Advertisement

ಕಾಂಗ್ರೆಸ್‌ನಿಂದ ಮೀಸಲು ರಾಜಕೀಯ ಆರೋಪ

11:13 PM Mar 28, 2023 | Team Udayavani |

ರಾಜ್ಯ ಸರ್ಕಾರ ಘೋಷಿಸಿರುವ ಒಳ ಮೀಸಲು ವಿರುದ್ಧ ಬಂಜಾರ ಮತ್ತು ಇತರ ಸಮುದಾಯದವರು ನಡೆಸುತ್ತಿರುವ ಹೋರಾಟ ರಾಜಕೀಯ ತಿರುವು ಪಡೆದಿದೆ. ಮಾಜಿ ಸಿಎಂ ಯಡಿಯೂರಪ್ಪ ನಿವಾಸದ ಮೇಲಿನ ದಾಳಿಯೂ ತೀವ್ರ ಚರ್ಚೆ ಹುಟ್ಟುಹಾಕಿದೆ. “ಮೀಸಲಾತಿ ವಿಚಾರ ಸಂಬಂಧ ಬಂಜಾರ ಸಮಾಜವನ್ನು ತಪ್ಪು ದಾರಿಗೆ ಎಳೆಯಲು ಕಾಂಗ್ರೆಸ್‌ ಯತ್ನಿಸುತ್ತಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಟೀಕಿಸಿದ್ದಾರೆ. ಯಡಿಯೂರಪ್ಪ ಅವರ ಮನೆ ಮೇಲಿನ ದಾಳಿಯು ಬಿಜೆಪಿಯ ರಾಜಕೀಯ ಕುತಂತ್ರದ ಭಾಗವೇ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿರುಗೇಟು ನೀಡಿದ್ದಾರೆ.

Advertisement

ಬಿಎಸ್‌ವೈ ನಿವಾಸದ ಮೇಲೆ ದಾಳಿ ಬಿಜೆಪಿಯ ಕುತಂತ್ರ-ಡಿಕೆಶಿ
ಬೆಂಗಳೂರು: ಬಿ.ಎಸ್‌.ಯಡಿಯೂರಪ್ಪ ಅವರ ಮನೆ ಮೇಲಿನ ದಾಳಿಯು ಬಿಜೆಪಿಯ ರಾಜಕೀಯ ಕುತಂತ್ರದ ಭಾಗವೇ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆರೋಪಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ಹಲವಾರು ಕುತಂತ್ರಗಳನ್ನು ಮಾಡುತ್ತಿದೆ. ಅದರ ಮುಂದುವರಿದ ಭಾಗವೇ ಈಚೆಗೆ ಯಡಿಯೂರಪ್ಪ ಮನೆ ಮೇಲೆ ನಡೆದ ದಾಳಿ ಆಗಿದೆ’ ಎಂದು ದೂರಿದರು.

ಯಡಿಯೂರಪ್ಪ ಮನೆ ಮೇಲೆ ನಡೆದ ದಾಳಿ ಹಿಂದೆ ಕಾಂಗ್ರೆಸ್‌ ಕೈವಾಡವಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, “ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲಾಗಿತ್ತು. ಈಗ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಯಡಿಯೂರಪ್ಪ ಅವರ ಮನೆಗೆ ಹೋಗಿ ಅವರ ಜತೆ ಉತ್ತಮ ಸಂಬಂಧ ಹೊಂದಿರುವಂತೆ ತೋರಿಸಿಕೊಳ್ಳಲು ಯತ್ನಿಸುತ್ತಿ¨ªಾರೆ. ಆ ಮೂಲಕ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲಾಗಿದೆ ಎಂಬುದನ್ನು ಅವರು ಒಪ್ಪಿಕೊಂಡಿ¨ªಾರೆ. ನಾನು ಈಗ ಆ ವಿಚಾರದ ಬಗ್ಗೆ ಚರ್ಚೆ ಮಾಡುವುದಿಲ್ಲ’ ಎಂದರು.

