Advertisement

ಭಾಷೆಯ ಹೆಸರಲ್ಲಿ ಹುಡುಗಾಟಿಕೆ ಬೇಡ

01:00 AM Mar 31, 2023 | Team Udayavani |

ಒಕ್ಕೂಟ ರಾಷ್ಟ್ರದಲ್ಲಿ ಎಲ್ಲ ರಾಜ್ಯಗಳ ಭಾವನೆ, ಆಯಾ ಜನರ ಸಂಸ್ಕೃತಿ, ಆಚಾರ, ವಿಚಾರ, ಭಾಷೆ, ವೈವಿಧ್ಯತೆಗೆ ಪರಸ್ಪರ ಗೌರವ ಕೊಟ್ಟುಕೊಂಡು, ಮುನ್ನಡೆಯುವುದು ಉತ್ತಮವಾದ ಮಾರ್ಗ. ಭಾರತದಂಥ ವೈವಿಧ್ಯಮಯ ದೇಶದಲ್ಲಿ ಎಲ್ಲವೂ ಒಂದೇ ರೀತಿಯಲ್ಲಿರಬೇಕು, ಒಂದೇ ಭಾಷೆ ದೇಶದಲ್ಲಿ ಪ್ರಧಾನವಾಗಿರಬೇಕು ಎಂಬ ಕಲ್ಪನೆಯೇ ಎಲ್ಲೋ ಒಂದು ಕಡೆಯಲ್ಲಿ ತಪ್ಪಾಗಿ ಕಾಣಿಸುತ್ತದೆ.

Advertisement

ಭೌಗೋಳಿಕವಾಗಿ ಭಾರತವನ್ನು ನೋಡುವುದಾದರೆ, ಉತ್ತರ ಭಾರತಕ್ಕಿಂತ ದಕ್ಷಿಣ ಭಾರತವೇ ಸ್ಥಿತಿವಂತ ಪ್ರದೇಶ. ಇಲ್ಲಿನ ಬಹುತೇಕ ರಾಜ್ಯಗಳು ಅಭಿವೃದ್ಧಿಯ ದೃಷ್ಟಿಯಿಂದ ಹೇಳುವುದಾದರೆ, ಉತ್ತರ ಭಾರತದ ರಾಜ್ಯಗಳಿಗಿಂತ ಮುಂದಿವೆ. ಅಲ್ಲದೆ ನಮ್ಮ ತೆರಿಗೆ ಹಣ, ಉತ್ತರ ಭಾರತದ ರಾಜ್ಯಗಳಿಗೆ ಹಂಚಿಕೆಯಾಗುತ್ತಿದೆ. ನಮ್ಮ ಪಾಲಿನ ಹಣ ಬರುತ್ತಿಲ್ಲ ಎಂಬುದು ದಕ್ಷಿಣ ಭಾರತದ ರಾಜ್ಯಗಳ ಆರೋಪ. ಜಿಎಸ್‌ಟಿ ವ್ಯವಸ್ಥೆ ಜಾರಿಯಾದ ಮೇಲಂತೂ ಈ ಸದ್ದು ಇನ್ನಷ್ಟು ಜೋರಾಗಿ ಕೇಳುತ್ತಲೇ ಇದೆ.

ಪರಿಸ್ಥಿತಿ ಹೀಗಿರುವಾಗ ಉತ್ತರ ಮತ್ತು ದಕ್ಷಿಣ ಭಾರತ ರಾಜ್ಯಗಳ ನಡುವೆ ಸಮನ್ವಯ ಹೆಚ್ಚುವ ಕೆಲಸವನ್ನು ಆಳುವ ಸರ್ಕಾರದವರು ಮಾಡಬೇಕು. ಆದರೆ ಕೆಲವೊಮ್ಮೆ ತೆಗೆದುಕೊಳ್ಳುವ ನಿರ್ಧಾರಗಳು ಒಕ್ಕೂಟ ಆಶಯಕ್ಕೆ ವಿರುದ್ಧವಾಗಿರುತ್ತವೆ ಎಂಬುದಕ್ಕೆ ಈಗಿನ “ದಹಿ’ ಪ್ರಕರಣವೇ ಸಾಕ್ಷಿಯಾಗಿದೆ.

ಕೇಂದ್ರ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್ಎಸ್‌ಎಸ್‌ಎಐ), ಇತ್ತೀಚೆಗಷ್ಟೇ ಆದೇಶವೊಂದನ್ನು ಹೊರಡಿಸಿ, ಎಲ್ಲ ರಾಜ್ಯಗಳೂ ಮೊಸರು ಪ್ಯಾಕೇಜ್‌ ಮೇಲೆ ಇಂಗ್ಲಿಷ್‌ ಪದ “ಕರ್ಡ್‌’ ಅನ್ನು ತೆಗೆದು ಇದರ ಬದಲಿಗೆ ಹಿಂದಿ ಪದ “ದಹಿ’ಯನ್ನು ಬಳಕೆ ಮಾಡಿ ಎಂದಿತ್ತು. ಇದು ದಕ್ಷಿಣ ರಾಜ್ಯಗಳಲ್ಲಿ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ಸುಖಾಸುಮ್ಮನೆ ದಕ್ಷಿಣ ಭಾರತದ ರಾಜ್ಯಗಳ ಮೇಲೆ ಹಿಂದಿಯನ್ನು ಏಕೆ ಹೇರಬೇಕು ಎಂಬ ಪ್ರಶ್ನೆಯನ್ನೂ ಸರ್ಕಾರಗಳ ಜತೆಗೆ ಜನಸಾಮಾನ್ಯರೂ ಕೇಳಿದ್ದಾರೆ.

