Advertisement

ಶಾಸಕರ ರಾಜೀನಾಮೆ ಪ್ರಕರಣ: ನಾಲ್ಕು ದಿನ ಯಥಾಸ್ಥಿತಿ

11:42 PM Jul 12, 2019 | Lakshmi GovindaRaj |

ನವದೆಹಲಿ: ಕರ್ನಾಟಕದ 10 ಶಾಸಕರ ರಾಜೀನಾಮೆ ಪ್ರಕರಣ ಸಂಬಂಧ ಮುಂದಿನ ಮಂಗಳವಾರದ (ಜುಲೈ 16) ತನಕ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ವಿಧಾನಸಭಾಧ್ಯಕ್ಷರಿಗೆ ಸುಪ್ರೀಂಕೋರ್ಟ್‌ ಆದೇಶಿಸಿದೆ.

Advertisement

ಸ್ಪೀಕರ್‌ ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಅವರನ್ನೊಳಗೊಂಡ ಪೀಠ, ಜು.16ಕ್ಕೆ ವಿಚಾರಣೆ ಮುಂದೂಡಿದೆ. ಇದರೊಂದಿಗೆ, ಶಾಸಕರ ಅನರ್ಹತೆ ಅಥವಾ ರಾಜೀನಾಮೆ ಅಂಗೀಕಾರದ ನಿರ್ಧಾರವನ್ನು ಮಂಗಳವಾರದವರೆಗೆ ಸ್ಪೀಕರ್‌ ರಮೇಶ್‌ ಕುಮಾರ್‌ ಕೈಗೊಳ್ಳುವಂತಿಲ್ಲ. ಹೀಗಾಗಿ, ಕರ್ನಾಟಕದಲ್ಲಿನ ರಾಜಕೀಯ ಸ್ಥಿತಿಗೆ ಸಂಬಂಧಿಸಿದ ಕಾನೂನು ಹೋರಾಟಕ್ಕೆ ಮಂಗಳವಾರ ತನಕ “ರಜೆ’.

ರಾಜೀನಾಮೆ ಅಂಗೀಕಾರದ ಮೊದಲು ಅನರ್ಹತೆಯ ವಿಷಯವನ್ನು ನಿರ್ಧರಿಸಬೇಕು ಎಂಬ ಸ್ಪೀಕರ್‌ ಪರ ವಕೀಲರ ವಾದವನ್ನು ವಿರೋಧಿಸಿದ, ಅತೃಪ್ತ ಶಾಸಕರ ಪರ ವಕೀಲ ಮುಕುಲ್‌ ರೋಹಟಗಿ, ಶಾಸಕರ ರಾಜೀನಾಮೆ ಕುರಿತು ಯಾವುದೇ ನಿರ್ಧಾರವನ್ನು ಸ್ಪೀಕರ್‌ ಕೈಗೊಂಡಿಲ್ಲ. ಪಕ್ಷದ ವಿಪ್‌ ಮೂಲಕ ಇವರನ್ನು ಸಿಲುಕಿ ಹಾಕಿಸುವ ಉದ್ದೇಶಕ್ಕೆ ಈ ವಿಚಾರವನ್ನು ವಿಳಂಬ ಮಾಡುತ್ತಿದ್ದಾರೆ ಎಂದು ಹೇಳಿದರು.

“ಸುಪ್ರೀಂಕೋರ್ಟ್‌ಗೆ ಶಾಸಕರು ಹೋಗಿದ್ದನ್ನೂ ಪ್ರಶ್ನಿಸಿರುವ ಸ್ಪೀಕರ್‌, ಮಾಧ್ಯಮದ ಎದುರೇ ಶಾಸಕರನ್ನು ನರಕಕ್ಕೆ ಹೋಗಿ ಎಂದು ಜರೆದಿದ್ದಾರೆ. ರಾಜೀನಾಮೆ ವಿಚಾರವನ್ನು ನಿರ್ಧರಿಸಲು ಒಂದು ಅಥವಾ ಎರಡು ದಿನಗಳನ್ನು ಸ್ಪೀಕರ್‌ಗೆ ನೀಡಬಹುದು. ಅವರು ನಿರ್ಧಾರ ಮಾಡದೇ ಇದ್ದುದರಿಂದ, ನ್ಯಾಯಾಂಗ ನಿಂದನೆ ನೋಟಿಸ್‌ ಅನ್ನು ನೀಡಬೇಕು ಎಂದು ಮನವಿ ಮಾಡಿದರು.

