ಲಿಂಗಸುಗೂರು: ಮಕ್ಕಳ ಶೈಕ್ಷಣಿಕ ಶ್ರೇಯೋಭಿವೃದ್ಧಿಗೆ ಸರ್ಕಾರ ಕೋಟ್ಯಂತರ ರೂ. ಅನುದಾನ ಖರ್ಚು ಮಾಡುತ್ತಿದೆ. ಆದರೆ ಕಾಮಗಾರಿಗಳು ಮಾತ್ರ ನಿಧಾನಗತಿಯಲ್ಲಿ ಸಾಗಿ ಶೈಕ್ಷಣಿಕ ಬೆಳವಣಿಗೆ ಕುಂಠಿತವಾಗುತ್ತಿದೆ ಎಂಬುದಕ್ಕೆ ಕರಡಕಲ್ ಹೊರಭಾಗದಲ್ಲಿ ನಡೆಯುತ್ತಿರುವ ವಸತಿ ನಿಲಯಗಳ ಕಾಮಗಾರಿಗಳೇ ತಾಜಾ ಉದಾಹರಣೆಯಾಗಿದೆ.
ಸಮಾಜ ಕಲ್ಯಾಣ, ಬಿಸಿಎಂ, ಅಲ್ಪಸಂಖ್ಯಾತರ ಹಾಗೂ ಪರಿಶಿಷ್ಟ ಪಂಗಡ ಇಲಾಖೆಗಳಿಗೆ ಸೇರಿದ ವಸತಿ ನಿಲಯಗಳಲ್ಲಿ ಕೆಲವು ಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಾಡಿಗೆ ಕಟ್ಟಡಗಳಲ್ಲಿ ನಡೆಸಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆಯಾಗುತ್ತಿದೆ. ಆರ್ಥಿಕ ಹೊರೆ ತಗ್ಗಿಸಲು ಸರ್ಕಾರ ಅನುದಾನ ನೀಡಿ ನಿಲಯದ ಕಾಮಗಾರಿ ಆರಂಭಿಸಿದೆ. ಆದರೆ ಗುತ್ತಿಗೆ ಪಡೆದ ಏಜನ್ಸಿಗಳು ಮಂದಗತಿಯಲ್ಲಿ ಕೆಲಸ ಮಾಡುತ್ತಿವೆ. ಇದರಿಂದ ವಸತಿ ನಿಲಯಗಳ ನಿರ್ಮಾಣ ಕಾರ್ಯ ವಿಳಂಬವಾಗುತ್ತಿದೆ.
ಇಲ್ಲಿಯ ಪುರಸಭೆ ವ್ಯಾಪ್ತಿಯ ಕರಡಕಲ್ ಗ್ರಾಮದ ಹೊರಭಾಗದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ 4.85 ಕೋಟಿ ರೂ. ಅನುದಾನದಲ್ಲಿ ಪರಿಶಿಷ್ಟ ಜಾತಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ನಿರ್ಮಾಣಕ್ಕೆ ಕಳೆದ ಮಾರ್ಚ್‌ನಲ್ಲಿ ಕಾಮಗಾರಿ ಆರಂಭಿಸಲಾಗಿದೆ. ತಾಲೂಕಿನ ಈಚನಾಳ ಗ್ರಾಮದಲ್ಲಿ 3.37 ಕೋಟಿ ರೂ. ಅನುದಾನದಲ್ಲಿ ಎಸ್‌ಸಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ನಿರ್ಮಾಣಕ್ಕೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕಾಮಗಾರಿ ಆರಂಭವಾಗಿದೆ.
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಸೇರಿದ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ಕಾಮಗಾರಿ ಎರಡು ವರ್ಷದಿಂದ ಸಾಗುತ್ತಲೇ ಇದೆ. ಈಗ ಪ್ಲಾಸ್ಟರ್ ಹಂತಕ್ಕೆ ತಲುಪಿದೆ. ಈಚನಾಳ ಗ್ರಾಮದಲ್ಲಿ ವಸತಿ ನಿಲಯದ ಕಾಮಗಾರಿ ಆಮೆವೇಗದಲ್ಲಿ ಸಾಗುತ್ತಿದೆ. ಗ್ರಾಮದಲ್ಲಿ ಬಾಡಿಗೆ ಕಟ್ಟಡದಲ್ಲಿ ಹಾಸ್ಟೆಲ್ ನಡೆಸುತ್ತಿದ್ದರಿಂದ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.
ಇದಲ್ಲದೆ ಪಟ್ಟಣದಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿರುವ ಎಸ್‌ಸಿ ಮೆಟ್ರಿಕ್ ನಂತರದ ಬಾಲಕಿಯರ ಹಾಗೂ ಅಲ್ಪಸಂಖ್ಯಾತರ ವಸತಿ ನಿಲಯಗಳಲ್ಲಿ ಅಗತ್ಯ ಸೌಲಭ್ಯಗಳು ಇಲ್ಲದಾಗಿದೆ. ಇದರಿಂದ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಸ್ವಂತ ಕಟ್ಟಡಗಳ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದರಿಂದ ಬಾಡಿಗೆ ಕಟ್ಟಡದಲ್ಲಿ ವಿದ್ಯಾರ್ಥಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಇಲಾಖಾಧಿಕಾರಿಗಳು ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆ ಏಜನ್ಸಿಗೆ ತಾಕೀತು ಮಾಡಬೇಕಾಗಿದೆ.
ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯಗಳ ಕಾಮಗಾರಿ ನಿಧಾನದಿಂದ ಸಾಗಿರುವ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ.
ರವಿ, ಸಹಾಯಕ ನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