ಕರ್ನಾಟಕದಲ್ಲಿ ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ, ಕಾಂಗ್ರೆಸ್‌ ನಾಯಕರು, ಕನ್ನಡ ಸಂಘಟನೆಗಳ ನಾಯಕರು, ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌, ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕೂಡ ಈ ಆದೇಶದ ಅಗತ್ಯತೆಯನ್ನೇ ಪ್ರಶ್ನಿಸಿದ್ದಾರೆ.

Advertisement

ಈ ಆಕ್ಷೇಪ ಸರಿಯಾಗಿಯೇ ಇದೆ. ಆಯಾ ರಾಜ್ಯಗಳ ಆಹಾರ ವಸ್ತುಗಳ ಪ್ಯಾಕೇಟ್‌ ಮೇಲೆ ಎದ್ದುಕಾಣುವ ರೀತಿಯಲ್ಲಿ ಆಯಾ ಪ್ರಾದೇಶಿಕ ಭಾಷೆಗಳು ಇರಬೇಕು. ಇದರ ಜತೆಗೆಯಲ್ಲಿ ಪ್ರಾದೇಶಿಕ ಭಾಷೆ ಬರದೇ ಇರುವವರಿಗೆ ಅಥವಾ ಹೊರಗಿನಿಂದ ಬಂದವರಿಗೆ ಇಂಗ್ಲಿಷ್‌ವೊಂದಿದ್ದರೆ ಸಾಕು. ಆದರೆ ದಿಢೀರನೇ ದಹಿ ಎಂಬ ಪದವನ್ನು ಎಳೆತಂದದ್ದು ಏಕೆ ಎಂಬ ಪ್ರಶ್ನೆಯೂ ಉದ್ಭವವಾಗುತ್ತದೆ. ಅಲ್ಲದೆ ಇದರ ಅಗತ್ಯತೆಯೂ ಕೂಡ ಯಾವ ದೃಷ್ಟಿಕೋನದಲ್ಲಿಯೂ ಕಾಣಿಸುವುದಿಲ್ಲ. ಯಾವುದೇ ಭಾಷೆಯನ್ನು ಯಾರ ಮೇಲಾದರೂ ಒತ್ತಾಯಪೂರ್ವಕವಾಗಿ ಹೇರಲು ಹೊರಡುವುದು ಸರಿಯಾದ ನಡೆ ಅಲ್ಲವೇ ಅಲ್ಲ. ಭಾಷೆ ಕಲಿಯುವುದು ಅವರ ಆಸಕ್ತಿಗೆ ಬಿಟ್ಟ ವಿಚಾರ. ಆಯಾ ರಾಜ್ಯಗಳ ಜನ ತಮ್ಮ ಮಾತೃಭಾಷೆಯ ಜತೆಗೆ ಹಿಂದಿಯನ್ನಾದರೂ ಕಲಿಯಲಿ, ಇಂಗ್ಲಿಷ್‌ ಅನ್ನಾದರೂ ಕಲಿಯಲಿ ಅಥವಾ ವಿದೇಶಿ ಭಾಷೆಯನ್ನಾದರೂ ಕಲಿಯಲಿ. ಅದು ಮೊದಲೇ ಹೇಳಿದ ಹಾಗೆ, ಅವರಿಷ್ಟದ ವಿಚಾರವೇ ಹೌದು. ಇದಕ್ಕೆ ಬದಲಾಗಿ, ನೀವು ಇಂಥದ್ದೇ ಭಾಷೆಯನ್ನೇ ಕಲಿಯಿರಿ ಎನ್ನುವುದು ಅಥವಾ ಇಂಥ ಭಾಷೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಹೇಳುವುದು ಸರಿಯಾದ ನಡೆ ಅಲ್ಲವೇ ಅಲ್ಲ. ಅಷ್ಟಕ್ಕೂ ಮೊಸರಿನ ಮೇಲೆ ಹಿಂದಿ ಪದ ದಹಿ ಎಂಬುದು ಏಕೆ ಇರಬೇಕು? ಇದಕ್ಕೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರವೇಹೇಳಬೇಕು.

ಏನೇ ಆಗಲಿ ಭಾಷೆಯಂಥ ಸೂಕ್ಷ್ಮ ವಿಚಾರದಲ್ಲಿ ಆಳುವ ಸರಕಾರಗಳು, ಸಂಸ್ಥೆಗಳು ತೀರಾ ಎಚ್ಚರಿಕೆಯಿಂದ ಇರಬೇಕು. ವಿರೋಧ ವ್ಯಕ್ತವಾದ ಮೇಲೆ ಎಫ್ಎಸ್‌ಎಸ್‌ಎಐ ತನ್ನ ಆದೇಶವನ್ನೇನೋ ಹಿಂದಕ್ಕೆ ಪಡೆದಿದೆ. ಆದರೆ ಭಾಷೆ ಕುರಿತಂತೆ ದೇಶಮಟ್ಟದಲ್ಲಿ ಆದ ವಿವಾದ ಏಕತೆಯ ದೃಷ್ಟಿಯಿಂದ ಒಳ್ಳೆಯದು ಅಲ್ಲವೇ ಅಲ್ಲ. ಈ ಬಗ್ಗೆ ಆಲೋಚಿಸಿ ಹೆಜ್ಜೆ ಇಡಬೇಕಾದ ಅಗತ್ಯ ಎಲ್ಲರಲ್ಲೂ ಇದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next