Advertisement
ಕಲಾಪದಲ್ಲಿ ಪ್ರತಿಪಕ್ಷದ ಸದಸ್ಯರು, ಬಾವಿಗಿಳಿದು “ಅಲ್ಪಮತಕ್ಕೆ ಕುಸಿದ ಸರ್ಕಾರ; ಮುಖ್ಯಮಂತ್ರಿಗಳು ರಾಜೀನಾಮೆ ನೀಡಲಿ’ ಎಂದು ಫಲಕಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರೆ, ಪ್ರತಿಯಾಗಿ ಆಡಳಿತ ಪಕ್ಷದ ಸದಸ್ಯರು, “ಶಾಸಕರ ಖರೀದಿ ಮೂಲಕ ಬಿಜೆಪಿ ಅಧಿಕಾರಕ್ಕೆ ಬರಲು ಬಿಡುವುದಿಲ್ಲ’ ಎಂದು ಫಲಕಗಳನ್ನು ಪ್ರದರ್ಶಿಸಿದರು. ಪರಸ್ಪರ ವಾಗ್ವಾದಗಳಿಂದ ಗೊಂದಲದ ವಾತಾವರಣ ಉಂಟಾಯಿತು. ಪರಿಣಾಮ ಸಭಾಪತಿ ಸ್ಥಾನದಲ್ಲಿದ್ದ ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ ಕಲಾಪವನ್ನು ಮುಂದೂಡಿದರು.
Related Articles
Advertisement
ತೀವ್ರ ವಿರೋಧ ವ್ಯಕ್ತಪಡಿಸಿದ ಸಚಿವರು, “ನಾವ್ಯಾರಾದರೂ ರಾಜೀನಾಮೆ ಕೊಟ್ಟಿದ್ದೇವೆ ಎಂದು ಹೇಳಿಲ್ಲ. ನಿಮಗೆ ಯಾರಾದರೂ ರಾಜೀನಾಮೆ ಕೊಟ್ಟಿದ್ದೇವಾ? ಅಷ್ಟಕ್ಕೂ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟವರು ಯಾರು? ಆ ಶಾಸಕರನ್ನು ರೆಸಾರ್ಟ್‌ಗಳಿಗೆ ಕರೆದೊಯ್ದವರು ತಾವೇ’ ಎಂದು ತಿರುಗೇಟು ನೀಡಿದರು. ಮಧ್ಯಪ್ರವೇಶಿಸಿದ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ, “ಒಬ್ಬೊಬ್ಬರೇ ಮಾತನಾಡಲಿ. ನಂತರ ಆಡಳಿತ ಪಕ್ಷದಿಂದ ಉತ್ತರ ಕೊಡಲು ಅವಕಾಶ ನೀಡಲಿ’ ಎಂದರು. ಇದೆಲ್ಲದರಿಂದ ಗೊಂದಲದ ವಾತಾವರಣ ಉಂಟಾಗಿ, ಸಭೆಯನ್ನು ಅರ್ಧಗಂಟೆ ಮುಂದೂಡಲಾಯಿತು.
ಸಭೆ ಪುನರಾರಂಭವಾಗುತ್ತಿದ್ದಂತೆ ಐವಾನ್ ಡಿಸೋಜ, ಪ್ರಶ್ನೋತ್ತರಕ್ಕೆ ಅವಕಾಶ ನೀಡಬೇಕು ಎಂದು ಉಪ ಸಭಾಪತಿಗಳಿಗೆ ಮನವಿ ಮಾಡಿದರು. ಆಗ, “ಪ್ರತಿಪಕ್ಷ ನಾಯಕರು ಅಲ್ಪಮತಕ್ಕೆ ಕುಸಿದ ಸರ್ಕಾರ; ಮುಖ್ಯಮಂತ್ರಿ ರಾಜೀನಾಮೆ ನೀಡಲಿ’, “ಜಿಂದಾಲ್‌ಗೆ ಉಚಿತ ಭೂಮಿ ನೀಡಿದ ಮುಖ್ಯಮಂತ್ರಿಗೆ ಧಿಕ್ಕಾರ’ ಎಂಬ ಫಲಕಗಳನ್ನು ಪ್ರದರ್ಶಿಸುವ ಮೂಲಕ ಬಾವಿಗಿಳಿದು ಧರಣಿಗೆ ಮುಂದಾದರು. ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಸದಸ್ಯರು, “ಮೋದಿ, ಷಾ ಶಾಸಕರ ಖರೀದಿಗೆ ಕಾರಣ’, “ಸರ್ಕಾರ ಅಸ್ಥಿರಗೊಳ್ಳಲು ಕಾರಣವಾದ ಬಿಜೆಪಿಗೆ ಧಿಕ್ಕಾರ’ ಎಂದು ಫಲಕಗಳನ್ನು ಹಿಡಿದು ಘೋಷಣೆ ಕೂಗಿದರು. ಅಂತಿಮವಾಗಿ ಉಪ ಸಭಾಪತಿಗಳು ಕಲಾಪವನ್ನು ಮುಂದೂಡಿದರು.
ಮುಖ್ಯ ಸಚೇತಕರಾಗಿ ಚೌಡರೆಡ್ಡಿ ತೂಪಲ್ಲಿ, ನಾಮನಿರ್ದೇಶಿತ ಸದಸ್ಯರಾಗಿ ತಿಪ್ಪಣ್ಣ ಕಮಕನೂರು ಆಯ್ಕೆಯಾಗಿದ್ದಾರೆ ಎಂದು ಕಲಾಪದಲ್ಲಿ ಉಪ ಸಭಾಪತಿ ಧರ್ಮೇಗೌಡ ಪ್ರಕಟಿಸಿದರು. ಅಲ್ಲದೆ, ಕಲಾಪದ ಸಲಹಾ ಸಮಿತಿಗೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ, ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ, ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸದಸ್ಯರಾದ ಚೌಡರೆಡ್ಡಿ ತೂಪಲ್ಲಿ, ಮಹಾಂತೇಶ ಕವಟಗಿಮಠ, ವೈ.ಎ. ನಾರಾಯಣಸ್ವಾಮಿ, ಬಸವರಾಜ ಹೊರಟ್ಟಿ, ಎಸ್.ಆರ್. ಪಾಟೀಲ, ಆಯನೂರು ಮಂಜುನಾಥ್ ನೇಮಕಗೊಂಡಿದ್ದಾರೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ವಿಶೇಷ ಆಹ್ವಾನಿತರಾಗಿರುತ್ತಾರೆ.
ಅದೇ ರೀತಿ, ಸಭಾಪತಿ ಸ್ಥಾನದಲ್ಲಿ ಕಾರ್ಯನಿರ್ವಹಿಸಲು ಸದಸ್ಯರಾದ ಬಸವರಾಜ ಹೊರಟ್ಟಿ, ಎಸ್.ಆರ್. ಪಾಟೀಲ, ಕೆ.ಸಿ. ಕೊಂಡಯ್ಯ, ತೇಜಸ್ವಿನಿಗೌಡ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಿಸಿದರು.