Advertisement

ಗುಲಾಂ ನಬಿ ಆಜಾದ್‌ ರಾಜೀನಾಮೆ ನಡೆಗೆ ಡಿಕೆಶಿ ಗರಂ

09:03 PM Aug 26, 2022 | Team Udayavani |

ಬೆಂಗಳೂರು: ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಎಲ್ಲ ಅಧಿಕಾರ ಅನುಭವಿಸಿ ಇದೀಗ ರಾಜೀನಾಮೆ ನೀಡಿರುವುದು ಹೆತ್ತ ತಾಯಿಗೆ ದ್ರೋಹ ಬಗೆದಂತೆ ಎಂದು ಹೇಳಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಲಾಂ ನಬಿ ಆಜಾದ್‌ ಎಂಬ ಹೆಸರು ರಾಷ್ಟ್ರ ರಾಜಕಾರಣದಲ್ಲಿ ಪ್ರವರ್ಧಮಾನಕ್ಕೆ ಬರಲು ನೆಹರೂ, ಇಂದಿರಾಗಾಂಧಿ, ಸೋನಿಯಾಗಾಂಧಿ ಕಾರಣ. ಅವರೇ ಹೇಳಿರುವಂತೆ 50  ವರ್ಷಗಳ ಕಾಲ ಪಕ್ಷದಿಂದ ಅಧಿಕಾರ ಪಡೆದಿದ್ದಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿ, ಕೇಂದ್ರದ ಸಚಿವ, ರಾಜ್ಯಸಭೆ ಪ್ರತಿಪಕ್ಷ ನಾಯಕ, ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ದೇಶದ ಎಲ್ಲ ರಾಜ್ಯಗಳ ಉಸ್ತುವಾರಿ ವಹಿಸಿದ್ದವರು ಗುಲಾಂ ನಬಿ ಆಜಾದ್‌. ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಅನುಭವದ ಕೊರತೆ ಬಗ್ಗೆ ಹೇಳಿದ್ದಾರೆ, ಇಂದಿರಾಗಾಂಧಿ ಕಾಲದಲ್ಲಿ ಪಕ್ಷ ಸೇರಿದಾಗ ಇವರಿಗೆ ಅನುಭವ ಇತ್ತೇ ಎಂದು ಪ್ರಶ್ನಿಸಿದರು.

ರಾಹುಲ್‌ಗಾಂಧಿ 2019ರಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಆಗಲೇ ಅದನ್ನು ಅವರು ಯಾಕೆ ಹೇಳಲಿಲ್ಲ? 50 ವರ್ಷಗಳ ಕಾಲ ಅತ್ಯುನ್ನತ ಸ್ಥಾನದಲ್ಲಿದ್ದು ನಿರ್ಣಾಯಕ ಅಧಿಕಾರದಲ್ಲಿದ್ದೂ ಏನೂ ಪ್ರಶ್ನಿಸದೇ ಇದೀಗ ಮಾತನಾಡುತ್ತಿರುವುದು ಶೋಭೆ ತರುವ ವಿಚಾರವಲ್ಲ. ದೇಶದ ಜನತೆ ಗಮನಿಸಲಿದ್ದಾರೆ ಎಂದು ಹೇಳಿದರು.

ರಾಜ್ಯಸಭೆ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಇದೀಗ ಅವರಿಗೆ ಏನೋ ವ್ಯತ್ಯಾಸ ಇದೆ ಎಂದು ಅನಿಸುತ್ತಿದೆ. ಎಲ್ಲವನ್ನೂ ಕೊಟ್ಟ ಪಕ್ಷದ ಬಗ್ಗೆ ಅವರ ಅಭಿಪ್ರಾಯ ಕೇಳಿ ನನಗೆ ಆಘಾತವಾಗಿದೆ. ಕಾಂಗ್ರೆಸ್‌ ಎಂಬುದು ಆಂದೋಲನ ಇದ್ದಂತೆ, ಇಲ್ಲಿ ಬರುವವರು, ಹೋಗುವವರು ಇರುತ್ತಾರೆ. ಆದರೆ, ಪಕ್ಷಕ್ಕೆ ಯಾವುದೇ ಬಾಧಕವಾಗುವುದಿಲ್ಲ. ಇಲ್ಲಿ ವ್ಯಕ್ತಿಗಳು ನಗಣ್ಯ, ಪಕ್ಷವೇ ಸರ್ವಸ್ವ ಎಂದು ತಿಳಿಸಿದರು.

Advertisement

ಆಜಾದ್‌ ರಾಜೀನಾಮೆಗೆ  ಖರ್ಗೆ ಬೇಸರ

ಬೆಂಗಳೂರು: ಕಾಂಗ್ರೆಸ್‌ ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ಅವರು ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಪತ್ರ ನೋಡಿ ಬೇಸರವಾಗಿದೆ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಐದು ದಶಕಗಳ ಕಾಲ ಕಾಂಗ್ರೆಸ್‌ನಲ್ಲಿ ಕೆಲಸ ಮಾಡಿರುವ ಅವರಿಗೆ ನಿರೀಕ್ಷೆಗೂ ಮೀರಿ ಅವಕಾಶ ಒದಗಿಸಿದೆ. ಇಂತಹ ಪರಿಸ್ಥಿತಿನಲ್ಲಿ ಪಕ್ಷ ತೊರೆಯುವ ಅವರ ನಿರ್ಧಾರ ವಿಷಾದನೀಯ. ದೇಶದಲ್ಲಿ ಅಧಿಕಾರದಲ್ಲಿರುವ ಕೋಮುವಾದಿ ಆಡಳಿತವು ಸತತವಾಗಿ ಸಂವಿಧಾನದ ಆಶಯ, ಅಲ್ಪಸಂಖ್ಯಾತರು, ದೀನ ದಲಿತರ ಮೇಲೆ ದೌರ್ಜನ್ಯ ನಡೆಸುತ್ತಿರುವ ಸಂದರ್ಭದಲ್ಲಿ ಇಡೀ ದೇಶ ಒಗ್ಗೂಡಿಸುವ ಕೆಲಸ ಕಾಂಗ್ರೆಸ್‌ ಮಾಡುತ್ತಿದೆ.

ಈ ನಿಟ್ಟಿನಲ್ಲಿ ರಾಹುಲ್‌ಗಾಂಧಿ ನೇತೃತ್ವದಲ್ಲಿ ಭಾರತ್‌ ಜೋಡೋ 3500 ಕಿ.ಮೀ.ಪಾದಯಾತ್ರೆ ಆಯೋಜಿಸಲಾಗಿದೆ. ಇಂತಹ ಸಂದರ್ಭದಲ್ಲಿ ಪಕ್ಷ ತೊರೆದು ಹೋಗುವುದು ಕೋಮುವಾದಿ ವಿರುದ್ಧದ ಹೋರಾಟ ದುರ್ಬಲಗೊಳಿಸಿದಂತೆ. ಅವರ ಬದ್ಧತೆಯ ಮೇಲೆ ಪ್ರಶ್ನೆ ಮೂಡುತ್ತದೆ, ಪರೋಕ್ಷವಾಗಿ ಕೋಮುವಾದಿ ಪಕ್ಷಗಳಿಗೆ ಸಹಕರಿಸದಂತಾಗುತ್ತದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next