ಬಿಜೆಪಿಯ ಕೈವಾಡ: ಸಿದ್ದು
ಬೆಂಗಳೂರು: ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ತೂರಿರುವುದರ ಹಿಂದೆ ಬಿಜೆಪಿಯದೇ ಕೈವಾಡ ಇರಬಹುದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿ, ಈ ಬಗ್ಗೆ ಯಡಿಯೂರಪ್ಪ ಅವರು ಬಂಜಾರ ಸಮುದಾಯದ ಜನ ತಪ್ಪು ಗ್ರಹಿಕೆಯಿಂದ ಕಲ್ಲು ತೂರಾಟ ಮಾಡಿದ್ದಾರೆ ಎಂದಿದ್ದಾರೆ, ಆದರೆ ಒಳಮೀಸಲಾತಿಯನ್ನು ಬಂಜಾರ ಸಮುದಾಯ ಮೊದಲಿಂದಲೂ ವಿರೋಧ ಮಾಡಿಕೊಂಡು ಬಂದಿದೆ, ಈ ಉದ್ದೇಶಕ್ಕೆ ಈಗ ವಿರೋಧ ಮಾಡಿರಬಹುದು ಎಂದು ತಿಳಿಸಿದರು.

ಯಾರೋ ಕೆಲವರ ತಪ್ಪು ತಿಳಿವಳಿಕೆಯಿಂದ ಪ್ರಚೋದನೆ
ಶಿಕಾರಿಪುರ: ಯಡಿಯೂರಪ್ಪ ನಿವಾಸದ ಮೇಲೆ ನಡೆದ ದಾಳಿ ಅತ್ಯಂತ ದುರದೃಷ್ಟಕರ. ಯಾರೋ ಕೆಲವರು ತಪ್ಪು ತಿಳಿವಳಿಕೆಯಿಂದ ಪ್ರಚೋದನೆಗೆ ಒಳಗಾಗಿ ಈ ಕೃತ್ಯ ನಡೆಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Advertisement

