Advertisement

Reservation ವಂಚನೆ ಮತ್ತೊಮ್ಮೆ ಬಯಲು: ಮಲ್ಲಿಕಾರ್ಜುನ ಖರ್ಗೆ

12:24 AM May 10, 2023 | Team Udayavani |

ಬೆಂಗಳೂರು: ಮೀಸಲಾತಿ ಯಥಾಸ್ಥಿತಿ ಯನ್ನು 2023ರ ಜುಲೈ 25ರವರೆಗೆ ವಿಸ್ತರಿಸುವುದಾಗಿ ಸುಪ್ರೀಂ ಕೋರ್ಟ್‌ಗೆ ಹೇಳುವ ಮೂಲಕ ಸರಕಾರದ ಮೀಸಲಾತಿ ವಂಚನೆ ಮತ್ತೊಮ್ಮೆ ಬಯಲಾಗಿದ್ದು, ಈ ಮಹಾ ಮೋಸಕ್ಕಾಗಿ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕನ್ನಡಿಗರ ಕ್ಷಮೆ ಕೇಳಬೇಕೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

Advertisement

ಸುಪ್ರೀಂ ಕೋರ್ಟ್‌ ಮುಂದೆ ಸರಕಾರ ನೀಡಿರುವ ಹೇಳಿಕೆ ಪರಿಣಾಮ ಎಲ್ಲರೂ ಮೀಸಲಾತಿ ವಂಚನೆಗೆ ಒಳಗಾದಂತಾಗಿದೆ. ಯಾರೂ ಯಾವುದೇ ಮೀಸಲಾತಿ ಪಡೆಯಲು ಸಾಧ್ಯವಾಗುವುದಿಲ್ಲ. ಹಿಂದೆ ಇದ್ದಂತೆ ಲಿಂಗಾಯತರಿಗೆ 3ಬಿ, ಒಕ್ಕಲಿಗರಿಗೆ 3ಎ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಕ್ರಮವಾಗಿ ಶೇ. 15 ಮತ್ತು ಶೇ. 3ಕ್ಕೆ ಸೀಮಿತಗೊಳ್ಳಲಿದೆ. ಇದು ಡಬಲ್‌ ಎಂಜಿನ್‌ ದೋಖಾ ಎಂದು ಟೀಕಿಸಿರುವ ಮಲ್ಲಿಕಾರ್ಜುನ ಖರ್ಗೆ, ಸುಪ್ರೀಂ ಕೋರ್ಟ್‌ನಲ್ಲಿ ಮೀಸಲಾತಿ ಸಮರ್ಥಿಸಿಕೊಳ್ಳುವ ಪ್ರಯತ್ನವನ್ನೂ ಮಾಡದ ಸರಕಾರ ರಾಜ್ಯದ ಜನರೊಂದಿಗೆ ವಂಚನೆ ಆಟವಾಡಿದ್ದು ಯಾಕೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿಟ್ರೇಯಲ್‌ ಜನತಾ ಪಕ್ಷ ಬಿಜೆಪಿಯ ಏಕೈಕ ಉದ್ದೇಶ ಮೀಸಲಾತಿಯ ಲಾಲಿಪಾಪ್‌ ನೀಡುವುದಾಗಿದೆ. ವೋಟ್‌ಬ್ಯಾಂಕ್‌ ರಾಜಕೀಯ ಮಾಡುವುದರಿಂದ ಮತ್ತು ಯಾರಿಗೂ ಮೀಸಲಾತಿ ನೀಡದೆ ನಕಲಿ ಕ್ರೆಡಿಟ್‌ ಕೇಳುವ ಸರಕಾರದ ದುರುದ್ದೇಶವು ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಮೀಸಲಾತಿ ನೀಡಿದ ಸರಕಾರವೇ ಸುಪ್ರೀಂ ಕೋರ್ಟ್‌ನಲ್ಲಿ ತನ್ನ ಆದೇಶಕ್ಕೆ ತಡೆ ನೀಡುವುದಾಗಿ 2023ರ ಮಾರ್ಚ್‌ 27ರಂದು ಹೇಳಿತ್ತು. ಈಗ ಆ ತಡೆಯನ್ನು ಜುಲೈ 25ರವರೆಗೆ ವಿಸ್ತರಿಸುವುದಾಗಿ ಹೇಳಿದೆ. ಇದರ ಪರಿಣಾಮ ಯಥಾಸ್ಥಿತಿ ಮುಂದುವರಿಯಲಿದೆ. ಮೀಸಲಾತಿ ನೀಡುವ ಉದ್ದೇಶ ಇದ್ದರೆ ನ್ಯಾಯಾಲಯದ ಮುಂದೆ ಯಾಕೆ ಸಮರ್ಥಿಸಿಕೊಳ್ಳಲಿಲ್ಲ ಎಂದು ಕೇಳಿದ್ದಾರೆ.
ಕೇಂದ್ರ, ರಾಜ್ಯ ಸರಕಾರಗಳ ಮೀಸಲಾತಿ ವಂಚನೆಯ ಉದ್ಯೋಗ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ, ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

ಶೆಡ್ಯುಲ್‌ನಲ್ಲಿ ಯಾಕೆ ಸೇರಿಸಿಲ್ಲ?
2023ರ ಮಾ. 14ರಂದು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಹೆಚ್ಚುವರಿ ಮೀಸಲಾತಿಯನ್ನು ಕೇಂದ್ರ ಸರಕಾರ ತಿರಸ್ಕರಿಸಿದ್ದು ಯಾಕೆ? ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕಾಗಿ ಹೆಚ್ಚಿದ ಮೀಸಲಾತಿಯ ಕಾನೂನನ್ನು ಕೇಂದ್ರವು ಸಂವಿಧಾನದ 9ನೇ ಶೆಡ್ಯುಲ್‌ನಲ್ಲಿ ಯಾಕೆ ಸೇರಿಸಲಿಲ್ಲ? ಎಂದು ಖರ್ಗೆ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next