ಹಾವೇರಿ: ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಬರೋಬರಿ ಒಂದೂವರೆ ವರ್ಷದ ಬಳಿಕ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟವಾಗಿದ್ದು, ಆಯ್ಕೆಯಾದ ಸದಸ್ಯರಲ್ಲಿ ಅಧಿಕಾರ ಹಿಡಿಯುವ ಆಸೆ ಚಿಗುರೊಡೆದಿದೆ.
ಹಾವೇರಿ ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎ ಮಹಿಳೆಗೆ ಮೀಸಲಾಗಿದೆ. ರಾಣಿಬೆನ್ನೂರು ನಗರಸಭೆ ಅಧ್ಯಕ್ಷ ಸ್ಥಾನ ಬಿಸಿಎ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. 2018ರಲ್ಲಿ ಕೂಡ ಜಿಲ್ಲೆಯ ಈ ಎರಡು ನಗರಸಭೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇದೇ ಮೀಸಲಾತಿ ನಿಗದಿಯಾಗಿತ್ತು ಎಂಬುದು ಉಲ್ಲೇಖನೀಯ.
ಬಂಕಾಪುರ ಪುರಸಭೆ ಅಧ್ಯಕ್ಷ ಸ್ಥಾನ ಬಿಸಿಎ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ, ಬ್ಯಾಡಗಿ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಬಿಸಿಎ ಮಹಿಳೆ, ಹಾನಗಲ್ಲ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಬಿಸಿಎ ಹಾಗೂ ಶಿಗ್ಗಾವಿ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಹಿರೇಕೆರೂರು ಪಪಂ ಅಧ್ಯಕ್ಷ ಸ್ಥಾನ ಬಿಸಿಬಿ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮೀಸಲಾತಿ ಪ್ರಕಟವಾಗಿದೆ.
ಹಾವೇರಿ ನಗರಸಭೆ: 2018ರ ಆಗಸ್ಟ್ ತಿಂಗಳಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಸೆಪ್ಟೆಂಬರ್ 3ರಂದು ಫಲಿತಾಂಶ ಪ್ರಕಟವಾಗಿತ್ತು. ಹಾವೇರಿ ನಗರಸಭೆಯ 31 ಸ್ಥಾನಗಳಲ್ಲಿ ಬಿಜೆಪಿ 9, ಕಾಂಗ್ರೆಸ್ 15, ಪಕ್ಷೇತರರು 7 ಸ್ಥಾನ ಗೆದ್ದಿದ್ದರು. ಫಲಿತಾಂಶ ಬಂದ ದಿನವೇ ರಾಜ್ಯ ಸರ್ಕಾರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿತ್ತು. ಆದರೆ, ಮೀಸಲಾತಿ ವಿರುದ್ಧ ನ್ಯಾಯಾಲಯ ಮೆಟ್ಟಿಲೇರಿದ್ದರಿಂದ ಒಂದೂವರೆ ವರ್ಷಗಳಿಂದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ, ಸದಸ್ಯರ ಅಧಿಕಾರ ಸ್ವೀಕಾರಕ್ಕೆ ಹಿನ್ನಡೆಯಾಗಿತ್ತು.
ಇಲ್ಲಿ ಕಾಂಗ್ರೆಸ್ ಹೆಚ್ಚಿನ ಸದಸ್ಯ ಬಲ ಹೊಂದಿದ್ದರೂ ಬಿಜೆಪಿ ಕೂಡ ಪೈಪೋಟಿ ನಡೆಸುವುದು ನಿಶ್ಚಿತವಾಗಿದೆ. ಇಲ್ಲಿ 7 ಪಕ್ಷೇತರರೇ ನಿರ್ಣಾಯಕ ರಾಗಲಿದ್ದಾರೆ. ಪಕ್ಷೇತರರು ರಾಜಕೀಯ ಚದುರಂಗದಾಟದಲ್ಲಿ ಎತ್ತ ವಾಲುತ್ತಾರೆ ಎಂಬುದರ ಮೇಲೆ ಆಡಳಿತ ಚುಕ್ಕಾಣಿ ಕೈಹಿಡಿಯುತ್ತದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲು ಇರುವುದರಿಂದ ಪೈಪೋಟಿ ಹೆಚ್ಚಾಗಲಿದೆ.
ರಾಣಿಬೆನ್ನೂರು ನಗರಸಭೆ : ರಾಣಿಬೆನ್ನೂರು ನಗರಸಭೆ ಅಧ್ಯಕ್ಷ ಸ್ಥಾನ ಬಿಸಿಎ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಒಟ್ಟು 35 ಸದಸ್ಯ ಬಲದ ರಾಣಿಬೆನ್ನೂರು ನಗರಸಭೆಗೆ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ 15, ಕಾಂಗ್ರೆಸ್ 9, ಕೆಪಿಜೆಪಿ 10, ಪಕ್ಷೇತರ 1 ಸ್ಥಾನ ಗೆದ್ದಿತ್ತು. ಆಗ ಕೆಪಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಆರ್.ಶಂಕರ್ ಈಗ ಬಿಜೆಪಿ ಸೇರಿದ್ದಾರೆ. ಆದ್ದರಿಂದ ಬಿಜೆಪಿಯ 15 ಹಾಗೂ ಕೆಪಿಜೆಪಿಯಿಂದ ಗೆದ್ದ 10 ಅಭ್ಯರ್ಥಿಗಳು ಸೇರಿದರೆ ಅಧಿಕಾರ ಪಡೆಯಬಹುದು. ಈಗ ಬಿಜೆಪಿಯ ಅರುಣಕುಮಾರ ಪೂಜಾರ ಸ್ಥಳೀಯ ಶಾಸಕರಾಗಿರುವುದರಿಂದ ಬಿಜೆಪಿಗೆ ಇನ್ನಷ್ಟು ಅನುಕೂಲಕರವಾಗಿದೆ.