ಮಾಜಿ ಸಿಎಂ ಯಡಿಯೂರಪ್ಪ ನಿವಾಸದ ಮೇಲೆ ದಾಳಿ ನಡೆದ ಘಟನೆಗೆ ಸಂಬಂಧಿ ಸಿದಂತೆ ಪಟ್ಟಣಕ್ಕೆ ಮಂಗಳವಾರ ಭೇಟಿ ನೀಡಿ ಸಂಸದ ರಾಘವೇಂದ್ರ ಹಾಗೂ ಎಸ್ಪಿ ಜೆ.ಕೆ.ಮಿಥುನ್‌ ಕುಮಾರ್‌ ಜತೆ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ತೂರಿದ ಘಟನೆಯಲ್ಲಿ ಪೊಲೀಸರ ವೈಫಲ್ಯ ಇಲ್ಲ. ಪ್ರತಿಭಟನೆಯಲ್ಲಿ ಪಾಲ್ಗೊಂಡವರ ಮೇಲೆ ಏಕಾಏಕಿ ಲಾಠಿಯಿಂದ ಹೊಡೆದರೆ ಸರಿಯಾಗುವುದಿಲ್ಲ. ಹೆದರಿಸಿದರೆ ಹೋಗುತ್ತಾರೆ ಎಂದು ಪೊಲೀಸರು ತಾಳ್ಮೆ ವಹಿಸಿದ್ದಾರೆ. ಆದರೆ ರೌಡಿ ಲಿಸ್ಟ್‌ನಲ್ಲಿ ಇದ್ದವರು ಈ ಪ್ರತಿಭಟನೆಯ ದುರುಪಯೋಗ ಪಡಿಸಿಕೊಂಡಿದ್ದಾರೆ. ಕೆಲವರು ದೊಂಬಿ ಎಬ್ಬಿಸಿ ಕಾನೂನು ಕೈಗೆ ತೆಗೆದುಕೊಂಡಿದ್ದಾರೆ ಪೊಲೀಸರಿಗೆ ಕಲ್ಲು ತೂರಿ ಗಾಯಗೊಳಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಒಕ್ಕಲಿಗ, ಲಿಂಗಾಯತ, ಕುರುಬರ ಮೀಸಲಾತಿ ಕಿತ್ತು ಮುಸ್ಲಿಮರಿಗೆ ಕೊಡುವಿರಾ?
ಬೆಂಗಳೂರು : ನಾವು ಅಧಿಕಾರಕ್ಕೆ ಬಂದರೆ ಈಗ ಜಾರಿಗೆ ತಂದಿರುವ ಮೀಸಲಾತಿ ರದ್ದು ಮಾಡುತ್ತೇವೆ ಎಂದು ಕಾಂಗ್ರೆಸ್‌ ನಾಯಕರು ನೀಡಿರುವ ಹೇಳಿಕೆಗೆ ಬಿಜೆಪಿಯಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದ್ದು, ಒಕ್ಕಲಿಗ, ಲಿಂಗಾಯತ, ಕುರುಬ ಸೇರಿದಂತೆ ಯಾವ ಸಮುದಾಯಕ್ಕೆ ನೀಡಿರುವ ಮೀಸಲು ಸೌಲಭ್ಯ ಕಿತ್ತು ಮುಸ್ಲಿಮರಿಗೆ ನೀಡುತ್ತೀರಿ ಎಂದು ಸಂಸದ ತೇಜಸ್ವಿಸೂರ್ಯ ಪ್ರಶ್ನೆ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ಸಮುದಾಯದ ವಿರುದ್ಧ ಕಾಂಗ್ರೆಸ್‌ಗೆ ಯಾಕಿಷ್ಟು ಆಕ್ರೋಶ ? ಹಿಂದುಳಿದವರ ಮೀಸಲಾತಿ ಹಕ್ಕನ್ನು ಕಿತ್ತುಕೊಂಡು ಮುಸ್ಲಿಂರಿಗೆ ನೀಡಿದ್ದು ಕಾಂಗ್ರೆಸ್‌ನ ತುಷ್ಟಿಕರಣ ನೀತಿಯ ಭಾಗ. ಆದರೆ ಬಿಜೆಪಿ ದಲಿತ ಹಾಗೂ ಹಿಂದುಳಿದ ಸಮುದಾಯಕ್ಕೆ ನ್ಯಾಯ ನೀಡಿದೆ. ಹಿಂದೆಂದೂ ಆಗದ ಐತಿಹಾಸಿಕ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿದೆ ಎಂದು ಹೇಳಿದರು.

ನಮ್ಮ ಸರ್ಕಾರ ಜಾರಿಗೊಳಿಸುತ್ತಿರುವ ಸಾಮಾಜಿಕ ನ್ಯಾಯದ ಈ ಮಹತªವ ನಿರ್ಧಾರವನ್ನು ಕಾಂಗ್ರೆಸ್‌ ವಿರೋಧಿಸುತ್ತಿರುವುದು ಅಚ್ಚರಿ ಸೃಷ್ಟಿಸಿದೆ. ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಒಕ್ಕಲಿಗ ಹಾಗೂ ಲಿಂಗಾಯತರಿಗೆ ಕೊಟ್ಟಿರುವ ಮೀಸಲಾತಿಯನ್ನು ವಿರೋಧಿಸುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ಮತ್ತೆ ಅದನ್ನು ಜಾರಿಗೆ ತರುತ್ತೇವೆ ಎಂದು ಹೇಳಿದ್ದಾರೆ. ಇದು ಆ ವರ್ಗಕ್ಕೆ ಮಾಡುವ ಘೋರ ಅನ್ಯಾಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಸಿಎಂ ಬೊಮ್ಮಾಯಿ ಎಲ್ಲರಿಗೂ ಸಮಾಧಾನಕರ ರೀತಿಯಲ್ಲಿ ಮೀಸಲಾತಿ ನೀಡಿದ್ದರೂ ಕಾಂಗ್ರೆಸ್‌ ರಾಜಕೀಯ ಮಾಡಲು ಮುಂದಾಗಿದೆ. ಪ್ರಚೋದನಕಾರಿ ಯತ್ನ ನಡೆಸಿದೆ. ಮೀಸಲು ವಿಚಾರದಲ್ಲಿ ಬಂಜಾರ, ಭೋವಿ ಇನ್ನಿತರ ಸಮಾಜಗಳಿಗೆ ಗೊಂದಲ ಹಾಗೂ ತಪ್ಪು ತಿಳಿವಳಿಕೆ ಉಂಟಾಗಿದೆ.
-ಜಗದೀಶ ಶೆಟ್ಟರ, ಮಾಜಿ ಸಿಎಂ

