Advertisement

ಕುಷ್ಟಗಿ: ಪಾಳು ಬಾವಿಗೆ ಬಿದ್ದ ಕತ್ತೆ ಕಿರುಬ ರಕ್ಷಣೆ

12:05 PM Sep 12, 2022 | Team Udayavani |

ಕುಷ್ಟಗಿ: ಅಹಾರ ಹುಡುಕಾಟದಲ್ಲಿ ಪಾಳುಬಾವಿಯಲ್ಲಿ ಬಿದ್ದು ಕಂಗಾಲಾಗಿದ್ದ ಕತ್ತೆ ಕಿರುಬ (ಹೈನಾ) ವನ್ಯಜೀವಿಯನ್ನು ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ಕಾರ್ಯಾಚರಣೆಯಿಂದ ಜೀವಂತ ರಕ್ಷಿಸಿ ಮಾನವೀಯತೆ ಮೆರೆದ ಘಟನೆ ಕುಷ್ಟಗಿ ತಾಲೂಕು ಕಬ್ಬರಗಿ ಗ್ರಾಮದಲ್ಲಿ ನಡೆದಿದೆ.

Advertisement

ತಾಲೂಕಿನ ಕಬ್ಬರಗಿ ಸೀಮಾದ ರೈತ ಭೀಮಪ್ಪ ಯಮನಪ್ಪ ವಜ್ಜಲ ಇವರ ಜಮೀನಿನ ಪಾಳು ಬಾವಿಯಲ್ಲಿ ಕತ್ತೆ ಕಿರುಬ ಕಾಲು ಜಾರಿ ಬಿದ್ದಿರುವುದು ಗಮನಕ್ಕೆ ಬಂದಿದೆ. ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ಠಾಣಾ ಸಿಬ್ಬಂದಿ ಸದರಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.

ಆರಂಭದಲ್ಲಿ ಅಗ್ನಿಶಾಮಕ ಸಿಬ್ಬಂದಿ ಹಂದಿ ಬಲೆ ಸಹಾಯದಿಂದ ಹುಕ್ಕು ಬಳಸಿ ಬಾವಿಯಿಂದ ಮೇಲೆಕ್ಕೆತ್ತುವ ಕಾರ್ಯಾಚರಣೆ ನಡೆಸಲು ತೀರ್ಮಾನಿಸಿದ್ದರು. ಈ ರೀತಿ ಕಾರ್ಯಾಚರಣೆ ಫಲಿಸುವುದಿಲ್ಲ, ಪ್ರಾಣಿಗೆ ಅಪಾಯದ ಸಾದ್ಯತೆ ಇರುವ ಹಿನ್ನೆಲೆಯಲ್ಲಿ ಗದಗ ಬಿಂಕದಕಟ್ಟಿ ಮೃಗಾಲಯದ ಅರವಳಿಕೆ ತಜ್ಞ ಡಾ. ನಿಖಿಲ್ ಅವರನ್ನು ಕರೆಯಿಸುವ ಕ್ರಮವನ್ನು ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಚೈತ್ರಾ ಮೆಣಸಿನಕಾಯಿ ಕ್ರಮ ಕೈಗೊಂಡರು.

ತೆರದ ಪಾಳು ಬಾವಿಯಲ್ಲಿಯೇ ಮಳೆಯಲ್ಲಿ ನೆನೆದು ಕಂಗಾಲಾಗಿದ್ದ ಕತ್ತೆ ಕಿರುಬ ಪ್ರಾಣಿಗೆ ಡಾ. ನಿಖಿಲ ಅರವಳಿಕೆ ಅವರಿಂದ ಚುಚ್ಚುಮದ್ದು ನೀಡಿ ಪ್ರಜ್ಞೆ ತಪ್ಪಿಸಲಾಯಿತು. ನಂತರ ಸ್ಟೇಚರ್ ಬಾವಿಯಲ್ಲಿ ಇಳಿಸಿ, ಪ್ರಜ್ಞಾಹೀನ ಕತ್ತೆ ಕಿರುಬ ಪ್ರಾಣಿಯನ್ನು ಸುರಕ್ಷಿತವಾಗಿ ಮೇಲಕ್ಕೆ ಎತ್ತಲಾಯಿತು.

