Advertisement

ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಹೆಚ್ಚಳಕ್ಕೆ ತೀರ್ಮಾನ: ಸಿಎಂ ಬೊಮ್ಮಾಯಿ

11:03 PM Mar 23, 2022 | Team Udayavani |

ಬೆಂಗಳೂರು: ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಹೆಚ್ಚಿಸುವ ಬಗ್ಗೆಯೂ ಚರ್ಚೆಯಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Advertisement

ಸ್ಥಳಿಯ ಸಂಸ್ಥೆಗಳಲ್ಲಿ ಒಬಿಸಿ ಮೀಸಲಾತಿ ಕುರಿತ ಸಭೆಯ ನಂತರ ಮಾತನಾಡಿದ ಅವರು, 7.5 % ಗೆ ಮೀಸಲಾತಿಯನ್ನು ಹೆಚ್ಚಿಸಬೇಕೆಂದು ಎಸ್ಟಿ ಸಮುದಾಯವರ ಬೇಡಿಕೆಯಿದೆ. ಅವರ ಜನಸಂಖ್ಯೆಯೂ ಹೆಚ್ಚಾಗಿದೆ. ಹಿಂದಿನ ಸರ್ಕಾರ ಈ ಕುರಿತು ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ರಚಿಸಿತ್ತು. ಯಡಿಯೂರಪ್ಪ ಅವರ ಸರ್ಕಾರದಲ್ಲಿ ಸಮಿತಿ ವರದಿ ಸಲ್ಲಿಸಿದೆ. ವರದಿಯಲ್ಲಿ ಎಸ್.ಸಿ ಮತ್ತು ಎಸ್. ಟಿ ಗೆ ಮೀಸಲಾತಿ ಹೆಚ್ಚಿಸಬೇಕೆಂದು ಶಿಫಾರಸ್ಸು ಮಾಡಲಾಗಿದೆ. ಅದರಂತೆ ನಿರ್ಣಯ ತೆಗೆದುಕೊಳ್ಳಬೇಕು ಎಂದರು.

ನ್ಯಾಯಮೂರ್ತಿ ನಾಗಮೋಹನದಾಸ್ ಸಮಿತಿ ವರದಿ, ಮಹಾರಾಷ್ಟ್ರದ ಜಯಶ್ರೀ ಪಾಟೀಲ್ ಪ್ರಕರಣ ಹಾಗೂ ಇಂದಿರಾ ಸಹಾನಿ ಪ್ರಕರಣಗಳ ತೀರ್ಪುಗಳ ಹಿನ್ನೆಲೆಯಲ್ಲಿ ಹಾಗೂ ನ್ಯಾಯಮೂರ್ತಿ ಸುಭಾಷ್ ಅಡಿ ಅವರಿಂದಲೂ ಮಧ್ಯಂತರ ವರದಿ ಪಡೆದು ಈ ಜನಾಂಗಕ್ಕೆ ಮೀಸಲಾತಿ ಹೆಚ್ಚು ಮಾಡುವ ಮೂಲಕ ನ್ಯಾಯವನ್ನು ಕೊಡಬೇಕೆಂಬ ತೀರ್ಮಾನವಾಗಿದೆ ಎಂದರು.

ಮೀಸಲಾತಿ ಕೊಡುವುದಾದರೆ ಸಂವಿಧಾನಾತ್ಮಕವಾಗಿ ಹಾಗೂ ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ ನೀಡಬೇಕು. ಆ ನಿಟ್ಟಿನಲ್ಲಿ ಕೂಡಲೇ ಅಡ್ವೊಕೇಟ್ ಜನರಲ್ ಅವರಿಗೆ ಮೂರೂ ವರದಿಗಳ ಬಗ್ಗೆ ವರದಿ ನೀಡಲು ತಿಳಿಸಲಾಗಿದೆ. ಅದನ್ನು ಸರ್ವ ಪಕ್ಷಗಳ ಸಭೆಯಲ್ಲಿಟ್ಟು, ಒಪ್ಪಿಗೆ ಪಡೆಯಲಾಗುವುದು ಎಂದರು.

2 ಎ ವರ್ಗಕ್ಕೆ ಸೇರಿರುವ ಕುರುಬ ಸಮಾಜದವರು ಪರಿಶಿಷ್ಟ ಪಂಗಡಕ್ಕೆ ಸೇರಬೇಕೆಂಬ ಬೇಡಿಕೆ ಇದೆ. ಕೆಲವರು 3 ಬಿ ನಲ್ಲಿರುವವರು 2 ಎ ವರ್ಗಕ್ಕೆ ಸೇರಬೇಕು, 3 ಬಿ ನಲ್ಲಿ ಇಲ್ಲದವರು, 3 ಬಿ ವರ್ಗಕ್ಕೆ ಸೇರಬೇಕು ಎಂಬ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಹಂತ ಹಂತವಾಗಿ ನಾವು ಮುಂದುವರೆಯಬೇಕು. ಮೂಲಭೂತವಾಗಿ 50% ದಾಟಬೇಕೋ, ದಾಟಿದರೆ ಕಾನೂನಿನ ರೀತಿ ಹೇಗೆ ಮಾಡಬೇಕು ಎನ್ನುವ ವಿಚಾರವಿದೆ. ಮೊದಲು ನಾಗಮೋಹನ್ ದಾಸ ವರದಿ ಆಧಾರದ ಮೇಲೆ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು. ಆದಷ್ಟು ಶೀಘ್ರವಾಗಿ ನ್ಯಾಯಮೂರ್ತಿ ಸುಭಾಷ್ ಅಡಿಯವರ ವರದಿಯನ್ನು ಪಡೆದು, ನಂತರ ಸರ್ವಪಕ್ಷ ಸಭೆಯ ಮುಂದಿಡಲಾಗುವುದು. ನಂತರ ವಿಧಾನಸಭೆಯಲ್ಲಿ ಮಂಡಿಸಿ ನ್ಯಾಯ ಒದಗಿಸುವ ತೀರ್ಮಾನ ಮಾಡಲಾಗುವುದು ಎಂದರು.

Advertisement

ಇಂದಿನ ಸಭೆಯಲ್ಲಿ ಪರಿಶಿಷ್ಟ ಪಂಗಡದವರಿಗೆ ನ್ಯಾಯ ಒದಗಿಸುವ ಬಗ್ಗೆ ಒಮ್ಮತದ ಅಭಿಪ್ರಾಯ ಮೂಡಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next