ಸ್ಪೀಕರ್‌ ಕೈಗೊಳ್ಳುವ ಶಾಸನಾತ್ಮಕ ಮತ್ತು ಇತರ ಕಲಾಪಗಳು ನ್ಯಾಯಾಂಗದ ಪರಿಶೀಲನೆಗೆ ಒಳಪಡುವುದಿಲ್ಲ. ಆದರೆ ರಾಜೀನಾಮೆ ವಿಚಾರವನ್ನು ನ್ಯಾಯಾಂಗ ಪರಿಶೀಲನೆ ನಡೆಸಬಹುದು ಎಂದು ರೋಹಟಗಿ ಹೇಳಿದ್ದಾರೆ. ಈ ಮಧ್ಯೆ ಸುಪ್ರೀಂಕೋರ್ಟ್‌ ಆದೇಶವನ್ನು ಉಲ್ಲಂ ಸುವ ಅಧಿಕಾರವನ್ನು ಸ್ಪೀಕರ್‌ ಹೊಂದಿದ್ದಾರೆಯೇ ಎಂದೂ ಪೀಠ ಪ್ರಶ್ನಿಸಿದೆ.

Advertisement

ಶಾಸಕರ ಅನರ್ಹತೆಯನ್ನು ಪ್ರಶ್ನಿಸಲು ಸ್ಪೀಕರ್‌ಗೆ ಸಾಂವಿಧಾನಿಕ ಅಧಿಕಾರವಿದೆ. ಅವರು ವಿಧಾನಸಭೆಯ ಹಿರಿಯ ಸದಸ್ಯರು. ಸಂವಿಧಾನದ ಬಗ್ಗೆ ಅವರು ತಿಳಿದುಕೊಂಡಿದ್ದಾರೆಂದು ಸ್ಪೀಕರ್‌ ಪರ ವಾದಿಸಿದ ಕಾಂಗ್ರೆಸ್‌ ಮುಖಂಡ ಹಾಗೂ ವಕೀಲ ಅಭಿಷೇಕ್‌ ಮನು ಸಿಂಘ್ವಿ ಹೇಳಿದರು. ಅಷ್ಟೇ ಅಲ್ಲ, ರಾಜೀನಾಮೆಯನ್ನು ಸ್ವಯಂಪ್ರೇರಿತವಾಗಿ ನೀಡಲಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳುವ ಜವಾಬ್ದಾರಿಯನ್ನು ಸ್ಪೀಕರ್‌ ಹೊಂದಿದ್ದಾರೆ.

ಇನ್ನೊಂದು ಬದಿಯ ವಾದವನ್ನು ಆಲಿಸದೆಯೇ ಗುರುವಾರ ಆದೇಶ ನೀಡಲಾಗಿತ್ತು ಎಂದು ಸ್ಪೀಕರ್‌ ಪರ ಹಾಜರಿದ್ದ ಇನ್ನೊಬ್ಬ ವಕೀಲ ರಾಜೀವ್‌ ಧವನ್‌ ಹೇಳಿದರು. ವಾದವನ್ನು ಆಲಿಸಿದ ನ್ಯಾಯಪೀಠ, ಈ ಪ್ರಕರಣದ ಬಗ್ಗೆ ವಿಸ್ತೃತ ವಿಚಾರಣೆ ನಡೆಯಬೇಕಿರುವುದರಿಂದ ಮುಂದಿನ ಮಂಗಳವಾರದ ತನಕ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿತು.

ಯುವ ಕಾಂಗ್ರೆಸ್‌ನಿಂದ ದೂರು: ಅತೃಪ್ತ ಶಾಸಕರ ರಾಜೀನಾಮೆಯನ್ನು ಪಕ್ಷಾಂತರ ಎಂದು ಪರಿಗಣಿಸಬೇಕು ಮತ್ತು ಈ ಪ್ರಕರಣದಲ್ಲಿ ತಮ್ಮನ್ನು ಪಕ್ಷಗಾರರನ್ನಾಗಿ ಸೇರಿಸಿಕೊಳ್ಳಬೇಕೆಂದು ಯುವ ಕಾಂಗ್ರೆಸ್‌ ಸುಪ್ರೀಂಕೋರ್ಟ್‌ ಮೊರೆ ಹೋಗಿದೆ. ಈ ಸಂಬಂಧ ಯುವ ಕಾಂಗ್ರೆಸ್‌ ಮುಖಂಡ ಅನಿಲ್‌ ಚಾಕೋ ಸಲ್ಲಿಸಿದ ದೂರನ್ನು ಸುಪ್ರೀಂಕೋರ್ಟ್‌ ವಿಚಾರಣೆಗೆ ಪರಿಗಣಿಸಿದೆ. ಶಾಸಕರಿಗೆ ಹಣದ ಆಮಿಷ ತೋರಿಸಿ ಖರೀದಿಸಲಾಗಿದೆ ಎಂದೂ ಅವರು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next