Advertisement

ಭಯೋತ್ಪಾದನೆ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಜೈಶಂಕರ್‌ ಕಿವಿಮಾತು

10:00 PM May 05, 2023 | Team Udayavani |

ಬೆನೌಲಿಮ್‌: ಭಯೋತ್ಪಾದನೆ ಇಡೀ ವಿಶ್ವಕ್ಕೆ ಮಾರಕವಾಗಿದ್ದು ಭಯೋ ತ್ಪಾದಕರು ಮತ್ತು ಅವರಿಗೆ ಕುಮ್ಮಕ್ಕು ನೀಡುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್‌.ಜೈಶಂಕರ್‌ ಶಾಂಘಾಯ್‌ ಸಹಕಾರ ಸಂಘದ ಸಮಾವೇಶದಲ್ಲಿ ಪಾಲ್ಗೊಂಡಿರುವ ಸದಸ್ಯ ರಾಷ್ಟ್ರಗಳಿಗೆ ಕಿವಿಮಾತು ಹೇಳಿದ್ದಾರೆ.

Advertisement

ಗಡಿಯಾಚೆಗಿನ ಭಯೋತ್ಪಾದನೆ ಸಹಿತ ಎಲ್ಲ ತೆರನಾದ ಭಯೋ ತ್ಪಾದ ನೆಯನ್ನು ದಮನ ಮಾಡಬೇಕಿದೆ. ಈ ಗಂಭೀರ ಸಮಸ್ಯೆಯನ್ನು ನಿರ್ಲಕ್ಷಿಸಿದರೆ ದೇಶಕ್ಕೆ ಅಪಾಯಕಾರಿಯಾಗಿ ಪರಿ ಣಮಿ ಸಲಿದೆ ಎಂದವರು ಎಚ್ಚರಿಕೆ ನೀಡಿದರು. ಪಾಕಿಸ್ಥಾನದ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೋ, ಚೀನದ ಕ್ವಿನ್‌ ಗ್ಯಾಂಗ್‌ ಮತ್ತು ರಷ್ಯಾದ ಸರ್ಗೆ ಲಾವ್ರೊವ್‌ ಅವರ ಸಮ್ಮುಖದಲ್ಲಿಯೇ ಸಚಿವ ಜೈಶಂಕರ್‌ ಈ ಮಾತುಗಳನ್ನು ಹೇಳುವ ಮೂಲಕ ನೇರವಾಗಿ ಪಾಕಿಸ್ಥಾನ ಮತ್ತು ಚೀನಕ್ಕೆ ಚಾಟಿ ಬೀಸಿದರು.

ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಎಲ್ಲ ರಾಷ್ಟ್ರಗಳು ಕೈಜೋಡಿಸಬೇಕು. ಒಂದೊಮ್ಮೆ ಈ ಸಮಸ್ಯೆಯನ್ನು ಯಾವುದೇ ರಾಷ್ಟ್ರ ನಿರ್ಲಕ್ಷಿಸಿದ್ದೇ ಆದಲ್ಲಿ ಅದು ಮುಂದಿನ ದಿನಗಳಲ್ಲಿ ದೇಶದ ಭದ್ರತೆಗೇ ಸಂಚಕಾರ ತಂದೊಡ್ಡಲಿದೆ. ಭಯೋತ್ಪಾದಕರಿಗೆ ಮತ್ತು ಭಯೋತ್ಪಾದನ ಕೃತ್ಯಗಳಿಗೆ ಹಣಕಾಸು ನೆರವು ನೀಡುತ್ತಿರುವವರ ವಿರುದ್ಧವೂ ಕಠಿನ ಕ್ರಮ ಕೈಗೊಳ್ಳುವ ಅಗತ್ಯವಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಯಾವುದೇ ದಾಕ್ಷಿಣ್ಯ, ಅನುಕಂಪ ತೋರಿಸುವ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಪಾಕಿಸ್ಥಾನವನ್ನು ತರಾಟೆಗೆ ತೆಗೆದುಕೊಂಡರು.

ಇಡೀ ವಿಶ್ವ ಕೊರೊನಾ ಸಾಂಕ್ರಾಮಿ ಕದ ವಿರುದ್ಧ ಹೋರಾಡುತ್ತಿದ್ದರೂ ಭಯೋ ತ್ಪಾದನ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಭಯೋತ್ಪಾದನೆಗೆ ಯಾವುದೇ ಸಮರ್ಥನೆ ಇಲ್ಲವಾಗಿದ್ದು ಗಡಿಯಾಚೆಗಿನ ಭಯೋತ್ಪಾದನೆ ಸಹಿತ ಎಲ್ಲ ತೆರನಾದ ಭಯೋತ್ಪಾದನೆಯನ್ನು ಮೂಲೋತ್ಪಾಟನೆ ಮಾಡಬೇಕಿದೆ. ಭಯೋತ್ಪಾದನೆಯ ನಿಗ್ರಹ ಎಸ್‌ಸಿಒನ ಮೂಲ ಆಶಯಗಳಲ್ಲಿ ಒಂದಾಗಿದೆ ಎಂದು ಸಚಿವ ಜೈಶಂಕರ್‌ ಹೇಳಿದರು.

ಸದಸ್ಯ ರಾಷ್ಟ್ರಗಳ ಸಹಯೋಗ ಅಗತ್ಯ
ಅಭಿವೃದ್ಧಿ ವಿಚಾರಗಳಲ್ಲಿ ಎಸ್‌ಸಿಒ ಸದಸ್ಯ ರಾಷ್ಟ್ರಗಳ ಸಹಯೋಗ, ಶಾಂತಿ, ಸ್ಥಿರತೆ ಮತ್ತು ಜನರ ನಡುವೆ ನಿಕಟ ಸಂವಹನ ವೃದ್ಧಿಯ ದಿಸೆಯಲ್ಲಿ ಈ ಸಮಾವೇಶ ಹೆಚ್ಚು ಮಹತ್ವಪೂರ್ಣವಾದುದಾಗಿದೆ. ಕೋವಿಡ್‌-19 ಸಾಂಕ್ರಾಮಿಕ ಹಾಗೂ ಭೌಗೋಳಿಕ ಮತ್ತು ಜಾಗತಿಕ ಮಟ್ಟದಲ್ಲಿನ ರಾಜಕೀಯ ವಿಪ್ಲವಗಳ ಪರಿಣಾಮ ಪೂರೈಕೆ ಸರಪಳಿಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಈ ಪರಿಸ್ಥಿತಿಯಲ್ಲಿ ಪರಸ್ಪರ ಸಹಕಾರ ಮತ್ತು ಸಹಭಾಗಿತ್ವ ಅತೀಮುಖ್ಯವಾಗಿದೆ. ಅಫ್ಘಾನಿಸ್ಥಾನದಲ್ಲಿನ ಬೆಳವಣಿಗೆಗಳ ಮೇಲೆ ಭಾರತ ತನ್ನ ಗಮನವನ್ನು ಕೇಂದ್ರೀಕರಿಸಿದೆ. ಅಫ್ಘಾನ್‌ ಜನರ ಹಿತ ನಮ್ಮ ಮೊದಲ ಆದ್ಯತೆಯಾಗಿದೆ. ಮಾನವೀಯ ಸಹಕಾರ, ಮಹಿಳೆಯರು, ಮಕ್ಕಳು ಮತ್ತು ಅಲ್ಪಸಂಖ್ಯಾಕರ ಹಕ್ಕುಗಳ ರಕ್ಷಣೆಗೆ ಭಾರತ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಎಸ್‌.ಜೈಶಂಕರ್‌ ತಿಳಿಸಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next