ಕುಷ್ಟಗಿ: ಇಲ್ಲಿನ ವನ್ಯಜೀವಿ ಛಾಯಾಗ್ರಾಹಕ ವಿನಯ್ ಕಂದಕೂರ ಅವರು ಇದೇ ಮೊದಲ ಬಾರಿಗೆ ಕೊಳಕು ಮಂಡಲ (Russell’s viper) ವಿಷ ಜಾತಿಯ ಹಾವನ್ನು ಸುರಕ್ಷಿತ ಕಾರ್ಯಾಚರಣೆಯಲ್ಲಿ ಹಿಡಿದು ನಿರ್ಜನ ಪ್ರದೇಶಕ್ಕೆ ಬಿಟ್ಟು ಉರಗ ಪ್ರೇಮ ಮೆರೆದಿದ್ದಾರೆ. ಇವರ ಮೊದಲ ಹಾವು ಹಿಡಿಯುವ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಇಲ್ಲಿನ ಬೃಂದಾವನ ಹೋಟಲ್ ಪಕ್ಕದ ಯಾಶೀನ್ ಕಾರು ಗ್ಯಾರೇಜ್ ಗೆ ತಮ್ಮ ಕಾರು ಸರ್ವಿಸ್ ಗೆ ಒಮ್ಮೆ ಬಂದಿದ್ದರು. ಕಾರಿನ ಮಿರರ್ ಗ್ಲಾಸ್ ನಲ್ಲಿ ಕೊಳಕು ಮಂಡಲ ಹಾವು ಬಿಲ ಸೇರುವುದನ್ನು ಕಂಡಿದ್ದರು. ಗ್ಯಾರೇಜ್ ಮಾಲೀಕನಿಗೆ ಇನ್ನೊಮ್ಮೆ ಹಾವು ಕಂಡಲ್ಲಿ ನನಗೆ ತಿಳಿಸು ಯಾವುದೇ ಕಾರಣಕ್ಕೂ ಕೊಲ್ಲಬೇಡ, ಅದಕ್ಕೆ ತೊಂದರೆ ಕೊಡಬೇಡ ಎಂದು ಸಲಹೆ ನೀಡಿದ್ದರು. ಇದಕ್ಕೆ ಮರು ಮಾತಿಲ್ಲದೆ ಒಪ್ಪಿದ್ದ ಕಾರು ಮಾಲೀಕನಿಗೆ ಗುರುವಾರ ಈ ಹಾವು ಇದ್ದಕ್ಕಿದ್ದಂತೆ ದರ್ಶನವಾಗಿದೆ.
ತಡ ಮಾಡದೇ ವಿನಯ್ ಕಂದಕೂರ್ ಗೆ ಮಾಹಿತಿ ನೀಡಿದ್ದರು.
ಕೆಲಸದ ಒತ್ತಡವಿದ್ದರೂ ಕೂಡಾ ಕೊಳಕು ಮಂಡಲ ಹಾವಿನ ಸಂರಕ್ಷಣೆಗೆ ಸುರಕ್ಷಿತ ಸಾಧನಗಳೊಂದಿಗೆ ಬುಸಗುಡುವ ಹಾವನ್ನು ತೊಂದರೆ ನೀಡದೇ ಸಲೀಸಾಗಿ ರಟ್ಟಿನ ಪೆಟ್ಟಿಗೆಯಲ್ಲಿ ಹಾಕಿದ್ದಾರೆ. ನಂತರ ಪೆಟ್ಟಿಗೆಯನ್ನು ಚೀಲದಲ್ಲಿ ತುಂಬಿಸಿ ಹೊಸಪೇಟೆ ರಸ್ತೆಯ ನಿರ್ಜನ ರಸ್ತೆಯ ಬಳಿ ಬಿಟ್ಟು ಬಂದಿದ್ದಾರೆ. ತೀರ ವಿಷಕಾರಿ ಹಾವನ್ನು ಯಾವುದೇ ಅಂಜಿಕೆ ಇಲ್ಲದೇ ಅಳಕು ಇಲ್ಲದೇ ಮೊದಲ ಪ್ರಯತ್ನದಲ್ಲಿ ವಿನಯ್ ಕಂದಕೂರು ಯಶಸ್ವಿಯಾಗಿದ್ದಾರೆ.
Related Articles
ಉರಗ ರಕ್ಷಕ ಯೂಟ್ಯೂಬರ್ ಪ್ರೇರಣೆ
ವಿನಯ್ ಕಂದಕೂರು ಅವರಿಗೆ ಸುಜಿತ್ ಶೆಟ್ಟರ್ ತೋಟದಲ್ಲಿ ಹಸಿರು ಹಾವು ಹಿಡಿಯಲು ಯತ್ನಿಸಿದಾಗ ಮಿಸ್ ಆಗಿತ್ತು. ಕೊಳಕು ಮಂಡಲ ಹಾವು ಹಿಡಿಯುವ ಕಾರ್ಯಾಚರಣೆ ಯಶಸ್ವಿಗೆ ಅವರು ಸಂಭ್ರಮಿಸಿದ್ದು ಹಾವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಟ್ಟಿರುವುದಕ್ಕೆ ಖುಷಿಯಾಗಿದೆ ಎಂದು ತಿಳಿಸಿದ್ದಾರೆ.
ಯಾಸೀನ್ ಗ್ಯಾರೇಜ್ ನಲ್ಲಿ ಹಾವು ಠಿಕಾಣಿ ಹಾಕಿರುವುದು ಗಮನಿಸಿದರೆ ಹಾವು ಮರಿ ಹಾಕಿರುವ ಸಂಭವ ಇದೆ. ಮರಿ ಹಾವುಗಳು ಕಂಡರೂ ನನಗೆ ತಿಳಿಸಲು ಹೇಳಿರುವುದಾಗಿ ವಿನಯ್ ಕಂದಕೂರು ತಿಳಿಸಿದ್ದಾರೆ. ವಿನಯ್ ಕಂದಕೂರ ಅವರಿಗೆ ಅವರಿಗೆ ಸ್ನೇಕ್ ಶ್ಯಾಮ್, ಹೊಸಪೇಟೆಯ ಸ್ನೇಹಿತ ಅಸ್ಲಾಂ ಸೇರಿದಂತೆ ಸುರಕ್ಷಿತ ಹಾವು ಹಿಡಿಯುವ ಯೂಟ್ಯೂಬರ್ ಗಳಿಂದ ಸುರಕ್ಷಿತ ಹಾವು ಹಿಡಿಯುವುದು ನೋಡಿದ್ದೆ. ಇವತ್ತು ಪ್ರಾಯೋಗೀಕವಾಗಿ ಯಶಸ್ವಿಯಾಗಿದ್ದೇನೆ ಎಂದು ಉದಯವಾಣಿ ವೆಬ್ ನ್ಯೂಸ್ ಪ್ರತಿನಿಧಿಗೆ ಮಾಹಿತಿ ನೀಡಿದರು.