ನಂತರ ಪ್ರಾಥಮಿಕ ಚಿಕಿತ್ಸೆ ನೀಡಿ ಗದಗ ಸಮೀಪದ ಬಿಂಕದಕಟ್ಟಿ ಮೃಗಾಲಯಕ್ಕೆ ಬೋನ್ ನಲ್ಲಿ‌ ಕೊಂಡೊಯ್ಯಲಾಯಿತು. ನಿರಂತರ ಮಳೆಯಲ್ಲಿ ಎರಡ್ಮೂರು ತಾಸಿಗೂ ಅಧಿಕ ನಡೆದ ಕಾರ್ಯಾಚರಣೆಯಲ್ಲಿ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಚೈತ್ರಾ ಮೆಣಸಿನಕಾಯಿ, ಅಗ್ನಿ ಶಾಮಕ ಠಾಣಾಧಿಕಾರಿ ರಾಜು ಎನ್. ಸೇರಿದಂತೆ ಅರಣ್ಯಾಧಿಕಾರಿಗಳು, ಅಗ್ನಿ ಶಾಮಕ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Advertisement

ಕುಷ್ಟಗಿ ತಾಲೂಕಿನ ಹನುಮಸಾಗರ ವಲಯದ ಕಬ್ಬರಗಿ ಹಾಗೂ ತಾವರಗೇರಾ ವಲಯದ ಕುಮಾರಖೇಡ್ ಪ್ರದೇಶದಲ್ಲಿ ವನ್ಯಜೀವಿ ಕತ್ತೆ ಕಿರುಬಗಳಿವೆ. ಇವು ಒಂಟಿಯಾಗಿ ಸಂಚರಿಸುವುದಿಲ್ಲ. ಗುಂಪಾಗಿ ಸಂಚರಿಸುತ್ತಿವೆ.

ರಕ್ಷಿತಾರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಊರಿನಲ್ಲಿರುವ ನಾಯಿ ಇಲ್ಲವೇ ಸತ್ತ ಪ್ರಾಣಿಗಳ ಅಹಾರಕ್ಕಾಗಿ ಅಲೆಯುತ್ತಿರುತ್ತವೆ. ಕತ್ತೆ ಕಿರುಬಗಳು ಅಹಾರ ಹುಡುಕುತ್ತಿರುವಾಗ ಒಂದು ಕತ್ತೆ ಕಿರುಬ ತೆರೆದ ಬಾವಿಯಲ್ಲಿ ಬಿದ್ದಿದೆ. ಈ ಬಾವಿಯನ್ನು ಕಲ್ಲಿನಲ್ಲಿ ಕಟ್ಟಿದ್ದರಿಂದ ಕತ್ತೆಕಿರುಬಕ್ಕೆ  ಮೇಲಕ್ಕೆ ಹತ್ತಲು ಸಾಧ್ಯವಾಗಿಲ್ಲ ಎಂದು ಉಪ ವಲಯ ಅರಣ್ಯಾಧಿಕಾರಿ ಶಿವಶಂಕರ್‌ ಯಾವಣಕಿ‌ ಮಾಹಿತಿ ನೀಡಿದರು. ಅಪರೂಪದ ವನ್ಯಜೀವಿ ಕತ್ತೆ ಕಿರುಬ ಪ್ರಾಣಿಯನ್ನು ಜೀವಂತವಾಗಿ ರಕ್ಷಿಸಿದ ಅರಣ್ಯ ಇಲಾಖೆ, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಗೆ ವನ್ಯಜೀವಿ ಪ್ರೇಮಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next