ಬಿಜೆಪಿಗೆ ಆತಂಕ ತಂದ ಬಂಜಾರರ ಮುನಿಸು
ಶಿವಮೊಗ್ಗ ಜಿಲ್ಲೆಯಲ್ಲಿ ದಶಕಗಳಿಂದ ಬಿಜೆಪಿ ಜತೆ ಗುರುತಿಸಿಕೊಂಡಿರುವ ಬಂಜಾರ ಸಮುದಾಯ ಒಳಮೀಸಲು ವಿರುದ್ಧ ಈಗ ನಡೆಸುತ್ತಿರುವ ಹೋರಾಟ ಪಕ್ಷಕ್ಕೆ ಆತಂಕ ತಂದಿದೆ. ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಈ ಸಮುದಾಯವೇ ನಿರ್ಣಾಯಕ. ಶಿಕಾರಿಪುರದಲ್ಲಿ ಯಡಿಯೂರಪ್ಪ ಅವರನ್ನು ಆರಂಭದಿಂದಲೂ ಬೆಂಬಲಿಸಿಕೊಂಡು ಬಂದಿದೆ. ಇನ್ನೊಂದೆಡೆ ಮೀಸಲು ಕ್ಷೇತ್ರವಾಗಿರುವ ಶಿವಮೊಗ್ಗ ಗ್ರಾಮಾಂತರದಲ್ಲಿ ದಶಕಗಳಿಂದ ಬಿಜೆಪಿ ಅಧಿ ಕಾರ ಹಿಡಿಯುತ್ತಾ ಬಂದಿದೆ. ಇದರಲ್ಲಿ ಬಂಜಾರ ಸಮುದಾಯದ ಪಾತ್ರ ಕೂಡ ದೊಡ್ಡದಿದೆ.

ಶಿಕಾರಿಪುರದಲ್ಲಿ 40 ಸಾವಿರಕ್ಕೂ ಹೆಚ್ಚು ಹಾಗೂ ಶಿವಮೊಗ್ಗ ಗ್ರಾಮಾಂತರದಲ್ಲಿ 30 ಸಾವಿರಕ್ಕೂ ಹೆಚ್ಚು ಬಂಜಾರ ಮತದಾರರಿದ್ದಾರೆ. ಬಂಜಾರ ಸಮುದಾಯ ಯಡಿಯೂರಪ್ಪ ಮನೆ ಮೇಲೆ ಕಲ್ಲು ಹೊಡೆಯುವಷ್ಟು ಮುಂದುವರೆದಿದ್ದು ಇದೇ ಮೊದಲು. ಈ ಸಮುದಾಯ ಕೈಕೊಟ್ಟರೆ ಎರಡು ಕ್ಷೇತ್ರದಲ್ಲೂ ಬಿಜೆಪಿಗೆ ಕಷ್ಟವಾಗಬಹುದು. ಬಂಜಾರರ ಅಸಮಾಧಾನವನ್ನು ಮತಬ್ಯಾಂಕ್‌ ಆಗಿ ಪರಿವರ್ತಿಸಿಕೊಳ್ಳಲು ಕಾಂಗ್ರೆಸ್‌-ಜೆಡಿಎಸ್‌ ಯತ್ನಿಸುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next