಿ, ಯುವಶಕ್ತಿ ಸಮರ್ಪಕವಾಗಿ ಬಳಕೆ ಆಗಬೇಕು.ವಿದ್ಯಾರ್ಥಿಗಳು ಧನಾತ್ಮಕ ಚಟುವಟಿಕೆ ಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ಯುವಜನತೆಯ, ವಿದ್ಯಾರ್ಥಿಗಳ ಯಾವುದೇ ಸಮಸ್ಯೆಗೆ ಸ್ಪಂದಿಸಲು ಜಿಲ್ಲಾಡಳಿತದಿಂದ ಸಹಾಯವಾಣಿ ತೆರೆಯಲಾಗಿದೆ. 1077 ನಂಬರ್‌ಗೆ ಕರೆ ಮಾಡುವ ಮೂಲಕ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳಿಗೆ ಮಾರ್ಗ ದರ್ಶನ ಪಡೆಯಬಹುದು ಎಂದರು.
ಮಂಗಳೂರು ವಿ.ವಿ. ರಾಜ್ಯ ಶಾಸ್ತ್ರ ವಿಭಾಗ ಪ್ರಾಧ್ಯಾಪಕ ಪ್ರೊ| ದಯಾನಂದ ನಾಯ್ಕ ಅತಿಥಿಯಾಗಿ ದ್ದರು. ನೆಹರೂ ಯುವ ಕೇಂದ್ರ ಡಿವೈಸಿ ರಘುವೀರ್ ಸೂಟರ್‌ಪೇಟೆ ಸ್ವಾಗತಿಸಿದರು. ಅಕ್ಷಯ್ ವಂದಿಸಿದರು.