Advertisement

ಮಾತುಕತೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳಿ

06:00 AM Dec 04, 2018 | Team Udayavani |

ಬೆಂಗಳೂರು: ಮಂತ್ರಾಲಯ ಮತ್ತು ಉತ್ತರಾದಿ ಮಠದ ಮಧ್ಯೆ ನಡೆಯುತ್ತಿರುವ ವ್ಯಾಜ್ಯವನ್ನು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ಹೈಕೋರ್ಟ್‌ ಎರಡೂ ಮಠಾಧಿಪತಿಗಳಿಗೆ ಸಲಹೆ ನೀಡಿದೆ. ವೃಂದಾವನ ಜಮೀನು ಮಾಲೀಕತ್ವ ವಿವಾದಕ್ಕೆ ಸಂಬಂಧಿಸಿದ ಮೂಲ ಪ್ರಕರಣದ ವ್ಯಾಜ್ಯ ಮುಗಿಯುವ ತನಕ ತಮಗೇ ಮೊದಲ ಆರಾಧನೆಗೆ ಅವಕಾಶ ಕಲ್ಪಿಸಬೇಕು ಎಂದು ಕೋರಿ ಮಂತ್ರಾಲಯದ ಸುಬುಧೇಂದ್ರ ತೀರ್ಥ ಸ್ವಾಮೀಜಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸೋಮವಾರ ನಡೆಸಿದ ನ್ಯಾ.ಕೃಷ್ಣ ಎಸ್‌.ದಿಕ್ಷೀತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ವ್ಯಾಜ್ಯವನ್ನು ನ್ಯಾಯಾಲಯದ ಪರಿಧಿಯಿಂದ ಆಚೆಗೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿತು.

Advertisement

ವಿಚಾರಣೆ ವೇಳೆ ಈ ವಿವಾದವನ್ನು ಉತ್ತರಾದಿ ಮಠದ ಸತ್ಯಾತ್ಮತೀರ್ಥ ಸ್ವಾಮೀಜಿ ಮತ್ತು ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳಿಬ್ಬರೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಲ್ಲವೇ? ಎಂದು ಅರ್ಜಿದಾರರ ಮತ್ತು ಪ್ರತಿವಾದಿಗಳ ವಕೀಲರಿಗೆ ಪ್ರಶ್ನಿಸಿ, ಒಂದು ವೇಳೆ ಸ್ವಾಮೀಜಿಗಳು ಪರಸ್ಪರ ಭೇಟಿ ಮಾಡಲು ಸಾಧ್ಯವಾಗದೆ ಇದ್ದಲ್ಲಿ, ಉಭಯ ಮಠಗಳ ಆಡಳಿತ ಮುಖ್ಯಸ್ಥರು ಸೇರಿ ಮಾತುಕತೆ ನಡೆಸಿ ಎಂದು ನ್ಯಾಯಪೀಠ ಮೌಖೀಕ ಸಲಹೆ
ನೀಡಿತು. 

ಇದಕ್ಕೆ ಮಂತ್ರಾಲಯ ಮಠದ ಸ್ವಾಮೀಜಿ ಪರ ವಕೀಲರು ಸಮ್ಮತಿ ವ್ಯಕ್ತಪಡಿಸಿದರು. ಆದರೆ, ಉತ್ತರಾದಿ ಮಠದ ಪರ ವಕೀಲರು, ನಮ್ಮ ಸ್ವಾಮೀಜಿ ಏಕಾದಶಿ ಉಪವಾಸ ವ್ರತದಲ್ಲಿರುವ ಕಾರಣ ಸದ್ಯ ಭೇಟಿ ಮಾಡಲು ಕಷ್ಟ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ವಿಚಾರಣೆಯನ್ನು ನ್ಯಾಯಪೀಠ ಮಂಗಳವಾರಕ್ಕೆ ಮುಂದೂಡಿತು. ಕೊಪ್ಪಳ ಜಿಲ್ಲೆ ಆನೆಗೊಂದಿಯಲ್ಲಿರುವ ನವ ವೃಂದಾವನದಲ್ಲಿ ಪದ್ಮನಾಭ ತೀರ್ಥರ 694ನೇ ಆರಾಧನಾ ಮಹೋತ್ಸವ ಡಿ.5ರಿಂದ ಮೂರು ದಿನಗಳ ಕಾಲ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next