ಕಮತಗಿ: ವಾರ್ಡ್‌ನ ಸ್ವತ್ಛತೆ ಹಾಗೂ ಚರಂಡಿ ಕಾಮಗಾರಿ ಪೂರ್ಣಗೊಳಿಸಿ ಮಲಿನ ನೀರು ಬೇರೆಡೆ ಸಾಗಿಸುವಂತೆ ಆಗ್ರಹಿಸಿ 10ನೇ ವಾರ್ಡ್ ನಿವಾಸಿಗಳು ಪಪಂ ಕಾರ್ಯಾಲಯ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ವಾರ್ಡ್ ನಂ.10ರಲ್ಲಿ ಬರುವ ಕಟಗಿನ ತಗ್ಗಿನಲ್ಲಿ ಚರಂಡಿ ಹಾಗೂ ಮಳೆ ನೀರು ನಿಂತು ಸಂಪೂರ್ಣ ತುಂಬಿ ದುರ್ವಾಸನೆ ಬರುತ್ತಿದೆ. ಇದರಿಂದ ಕ್ರಿಮಿ ಕೀಟಗಳು, ಸೊಳ್ಳೆಗಳು, ವಿಷಜಂತುಗಳ ಹಾವಳಿ ಸೇರಿದಂತೆ ಸಾಂಕ್ರಾಮಿಕ ರೋಗ ಹರಡುತ್ತಿದ್ದು, ಅನೇಕರು ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಈ ಕುರಿತು ಸಾಕಷ್ಟು ಬಾರಿ ಪಪಂ ಮುಖ್ಯಾಧಿಕಾರಿಗಳಿಗೆ ಮನವಿ ಮಾಡಿದರೂ ಸರಿಯಾಗಿ ಸ್ಪಂದಿಸದಿರುವುದರಿಂದ ಧರಣಿ ನಡೆಸಿರುವುದಾಗಿ ನಿವಾಸಿಗಳು ತಿಳಿಸಿದ್ದಾರೆ. ಪಪಂ ಮುಖ್ಯಾಧಿಕಾರಿ ಬಿ.ಟಿ. ಬಂಡಿವಡ್ಡರ ಧರಣಿ ನಿರತರನ್ನುದ್ದೇಶಿಸಿ ಮಾತನಾಡಿ, ಕಟಗಿನ ತಗ್ಗಿನಲ್ಲಿ ಸಂಗ್ರಹವಾಗಿರುವ ಮಲಿನ ನೀರು ಬೇರೆಡೆ ಸಾಗಿಸಲು ಈಗಾಗಲೇ ಪರ್ಯಾಯ ವ್ಯವಸ್ಥೆ ಮಾಡಲಾಗಿದ್ದು, ಶಾಖಾಂಬರಿ ಕಾಲೇಜಿನಿಂದ ಶಿರೂರ ಹೋಗುವ ರಸ್ತೆವರೆಗೆ ಮಾತ್ರ ಚರಂಡಿ ಮಾಡಿದ್ದರಿಂದ ಚರಂಡಿ ನೀರು ಕಟಗಿನ ತಗ್ಗಿಗೆ ಹೋಗಿ ಸಂಗ್ರಹವಾಗುತ್ತಿತ್ತು. ಶಿರೂರಗೆ ಹೋಗುವ ರಸ್ತೆಯಿಂದ ಮ್ಯಾಗೇರಿ ಅವರ ಮನೆಯವರೆಗೆ ಅಪೂರ್ಣವಾಗಿದ್ದ ಚರಂಡಿ ಕಾಮಗಾರಿ ಪೂರ್ಣಗೊಳಿಸಲು ಮೂರು ತಿಂಗಳ ಕಾಲಾವಕಾಶ ನೀಡಿ ಎಂದು ವಿನಂತಿಸಿದರು.
ಪಪಂ ಮಾಜಿ ಸದಸ್ಯ ರಾಜೇಸಾಬ ಕೋಲಾರ ಪ್ರತಿಭಟನೆ ನೇತೃತ್ವವಹಿಸಿ ಮಾತನಾಡಿ, ಮೂರು ತಿಂಗಳ ಕಾಲ ಅವಕಾಶ ತೆಗೆದುಕೊಳ್ಳದೇ ತುರ್ತಾಗಿ ಕಾಮಗಾರಿ ಮಾಡುವ ಭರವಸೆ ನೀಡಿದರೆ ಮಾತ್ರ ಧರಣಿ ಹಿಂಪಡೆಯುತ್ತೇವೆ. ಇಲ್ಲವಾದರೆ ಕಾಮಗಾರಿ ಪ್ರಾರಂಭಿಸುವವರೆಗೂ ಇಲ್ಲಿಯೇ ಕುಳಿತುಕೊಳ್ಳುತ್ತೇವೆ ಎಂದು ಪಟ್ಟು ಹಿಡಿದರು.
ನಂತರ ಪಪಂ ಸದಸ್ಯರಾದ ಸಂಗಣ್ಣ ಗಾಣಗೇರ, ಗಂಗಾಧರ ಕ್ಯಾದಿಗ್ಗೇರಿ, ರಮೇಶ ಲಮಾಣಿ ಮಹಿಬೂಬ ಡಾಲಾಯತ ಹಾಗೂ ಪಪಂ ಮುಖ್ಯಾ ಧಿಕಾರಿಗಳು ಧರಣಿ ನಿರತರ ಮನವೊಲಿಸಿ ವಾರ್ಡಿಗೆ ತೆರಳಿ ಚರಂಡಿ ನೀರು ಕಟಗಿನ ತಗ್ಗಿಗೆ ಹೋಗದಂತೆ ತಾತ್ಕಾಲಿಕವಾಗಿ ಶಿರೂರ ರಸ್ತೆಯಿಂದ ಮ್ಯಾಗೇರಿ ಅವರ ಮನೆಯವರೆಗೆ ಚರಂಡಿ ನೀರು ಹೋಗಲು ನೀರಿನ ಹರಿವು ಮಾಡಿದರು. ಜತೆಗೆ ಕಟಗಿನ ತಗ್ಗಿನ ಸುತ್ತಲಿನ ತ್ಯಾಜ್ಯ ಹಾಗೂ ಜಾಲಿ ಗಿಡಗಳನ್ನು ಸ್ವತ್ಛಗೊಳಿಸಿದ ನಂತರ ಧರಣಿ ಹಿಂಪಡೆಯಲಾಯಿತು.
ಮಂಜು ಭಜಂತ್ರಿ, ರಸುಲಸಾಬ ತಹಶೀಲ್ದಾರ್, ಸುಧಾಕರ ಹಡಪದ, ತಿಮ್ಮಣ್ಣ ಹಗೇದಾಳ, ಬಾಷೇಸಾಬ ಮುಲ್ಲಾ, ಪ್ರಕಾಶ ಸರೂರ, ಸೀತಾಬಾಯಿ ಲಮಾಣಿ, ಶಿವಕ್ಕ ಜೋಶಿ, ಶಂಕ್ರವ್ವ ಸೊಲ್ಲಾಪುರ, ಹನಮವ್ವ ಕಡ್ಲಿಮಟ್ಟಿ ಇದ್ದರು.