ಲಂಡನ್/ಹೊಸದಿಲ್ಲಿ: ಕೊರೊನಾ ಲಸಿಕೆ ಕೊವಿಶೀಲ್ಡ್‌ಗೆ ಮಾನ್ಯತೆ ನೀಡದೆ ಇರುವ ಬ್ರಿಟಿಶ್ ಸರಕಾರದ ಕ್ರಮಕ್ಕೆ ಭಾರತ ಪ್ರಬಲ ಆಕ್ಷೇಪ ವ್ಯಕ್ತಪಡಿಸಿದೆ.
ಇದೊಂದು ತಾರತಮ್ಯ ಧೋರಣೆ ಮತ್ತು ಶೀಘ್ರದಲ್ಲಿಯೇ ಇದಕ್ಕೆ ಪರಿಹಾರ ಕ್ರಮ ಸೂಚಿಸದೆ ಇದ್ದರೆ ಸೂಕ್ತ ಪ್ರತ್ಯುತ್ತರದ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ಮಂಗಳವಾರ ಎಚ್ಚರಿಕೆ ನೀಡಿದ್ದಾರೆ.
ಹೊಸದಿಲ್ಲಿಯಲ್ಲಿ ಮಂಗಳವಾರ ಮಾತ ನಾಡಿದ ಶೃಂಗ್ಲಾ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಬ್ರಿಟನಿನ ವಿದೇಶಾಂಗ ಸಚಿವೆ ಲಿಜ್ ಟ್ರಸ್ ಜತೆಗೆ ಈ ಅಂಶ ಚರ್ಚೆ ನಡೆಸಿ ದ್ದಾರೆ. ಟ್ರಸ್ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ ಎಂದಿದ್ದಾರೆ.
ಅ. 4ರ ಬಳಿಕ ಭಾರತ ಸಹಿತ ಏಳು ರಾಷ್ಟ್ರಗಳಲ್ಲಿ ನಿಗದಿತ ಡೋಸ್ ಲಸಿಕೆ ಪಡೆದರೂ ಬ್ರಿಟನ್‌ಗೆ ಆಗಮಿಸಿದರೆ ಹತ್ತು ದಿನ ಕ್ವಾರಂಟೈನ್‌ನಲ್ಲಿ ಇರಬೇಕು, ಕೊರೊನಾ ಪರೀಕ್ಷೆಗೆ ಒಳಗಾಗಬೇಕು ಎಂದು ಬ್ರಿಟನ್ ಸರಕಾರ ಆದೇಶ ನೀಡಿತ್ತು.
ಅಮೆರಿಕ ಅನುಮತಿ
ನಿಗದಿತ ಡೋಸ್ ಕೊರೊನಾ ಲಸಿಕೆ ಪಡೆ ದವರು ಮತ್ತು ನೆಗೆಟಿವ್ ಸರ್ಟಿಫಿಕೆಟ್ ಇದ್ದವರು ಅಮೆರಿಕ ಪ್ರವಾಸ ಕೈಗೊಳ್ಳ ಬಹುದು. ನವೆಂಬರ್ ಬಳಿಕ ಈ ನಿಯಮ ಅನ್ವಯ ವಾಗಲಿದೆ.