ಮಂಗಳೂರು: ಐಸಿಸ್ ಉಗ್ರ ಸಂಚು ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಗುರುವಾರ ರಾಜ್ಯದ 6 ಕಡೆ ದಾಳಿ ನಡೆಸಿ, ಇಬ್ಬರನ್ನು ಬಂಧಿಸಲಾಗಿತ್ತು. ಈ ಬಗ್ಗೆ ಎನ್ಐಎ ಅಧಿಕೃತ ಪತ್ರಿಕಾ ಹೇಳಿಕೆ ನೀಡಿದ್ದು, ಕ್ರಿಪ್ಟೋ ವಾಲೆಟ್ ಮೂಲಕ ಐಸಿಎಸ್ ನಿಂದ ಹಣ ಪಡೆಯುತ್ತಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.
ಗುರುವಾರ ಮಂಗಳೂರಿನ ಕಾಲೇಜೊಂದಕ್ಕೆ ದಾಳಿ ಮಾಡಿದ್ದ ಅಧಿಕಾರಿಗಳು ಉಡುಪಿ ಬ್ರಹ್ಮಾವರ ನಿವಾಸಿ ರೇಶಾನ್ ಶೇಖ್ ನನ್ನು ಬಂಧಿಸಿದ್ದರು. ಅಲ್ಲದೆ ಶಿವಮೊಗ್ಗದ ಟಿಪ್ಪು ಸುಲ್ತಾನ್ ನಗರದಲ್ಲಿ ಹುಜೈರ್ ಫರ್ಹಾನ್ ಎಂಬಾತನನ್ನು ಬಂಧಿಸಿದ್ದರು.
ತುಂಗಾ ತೀರದ ಬ್ಲಾಸ್ಟ್ ಸೇರಿದಂತೆ ಕೆಲವು ಪ್ರಕರಣಗಳ ಆರೋಪಿಯಾಗಿರುವ ಮಾಜ್ ಮುನೀರನು ತನ್ನ ಸಹವರ್ತಿ ಮತ್ತು ಸಹಪಾಠಿ ರೇಶನ್ ತಾಜುದ್ದಿನ್ ಶೇಖ್ ನನ್ನು ಪ್ರೇರೇಪಿಸಿದ್ದ. ಅಲ್ಲದೆ ಇಸ್ಲಾಮಿಕ್ ಸ್ಟೇಟ್ಸ್ ನ ಕೆಲಸಗಳಿಗಾಗಿ ಐಸಿಸ್ ನಿಂದ ರೇಶನ್ ಮತ್ತು ಹುಜೈರ್ ಕ್ರಿಪ್ಟೋ ವ್ಯಾಲೆಟ್ ಮೂಲಕ ದೇಣಿಗೆ ಪಡೆದಿದ್ದರು.
ಅಲ್ಲದೆ ದೊಡ್ಡ ಹಿಂಸಾತ್ಮಕ ಚಟುವಟಿಕೆಯ ಭಾಗವಾಗಿ ಬೆಂಕಿ ಹಚ್ಚುವುದು, ವಾಹನಗಳು ಗುರಿಯಾಗಿಸಿ ದಾಳಿ ಮಾಡುವುದು, ಮದ್ಯದ ಅಂಗಡಿಗಳು, ಗೋಡೌನ್‌ಗಳು ಸಂಸ್ಥೆಗಳನ್ನು ಗುರಿಯಾಗಿಸಿ ಹಿಂಸಾತ್ಮಕ ಕೃತ್ಯ ನಡೆಸುವವರಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
Related Articles
ಇದನ್ನೂ ಓದಿ:Rare Video: ಸಮುದ್ರದ ಮಧ್ಯೆ ಪ್ರವಾಸಿಗರ ಕಣ್ಣೆದುರಲ್ಲೇ ಪುಟ್ಟ ಮರಿಗೆ ಜನ್ಮ ನೀಡಿದ ತಿಮಿಂಗಿಲ…
ಗುರುವಾರ ಬೆಳಗ್ಗೆ ಎನ್‌ಐಎ ತಂಡ ಕಾಲೇಜಿಗೆ ತೆರಳಿ ರೇಶಾನ್ ಶೇಖ್ ನನ್ನು ವಶಕ್ಕೆ ತೆಗೆದುಕೊಳ್ಳುವುದರ ಜತೆಗೆ ಆತನ ಲ್ಯಾಪ್‌ಟಾಪ್, ಪೆನ್ ಡ್ರೈವ್, ದ್ವಿಚಕ್ರವಾಹನ ಇತ್ಯಾದಿಗಳನ್ನೂ ಸ್ವಾಧೀನಪಡಿಸಿ ಕೊಂಡಿದೆ. ಆತನ ಸಹಪಾಠಿಗಳು, ಉಪನ್ಯಾಸಕರಿಂದ ಮಾಹಿತಿ ಪಡೆದುಕೊಂಡಿದ್ದು, ಆತನ ಚಟುವಟಿಕೆಗಳ ಬಗ್ಗೆ ವಿಚಾರಣೆ ನಡೆಸಿದೆ. ಅಲ್ಲದೆ ಬ್ರಹ್ಮಾವರ ವಾರಂಬಳ್ಳಿಯ ಆತನ ಮನೆಯಲ್ಲಿ ಶೋಧ ಕಾರ್ಯ ನಡೆಸಿದೆ.
ಏಳು ಮಂದಿ ಎನ್‌ಐಎ ಅಧಿಕಾರಿಗಳ ತಂಡ ಬ್ರಹ್ಮಾವರದ ವಾರಂಬಳ್ಳಿಯಲ್ಲಿ ಶಂಕಿತ ವಿದ್ಯಾರ್ಥಿಯ ಪೋಷಕರು ವಾಸವಿರುವ ಫ್ಲ್ಯಾಟ್‌ಗೆ ಭೇಟಿ ನೀಡಿ ಶೋಧಕಾರ್ಯ ನಡೆಸಿ, ಮಹಜರು ಮಾಡಿತು. ಪರಿಶೀಲನೆ ವೇಳೆ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಿ, ಕೆಲವು ದಾಖಲೆಗಳನ್ನು ವಶಕ್ಕೆ ಪಡೆದು, ಕುಟುಂಬಸ್ಥರನ್ನು ವಿಚಾರಣೆ ನಡೆಸಿತು ಎಂದು ಮೂಲಗಳು ತಿಳಿಸಿವೆ.